Follow Us On

WhatsApp Group
Focus News
Trending

ಮಳೆ ಇಲ್ಲದೆ ಕಂಗಾಲು: ಬರ ಪ್ರದೇಶ ಘೋಷಣೆಗೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ

ಇಡೀ ರಾಜ್ಯವನ್ನು ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಿ

ಅಂಕೋಲಾ : ಜಿಲ್ಲೆ ಸೇರಿದಂತೆ ರಾಜ್ಯನ್ನು ಬರ ಪ್ರದೇಶ ಎಂದು ಸಾರಲು ಹಾಗೂ ಪರಿಹಾರ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದ ಎಲ್ಲಾ ಕಡೆ ಬರಗಾಲ ಆವರಿಸಿದೆ. ಜೂನ್ ನಲ್ಲಿ ಬಹಳ ವಿಳಂಬವಾಗಿ ಪ್ರಾರಂಭವಾದ ಮುಂಗಾರು ಜುಲೈ ನಂತರ ಇಲ್ಲಿಯವರೆಗೆ ಸತತ ಒಂದೂವರೆ ತಿಂಗಳಗಳ ಕಾಲ ಮಳೆ ಬೀಳದೇ ರೈತರನ್ನು ಹಾಗೂ ಗ್ರಾಮೀಣ ಜನತೆಯನ್ನು ವಿಪರೀತ ಕಷ್ಟಕ್ಕೆ ಸಿಲುಕಿಸಿದೆ.

ಏಕಕಾಲದಲ್ಲಿ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶ ಹೀಗೆ ಎಲ್ಲಾ ಕಡೆ ಬರಗಾಲ ಆವರಿಸಿದೆ. ರಾಜ್ಯದ ಅಣೆಕಟ್ಟು ಗಳಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇದ್ದು, ನದಿ ನೀರಿನ ಬಳಕೆ ಸಂಬಂದ ಆತಂಕಗಳು ಉಂಟಾಗಿವೆ.
ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಇಡೀ ರಾಜ್ಯವನ್ನು ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಿ, ಸಮರೋಪಾದಿಯಲ್ಲಿ ಬರಗಾಲ ಪರಿಹಾರ ಹಮ್ಮಿಕೊಳ್ಳಲು ಮೀನಾಮೇಷ ಎಣಿಸುತ್ತಿವೆ.

ಬರಗಾಲ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳು ರಾಜ್ಯ ಸರ್ಕಾರದ ಕೈ ಕಟ್ಟಿ ಹಾಕಿದೆ ಎಂದು ರಾಜ್ಯ ಸರ್ಕಾರದ ಕಂದಾಯ ಮಂತ್ರಿ ಶ್ರೀ ಕೃಷ್ಣ ಭೈರೇಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದರೆ, ಇನ್ನೊಂದು ಕಡೆ ಕರ್ನಾಟಕದ ಬರ ಪರಿಸ್ಥಿತಿ ತನಗೆ ಏನೂ ಸಂಬಂಧವಿಲ್ಲ ಎಂಬಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸಂಸದರು ವರ್ತಿಸುತ್ತಿದ್ದಾರೆ. ಹೀಗೆ ಹಿಂದೆಂದೂ ಇಲ್ಲದಷ್ಟು ಬರ ಪರಿಸ್ಥಿತಿಗೆ ಸಿಲುಕಿರುವ ರೈತಾಪಿ ಸಮುದಾಯವನ್ನು ಕಾಪಾಡಲು ಅಗತ್ಯ ಕ್ರಮಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಆಗ್ರಹಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಕರ್ನಾಟಕ ಪ್ರಾಂತ ರೈತ ಸಂಘ (KPRS) ಸರಕಾರಕ್ಕೆ ಮನವಿ ನೀಡುತ್ತಿದೆ.

ಬರಗಾಲ ಪರಿಹಾರಕ್ಕೆ ಸಂಬಂಧಿಸಿದ ಆಗ್ರಹಗಳು : ಉ.ಕ. ಜಿಲ್ಲೆ ಸೇರಿ ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಬೇಕು. ಬರಗಾಲ ಘೋಷಣೆಗೆ ಸಂಬಂಧಿಸಿ, ಕೇಂದ್ರ ಸರ್ಕಾರವು ತನ್ನ ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸಬೇಕು. ರಾಜ್ಯದಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು.

ತಕ್ಷಣವೇ ಬಿಪಿಎಲ್ – ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲ ಪರಿಹಾರ ರೇಷನ್ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ಒದಗಿಸಬೇಕು. ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೆ ಕಡಿವಾಣ ವಿಧಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಮೇವು ಕುಂದು ಕೊರತೆ ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಕೂಡಲೇ ಕೇಂದ್ರ ಸರ್ಕಾರವು, ಎಲ್ಲಾ ರೈತರ,ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಬೇಕು. ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು. ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು ೨೦೦ ದಿನಕ್ಕೆ ಹೆಚ್ಚಿಸಬೇಕು.

ಬರಗಾಲದ ಕೂಲಿಯಾಗಿ 600 ರೂ ಪಾವತಿಸಬೇಕು. ರೈತರ, ಕೃಷಿ ಕೂಲಿಕಾರರ, ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮ ಸಭೆ ನಡೆಸಬೇಕು. ಗ್ರಾಮದಿಂದ ನಡೆಯುವ ಸಂಕಷ್ಟ ವಲಸೆಗೆ ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು, ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದವರು ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ತಹಶೀಲ್ದಾರ ಅಶೋಕ ಭಟ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ, ಸಿಐಟಿಯು ತಾಲೂಕು ಪಂಚಾಯತ ಎಚ್.ಬಿ. ನಾಯಕ, ಮುಖಂಡರಾದ ಉದಯ ನಾಯ್ಕ ಹೊಸಗದ್ದೆ, ಉದಯ ನಾಯ್ಕ ಬೇಲೆಕೇರಿ, ಮಧುಸೂದನ ಶೇಟ್ ಇದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button