Important
Trending

ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ: 15 ಬೈಕ್ ಗಳು ವಶಕ್ಕೆ

ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿರೋದು ಹೇಗೆ ನೋಡಿ?

ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೈಕುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕುಖ್ಯಾತ ಕಳ್ಳರನ್ನು ಬಂಧಿಸುವ ಮೂಲಕ ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು, ಅಂತರ ಜಿಲ್ಲಾ ಮೋಟಾರ್ ಬೈಕ್ ಕಳ್ಳರ ಜಾಲ ಬೇಧಿಸಿ, ಇವರಿಂದ ಕಳ್ಳತನ ಮಾಡಲಾಗಿದ್ದ 14 + 1 = 15 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

Srinivas E Vehicle

ಮನೆಗಳಿಗೆ ಟೈಲ್ಸ್ ಹಾಕುವ ಕೆಲಸ ಮಾಡುತ್ತಿರುವ ಕಲಘಟಗಿ ಗಾಂಧಿನಗರ ನಿವಾಸಿ ಹಾಲಿ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ (23 ) ಮತ್ತು ಧಾರವಾಡ ಕುಂದಗೋಳ ನಿವಾಸಿ ರವಿಚಂದ್ರ ಶಿವಪ್ಪ ತಳವಾರ (27) ಬಂಧಿತ ಆರೋಪಿಗಳಾಗಿದ್ದು ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನದ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು.

ಇವರು ಕಳೆದ ಕೆಲ ದಿನಗಳ ಹಿಂದೆ ಉಡುಪಿಯಿಂದ ಬೇರೊಂದು ಬೈಕ್ ಕಳ್ಳತನ ಮಾಡಿ ಬರುತ್ತಿದ್ದರು ಎನ್ನಲಾದ ಸಂದರ್ಭದಲ್ಲಿ, ಮಂಕಿಯಲ್ಲಿ ಬೆಳಗಿನ ಜಾವ 4 ಘಂಟೆ ಸುಮಾರಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸ್ಥಳೀಯ ಪೊಲೀಸರು , ಬೈಕ್ ತಡೆಯಲು ಮುಂದಾದಾಗ, ಬೈಕ್ ನಿಲ್ಲಿಸದೇ ಸಂಶಯಾಸ್ಪದವಾಗಿ ಚಲಾಸಿಕೊಂಡು ಹೋದವರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಮುರುಡೇಶ್ವರ, ಮಂಕಿ, ಧಾರವಾಡ ಜಿಲ್ಲೆಯ ಕಲಘಟಗಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತಿಬ್ಬರು ಆರೋಪಿಗಳಾದ ಕುಂದಗೋಳ ನಿವಾಸಿ ಸಲ್ಮಾನ್ ಇಮಾಮಸಾಬ್ ತಹಶೀಲ್ಧಾರ ಮತ್ತು ಜಗದೀಶ ಕೊಟೆಪ್ಪ ಬಂಡಿವಾಡ ಅವರೊಂದಿಗೆ ಸೇರಿ 14 ಬೈಕುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ಕಳುವು ಮಾಡಲಾಗಿದ್ದ ಸುಮಾರು 8.35 ಲಕ್ಷ ಮೌಲ್ಯದ 14 ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತರ ಮೇಲೆ ಈ ಹಿಂದೆ ಸಹ ಕಲಘಟಗಿ, ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಭಟ್ಕಳ ಡಿ.ವೈ.ಎಸ್. ಪಿ ಕೆ.ಶ್ರೀಕಾಂತ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮಾಂತರ ಸಿ.ಪಿ.ಐ ಚಂದಗೋಪಾಲ ನೇತೃತ್ವದಲ್ಲಿ ಮಂಕಿ ಪಿ.ಎಸ್. ಐ ಭರತಕುಮಾರ ,
ಮುಶಾಹಿದ್ ಅಹ್ಮದ್, ಶಿವ ಕುಮಾರ ಆರ್ ಮತ್ತು ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಕಳ್ಳತನದ ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಮಂಕಿ ಪೊಲೀಸರು ಅಂತರ್ ಜಿಲ್ಲಾ ಮೋಟಾರ್ ಬೈಕ್ ಕಳ್ಳತನ ಜಾಲ ಬೇಧಿಸಿ,ಖತರ್ನಾಕ್ ಕಳ್ಳರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಇತ್ತೀಚಿಗೆ ಅಂಕೋಲಾದಲ್ಲಿ ನಡೆದಿದ್ದ ಸಿನಿಮಾ ಮಂದಿರದ ಆವರಣದಲ್ಲಿ ನಿಲ್ಲಿಸಿಟ್ಟ ಪ್ರತ್ಯೇಕ ಬೈಕ್ ಕಳ್ಳತನ ಪ್ರಕರಣದಲ್ಲಿಯೂ ಇದೇ ಕಳ್ಳರು ಕರಾಮತ್ತು ತೋರಿಸಿರುವುದು ಬಯಲಾಗಿದೆ. ಅಂದು ಸ್ಥಳೀಯ ಹಿಂದೂಪುರ ಸಂಘಟನೆಯ ಪ್ರಮುಖನೊಬ್ಬ ಸಿನೆಮಾ ಮಂದಿರದ ಆವರಣದಲ್ಲಿ ತನ್ನ ಪಲ್ಸರ್ 220 ಬೈಕ್ ನಿಲ್ಲಿಸಿಟ್ಟು,ತೆಲುಗು ಚಿತ್ರ ನೋಡಿ ವಾಪಸ್ ಬರುವುದರೊಳಗೆ ಬೈಕ್ ಕಳ್ಳತನವಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ಕುರಿತು ಚೆಕ್ಸ್ ಅಂಗಿ ತೊಟ್ಟು ರೊಯ್ಯನೆ ಬೈಕ್ ಸವಾರಿ ಮಾಡಿದವನಾರು? ಅದೇ ಬೈಕ್ ಸವಾರ ಅಗಸೂರು ಬಳಿ ಪೆಟ್ರೋಲ್ ತುಂಬಿಸಿ ಯಲ್ಲಾಪುರ ಮಾರ್ಗವಾಗಿ ತೆರಳಿರಬಹುದು ಎಂದು ಸ್ಥಳೀಯರ ಕೆಲ ಮಾಹಿತಿ ಆಧರಿಸಿ ವಿಸ್ಮಯ ವಾಹಿನಿ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದಾಗಿದೆ. ಅಂತೂ ಇಂತೂ ಕೊನೆಗೂ ಕಳ್ಳರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ,ಒಟ್ಟು 15 ಬೈಕ್ ಗಳನ್ನು ವಶಪಡಿಸಿಕೊಂಡಿರುವ ಇಲಾಖೆಗೆ ಅದರಲ್ಲಿಯೂ ವಿಶೇಷವಾಗಿ ಮಂಕಿ ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿದೆ.

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button