Mankal Vaidya: ಸಚಿವರ ನೂತನ ಕಾರ್ಯಾಲಯ ಶುಭಾರಂಭ

ಹೊನ್ನಾವರ : ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಸಚಿವರ ಕಾರ್ಯಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ (Mankal Vaidya) ಉದ್ಘಾಟಿಸಿದರು. ಕಚೇರಿ ಉದ್ಘಾಟನೆ ಪೂರ್ವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ವೈದ್ಯ ಜೊತೆ ಧರ್ಮಪತ್ನಿ ಪುಷ್ಪಲತಾ ಅವರು ಸಹ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ನಂತರ ರಿಬ್ಬನ್ ಕತ್ತರಿಸಿ ಕಚೇರಿ ಉದ್ಘಾಟಿಸಿ,ಸಾಂಕೇತಿಕವಾಗಿ ಜನರ ಅಹವಾಲು ಸ್ವೀಕರಿಸಿದರು. ಸಚಿವರಿಗೆ ಆಪ್ತರು,ಹಿತೈಶಿಗಳು,ಪಕ್ಷದ ಮುಖಂಡರು ಅಭಿನಂಧಿಸಿದರು.

ನಂತರ ಮಾದ್ಯಮದವರೊಂದಿಗೆ ಮಾತನಾಡಿ, ಈ ಹಿಂದಿನ ಭಟ್ಕಳ ಶಾಸಕರ ಕಚೇರಿಯನ್ನು ಕುಮಟಾ ಶಾಸಕರು ಪಡೆದಿದ್ದರಿಂದ ಕಚೇರಿ ಮಾಡಲು ಈಗಾಗಲೇ 2-3ತಿಂಗಳ ವಿಳಂಬವಾಗಿದೆ,ಇದರಿಂದ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಿರಲಿಲ್ಲವಾಗಿತ್ತು. ಈ ಬಗ್ಗೆ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದರು.ಸರ್ಕಾರಿ ರಜಾ‌ದಿನ ಹೊರತುಪಡಿಸಿ ಪ್ರತಿ ದಿವಸ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಆಫೀಸ್ ತೆರೆದಿರುತ್ತದೆ. ಯಾವುದೇ ಕೆಲಸ ಇದ್ದರು ಜನತೆ ಇಲ್ಲಿ ಬಂದರೆ ಆ ಕೆಲಸ ಅವರಿಗೆ ಮಾಡಿಕೊಡುವಂತೆ ಇಲ್ಲಿ ಸಿಬ್ಬಂದಿಗಳು ಇರುತ್ತಾರೆ.ಒಂದೊಮ್ಮೆ ಅವರಿಂದ ಸಾಧ್ಯ ಆಗ್ಲಿಲ್ಲ ಅಂದರೆ ಅವರು ನನ್ನ ಗಮನಕ್ಕೆ (Mankal Vaidya) ತರುತ್ತಾರೆ.

ನಿಮ್ಮ ಕೆಲಸ ಆದಷ್ಟು ಬೇಗ ಮಾಡಿಕೊಡಲಿಕ್ಕೆ ಇಲ್ಲಿ ವ್ಯವಸ್ಥೆ ಮಾಡಿದ್ದೇನೆ. ತಿಂಗಳಿಗೊಮ್ಮೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರವಾರದಲ್ಲಿ ಒಂದು ದಿನ, ಭಟ್ಕಳದಲ್ಲಿ ಹಾಗೂ ಹೊನ್ನಾವರ ಕಚೇರಿಯಲ್ಲಿ ಒಂದು ದಿನ,ಪ್ರತಿ ಭಾನುವಾರ ಮನೆಯಲ್ಲಿ ಜನರಿಗೆ ಸ್ಪಂದಿಸಲು ಲಭ್ಯ ಇರಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ ಎಂದರು. ಪ್ರತಿ ಮೂರು ತಿಂಗಳಿಗೊಮ್ಮೆ ಕೆಡಿಪಿ KDP ಸಭೆ ಮಾಡುತ್ತೇನೆ. ಯಾವುದೇ ಕೆಲಸ ಆಗುವುದಿಲ್ಲ ಎನ್ನುವಂತದಿಲ್ಲ. ಜನರ ಎಲ್ಲಾ ಕೆಲಸನು ಮಾಡಿಕೊಡಲು ಸಾಧ್ಯ ಇದೆ,ಖಂಡಿತ ಮಾಡಿಕೊಡ್ತೀನಿ. ಸಾಮಾನ್ಯ ಜನರಿಗೆ, ಬಡವರಿಗೆ ಏನು ಮುಟ್ಟಿಸಲಿಕ್ಕೆ ಆಗುತ್ತದೆ ಅವರಿಗೆ ಮುಟ್ಟಿಸುವಂತಹ ಕೆಲಸವನ್ನ ಮಾಡುತ್ತೇನೆ. ಪಕ್ಷದ ಮುಖಂಡರು,ಕಾರ್ಯಕರ್ತರು ಸಾಮಾನ್ಯ ಜನಕ್ಕೆ,ಬಡವರ ಕೆಲಸ ಮಾಡೋ ಹಾಗೆ ಮಾಡಿ. ರಾಜಕಾರಣ ಬರುತ್ತೆ ಹೋಗುತ್ತೆ,ನಾವೇನು ಮಾಡಿದ್ದೀವಿ ಅನ್ನೊದು ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಎಂದರು.

ಕಾಂಗ್ರೆಸ್ ಪಕ್ಷ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ಬಗ್ಗೆ ವಿರೋಧ ಪಕ್ಷಗಳು ಠೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ,ವಿರೋಧಿಸುವವರು ಠೀಕೆ ಮಾಡುವವರಿಗೆ ಅದೇ ಕೆಲಸವಾಗಿದೆ.ಅವರು ಲೂಟಿಮಾಡಿ,ಸುಳ್ಳು ಹೇಳೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಅವರು ಟೀಕೆ ಮಾಡಿದ್ದು ಸಾಮಾನ್ಯ ಜನಕ್ಕೆ, ಬಡವರಿಗೆ ನೋವು ಆಗುತ್ತಿದೆ. ಇದಕ್ಕಾಗಿಯಾದರು ಅವರು ಟೀಕೆ ಮಾಡೋದು, ಬಂದ್ ಮಾಡಬೇಕು. ನಮ್ಮ ಮಕ್ಕಳಿಗೆ ಶಿಕ್ಷಣ ಕಲಿಸುವುದಕ್ಕೆ ಆಗುತ್ತದೆ ಎರಡು ಸಾವಿರ ರೂಪಾಯಿ ಆದರೂ ಕೊಟ್ಟರಲ್ಲ ಪುಣ್ಯಾತ್ಮರು ಎಂದು ಕೈ ಮುಗಿದು ಜನತೆ ನಮಗೆ ಧನ್ಯವಾದ ಹೇಳುತ್ತಿದ್ದಾರೆ ಎಂದರು.

ಮಾಜಿ ಸಚಿವ,ಹಾಲಿ ಶಾಸಕ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆ ಎನ್ನೋ ವದಂತಿ ಇದೆ ಎಂದು ಪತ್ರಕರ್ತರು ಪ್ರಶ್ನೆಗೆ ಉತ್ತರಿಸಿ, ಮನೆ ಅಂದ ಮೇಲೆ ಏನೋ ಸ್ವಲ್ಪ ವ್ಯತ್ಯಾಸ ಆಗಿ ಹೋಗಿರುತ್ತಾರೆ. ಅವರು ಬಂದಾಗ ಅಪ್ಪ, ಅಮ್ಮ ಅಥವಾ ಅಣ್ಣ,ತಮ್ಮಂದಿರು ಅಕ್ಕ, ತಂಗಿಯರು ಹೊಂದಾಣಿಕೆ ಮಾಡ್ಕೋತಾರೆ.ಏನು ಮಾಡಲಿಕ್ಕೆ ಆಗೋದಿಲ್ಲ. ಹೆಬ್ಬಾರ್ ಅವರು ಬೇರೆ ಮನೆಯಿಂದ ಬರುತ್ತಿಲ್ಲ. ಅವರ ಮನೆಯಿಂದಲೇ ಏನೋ ಒಂದು ಸ್ವಲ್ಪ ವ್ಯತ್ಯಾಸ ಆಗಿ ಹೋಗಿದ್ದರು ಎಂದು ಹಾಸ್ಯಮಯವಾಗಿ ಉತ್ತರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಗೋವಿಂದ ನಾಯ್ಕ,ಜಗದೀಪ ತೆಂಗೇರಿ, ಹೊನ್ನಪ್ಪ ನಾಯ್ಕ, ವೆಂಕಟೇಶ ನಾಯ್ಕ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ, ಮಾಜಿ ತಾಲೂಕಾ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ಹೊನ್ನಾವರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್ ಭಟ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ಸತೀಶ್ ನಾಯ್ಕ, ನಾಮಧಾರಿ ಅಭಿವೃದ್ದಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಚಂದ್ರಕಾಂತ ಕೊಚರೆಕರ್ ,ಗ್ರಾಮ ಪಂಚಾಯತ ಅಧ್ಯಕ್ಷರಾದ ಐವಿ ನಾಯ್ಕ, ಫೈಸಲ್ ಮಸ್ತನ್ ಪಕ್ಷದ ಮುಖಂಡರು,ಕಾರ್ಯರ್ತರು ಹಾಜರಿದ್ದರು.

Exit mobile version