ಕುಮಟಾ: ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ಅದು ರಕ್ಷಾ ಬಂಧನ ( Raksha Bandhan) . ಅನಾದಿ ಕಾಲದಿಂದಲೂ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ರಕ್ಷಾ ಬಂಧನ ಹಬ್ಬಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆಗಳಿವೆ. ಅದೇ ರೀತಿ ಈ ವರ್ಷ ರಕ್ಷಾ ಬಂಧನ ಸಿದ್ಧತೆ ಜೋರಾಗಿದ್ದು, ಸಹೋದರಿಯರು ಮಾರುಕಟ್ಟೆಗೆ ಆಗಮಿಸಿ ರಾಕಿಯನ್ನು ಖರೀದಿಸುವಲ್ಲಿ ನಿರತರಾಗಿರುವ ದೃಶ್ಯ ಎಲ್ಲೆಡೆ ಕಂಡುಬoದಿದೆ.
ಹಿಂದೂ ಧರ್ಮದಲ್ಲಿ ಅತ್ಯಂತ ವಿಶೇಷವಾದ ಹಬ್ಬಗಳಲ್ಲಿ ರಕ್ಷಾ ಬಂಧನವು (Raksha Bandhan) ಸಹ ಒಂದಾಗಿದ್ದು, ಕುಮಟಾ ತಾಲೂಕಿನಲ್ಲಿಯೂ ಇದರ ತಯಾರಿ ಜೋರಾಗಿ ಸಾಗಿದೆ. ಕರೋನಾ ಬಳಿಕ ಹಬ್ಬ ಹರಿದಿನಗಳಿಗೆ ಸಾರ್ವಜನಿಕರು ನೀಡುವ ಆದ್ಯತೆ ಅತ್ಯಂತ ಕಡಿಮೆಯಾಗಿದ್ದು, ಮೊದಲಿಗೆ ಹೋಲಿಸಿದರೆ ರಕ್ಷಾ ಬಂಧನ ಕಳೆಗುಂದಿದೆ ಎಂದೇ ಹೇಳಬಹುದು. ಹಬ್ಬಗಳ ಕುರಿತಾಗಿ ಮೊದಲಿನ ಉತ್ಸಾಹ ಇಂದಿನ ದಿನದಲ್ಲಿ ಇಲ್ಲವಾಗಿದ್ದು, ಆದರೂ ಕೆಲವರು ಮೊದಲಿನಂತೆ ಉತ್ಸಾಹದಿಂದ ಹಬ್ಬಗಳನ್ನು ಆಚರಿಸುವುದು ಕಾಣಬಹುದು. ಒಟ್ಟಿನಲ್ಲಿ ಕುಮಟಾ ಪಟ್ಟಣದ ಕೆಲ ಅಂಗಡಿಗಳು ವಿವಿಧ ಬಗೆಯ ರಾಖಿಗಳಿಂದ ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ.
ಇಲ್ಲಿ ವ್ಯಾಪಾರ ಮಾಡಲಾಗುತ್ತಿರುವ ಎಲ್ಲಾ ರಾಖಿಗಳು ಕೂಡ ಸ್ವದೇಶಿಯದ್ದೇ ಆಗಿದೆ. ಚೀನಾದಿಂದ ಆಮದುಮಾಡಿಕೊಂಡು ರಾಖಿಗಳನ್ನು ವ್ಯಾಪಾರಮಾಡುತ್ತಿಲ್ಲ. ರಾಜಸ್ಥಾನ, ಗುಜರಾತ ಮುಂತಾದ ಭಾಗದಿಂದ ರಾಖಿಗಳನ್ನು ತಂದು ಇಲ್ಲಿಯೇ ಅವುಗಳನ್ನು ಪ್ಯಾಕೇಟ್, ಬಾಕ್ಸ್ ಮುಂತಾದವುಗಳಾಗಿ ವಿಂಗಡಿಸಿ ವಿವಿದ ಬೆಲೆ ನಿಗದಿಪಡಿಸಿ ವ್ಯಾಪಾರ ಮಾಡಲಾಗುತ್ತಿದೆ. ಸಾವಿರಾರು ಬಗೆಯ ರಾಖಿಗಳ ಸಂಗ್ರಹ ಮಾಡಿಡಲಾಗಿದ್ದು, ಸಾರ್ವಜನಿಕರು ಆಕರ್ಷಿತರಾಗಿ ಖರೀದಿಯಲ್ಲಿ ಮುಗಿಬಿದ್ದ ದೃಷ್ಯ ಕಂಡುಬoದಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ