ಮುಂದುವರಿದ ಕಳ್ಳ-ಪೊಲೀಸ್ ಆಟ! ಡೋರ್ ಲಾಕ್ ಮುರಿದು ಒಳ ನುಗ್ಗಿದ ಕಳ್ಳರು

ಅಂಕೋಲಾ: ತಾಲೂಕಿನಲ್ಲಿ ಕಳ್ಳ – ಪೋಲೀಸ್ ಆಟ ಮುಂದುವರೆದಂತಿದ್ದು, ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಕಳ್ಳರು ಬೈಕ್ ಕಳವು ಮತ್ತು ಮನೆಗಳ್ಳತನದ ಮೂಲಕ ತಮ್ಮ ಕೈಚಳಕ ತೋರಿಸಿದರೆ, ಅವರ ಬೆನ್ನು ಬಿದ್ದ ಪೊಲೀಸರು ಇತ್ತೀಚೆಗೆ 2-3 ಕಳ್ಳರನ್ನು ವಶಕ್ಕೆ ಪಡೆದು 2-3 ಬೈಕ್ ಕಳ್ಳತನ, ಮತ್ತೆರಡು ಕಡೆ ಬೈಕ್ ಕಳ್ಳತನದ ವಿಫಲ ಯತ್ನ ಹಾಗೂ 2-3 ಮನೆಗಳ್ಳತನ ಪ್ರಕರಣ ಬೇಧಿಸಿದ್ದರು.

ಈ ನಡುವೆ ಅದಾವುದೋ ಕಳ್ಳರು ಪೊಲೀಸರಿಗೆ ಸವಾಲಸೆಯುವಂತೆ ಬಾಸಗೋಡ ಹೋಬಳಿಯ ಕೋಗ್ರೆ ವ್ಯಾಪ್ತಿಯಲ್ಲಿ ತಮ್ಮ ಕರಾಮತ್ತು ಮುಂದುವರೆಸಿದಂತೆ ಕಂಡು ಬಂದಿದ್ದು,ಇತ್ತೀಚೆಗೆ ಮಂಜುಗುಣಿ ಮುಖ್ಯ ರಸ್ತೆಯಿಂದ ಸೂರ್ವೆ ಕಡೆ ಸಾಗುವ ದಾರಿ ಮಧ್ಯೆ ರಸ್ತೆಯ ಎಡಬದಿಯಲ್ಲಿದ್ದ ನಿವೃತ್ತ ಶಿಕ್ಷಕಿಯ ಮನೆಗೆ ನುಗ್ಗಿ ,ಮನೆಯಲ್ಲಿದ್ದ ರೂ 55000 ನಗದು ಹಣ,ಬಂಗಾರದ ಕಿವಿಯೋಲೆ,ಬೆಳ್ಳಿಯ ದೀಪದ ಸಮಯಗಳು ಮತ್ತು ಲೋಟಗಳು ಸೇರಿದಂತೆ ಒಟ್ಟಾರೆ 73000 ರೂ ಅಂದಾಜು ಮೌಲ್ಯದ ಸ್ವತ್ತುಗಳನ್ನು ಕದ್ದು ಪರಾರಿಯಾಗಿದ್ದರು.

ಈ ಪ್ರಕರಣ ದಾಖಲಾಗಿ 2-3 ದಿನ ಕಳೆಯುವಷ್ಟರಲ್ಲಿ ಅದೇ ಸ್ಥಳದ ನೂರಿನ್ನೂರು ಮೀಟರ್ ಕೂಗಳತೆ ದೂರದ ಎಂ.ಎನ್. ಫಾರ್ಮನಲ್ಲಿಯ ಮತ್ತೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರಾರೋ ಡೋರ್ ಲಾಕ್ ಮುರಿದು ಒಳ ನುಗ್ಗಿರುವ ಘಟನೆ ನಡೆದಿದೆ. ಮನೆಯ ಮಾಲೀಕ ಕಡಲ ಜೀವಶಾಸ್ತ್ರ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಗಿದ್ದ ವಿ ಎನ್ ನಾಯಕ,ರವಿವಾರ ಸಂಜೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಹೋಗಿ ಮನೆಗೆ ವಾಪಸ್ ಆಗುವಷ್ಟರಲ್ಲಿ ಕಳ್ಳರು ಮನೆಗೆ ನುಗ್ಗಿ, ಕಪಾಟಗಳಲ್ಲಿರುವ ಬಟ್ಟೆ ಮತ್ತಿತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಮೂಲ್ಯ ವಸ್ತುಗಳಿಗೆ ತಡಕಾಡಿದಂತಿದೆ.

ಸುದೈವವಶಾತ್ ಮನೆಯಲ್ಲಿ ನಗದು ಮತ್ತು ಬಂಗಾರ ವಿಡದೇ ಮನೆಯವರು ಮುಂಜಾಗ್ರತೆ ವಹಿಸಿದ್ದರಿಂದ, ದೊಡ್ಡ ಮನೆಗೆ ನುಗ್ಗಿದ್ದ ಕಳ್ಳರಿಗೆ ಅವರಂದುಕೊಂಡಿರಬಹುದಾದಂತೆ ನಗ-ನಾಣ್ಯ ಸಿಗಲಿಲ್ಲವೇ ಎನ್ನಲಾಗಿದೆ. ಆದರೂ ಮನೆಯಲ್ಲಿರುವ ಬೆಳ್ಳಿ ವಸ್ತುಗಳು ಹಾಗೂ ಕಾಗದಪತ್ರ ಮತ್ತಿತರ ಅಮೂಲ್ಯ ವಸ್ತುಗಳು ಕಳ್ಳತನವಾಗಿ ದೆಯೇ ಎಂಬ ಬಗ್ಗೆ ಪೊಲೀಸ್ ದೂರು ದಾಖಲಾದ ಬಳಿಕವಷ್ಟೇ ಈ ಕುರಿತು ಮಾಹಿತಿ ತಿಳಿದು ಬರಬೇಕಾಗಿದೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿವೃತ್ತ ಶಿಕ್ಷಕಿ ಮನೆಗಳ್ಳತನ ಮತ್ತು ಎಂ.ಎನ್. ಫಾರ್ಮ ನಲ್ಲಿರುವ ಮನೆಗೆ ಕಳ್ಳರು ನುಗ್ಗಿರುವ ಈ ಎರಡೂ ಘಟನೆಗಳಲ್ಲಿ ಮನೆಯವರು ಯಾರು ಇಲ್ಲದ್ದನ್ನೂ ನೋಡಿಯೇ ಕಳ್ಳತನ ಮಾಡಿರುವ ಸಾಧ್ಯತೆಯ ಹಿಂದೆ ಸ್ಥಳೀಯರ ಕೈವಾಡವು ಇದೆಯೇ ? ಮನೆಯವರು ಯಾವಾಗ ಬರುತ್ತಾರೆ ಯಾವಾಗ ಚಾವಿ ಹಾಕಿ ಹೊರ ಹೋಗುತ್ತಾರೆ ಎಂಬಿತ್ಯಾದಿ ಚಲನವಲನ ಗಮನಿಸಿದವರೇ ಈ ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆ ಕೇಳಿಬಂದಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿ ,ಕೃತ್ಯದಲ್ಲಿ ಭಾಗಿಯಾದವರ ಪತ್ತೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದೇ ವೇಳೆ ಸಾರ್ವಜನಿಕರು ತಮ್ಮ ಮನೆ ಬಿಟ್ಟು ಹೊರ ಹೋಗುವಾಗ ಅಕ್ಕ ಪಕ್ಕದವರು ಹಾಗೂ ಸಂಬಂಧಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡುವುದು,ಸಿಸಿ ಕೆಮರಾ ಕಣ್ಗಾವಲು ಅಳವಡಿಸಿಕೊಳ್ಳುವುದು,ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು, ಮತ್ತಿತರ ಮುಂಜಾಗ್ರತೆ ಕೈಗೊಳ್ಳಬೇಕಿದೆ.ಅಲ್ಲದೇ ಅಪರಿಚಿತರು ಮತ್ತು ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ, ಇನ್ನಿತರೆ ತುರ್ತು ಸಂದರ್ಭಗಳಲ್ಲಿ 112 ನಂಬರಿಗೆ ಕರೆ ಮಾಡಬಹುದಾಗಿದೆ. ಇಲ್ಲವೇ ಈ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version