Big News
Trending

ಕಡಲನಗರಿಯಲ್ಲಿ‌ ಕಳೆಗಟ್ಟಿದ ಗಣೇಶೋತ್ಸವ: ಅದ್ದೂರಿ ಆಚರಣೆಗೆ ಭರದ ಸಿದ್ದತೆ

ಕಾರವಾರ: ಗೌರಿ ಗಣೇಶ ಹಬ್ಬಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಕಳೆದ ಮೂರು ವರ್ಷಗಳಿಂದ ಕೊರೊನಾ ಕಾರಣಕ್ಕೆ ಕಳೆಗುಂದಿದ್ದ ಗಣೇಶ ಚತುರ್ಥಿ ಈ ಬಾರಿ ರಂಗು ಪಡೆದುಕೊಂಡಿದೆ. ಅದರಲ್ಲೂ ಕರಾವಳಿ ನಗರಿ ಕಾರವಾರದಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಚೌತಿ ಸಹ ಒಂದಾಗಿದ್ದು ಈ ಬಾರಿ ವಿಜೃಂಭಣೆಯ ಆಚರಣೆಗೆ ಜನರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಇನ್ನೊಂದೆಡೆ ಮೂರ್ತಿ ತಯಾರಕರೂ ಸಹ ಉತ್ಸಾಹದಿಂದಲೇ ಗಣೇಶನ ತರಹೇವಾರಿ ಅವತಾರಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ಹೌದು, ಕರಾವಳಿ ಜಿಲ್ಲೆ ಉತ್ತರಕನ್ನಡದ ಕಾರವಾರದಲ್ಲಿ ಗಣೇಶನ ಹಬ್ಬ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದ್ದು ಅದರಲ್ಲೂ ಸಾರ್ವಜನಿಕ ಗಣೇಶೋತ್ಸವವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಕಳೆದ ಮೂರು ವರ್ಷ ಕೊರೊನಾ ಕಾರಣದಿಂದ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿದ್ದು ಜನರು ಸರಳವಾಗಿ ಆಚರಣೆ ಮಾಡುವ ಮೂಲಕ ಗಣೇಶೋತ್ಸವವನ್ನ ಮಾಡಿದ್ದರು. ಆದರೆ ಈ ಬಾರಿ ಕೊರೊನಾ ಆತಂಕ ದೂರಾಗಿರುವ ಹಿನ್ನಲೆಯಲ್ಲಿ ವಿಘ್ನನಿವಾರಕನನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಕಾರವಾರದಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯನ್ನು ಜನರು ಮನೆಗಳಲ್ಲಿ ಆಚರಿಸುವುದರ ಜೊತೆಗೆ ಎಲ್ಲರೂ ಒಟ್ಟಾಗಿ ಸಾರ್ವಜನಿಕ ಮೂರ್ತಿಗಳನ್ನ ಸ್ಥಾಪಿಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. 9 ರಿಂದ 11 ದಿನಗಳ ಕಾಲ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದರ ಜೊತೆಗೆ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಸಹ ವಿಜ್ರಂಭಣೆಯಿಂದ ಜರುಗುತ್ತದೆ. ಆದರೆ 3 ವರ್ಷ ಕೊರೊನಾ ಕಾರಣದಿಂದಾಗಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರಿಂದ ಸರಳವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲಾಗಿತ್ತು.

ಈ ಬಾರಿ ಸರ್ಕಾರ‌ ಕೊರೊನಾ ನಿರ್ಭಂಧ ಹೆರದೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಜನರು ಸಾರ್ವಜನಿಕ ಗಣೇಶೋತ್ಸವವನ್ನು ಹಿಂದೆಂದಿಗಿಂತಲೂ ವಿಜ್ರಂಭಣೆಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಪೆಂಡಾಲ್ ಹಾಕಿ ತಯಾರಿ ಮಾಡಿಕೊಳ್ಳಲಾಗುತ್ತಿದ್ದು ಹಿಂದಿಗಿಂತಲೂ ದೊಡ್ಡದಾದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಮಳೆ ಬರುವ ಸೂಚನೆ ಇದೆ. ಅಲ್ಲದೆ ಮಾರುಕಟ್ಟೆಗಳಲ್ಲಿ ದರ ಕೂಡ ಡಬಲ್ ಆಗಿದೆ. ಆದರೂ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದು ಗಣೇಶೋತ್ಸವ ಸಮಿತಿ ಸದಸ್ಯ ರೋಶನ್ ಹರಿಕಂತ್ರ ಮಾಹಿತಿ ನೀಡಿದರು.

ಇನ್ನು ಗಣೇಶ ಚತುರ್ಥಿ ವೇಳೆ ಪ್ರತಿವರ್ಷ ಕಾರವಾರ ನಗರದಲ್ಲೇ ಸುಮಾರು 15 ರಿಂದ 20 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗುತ್ತದೆ. ರಿಕ್ಷಾ ಚಾಲಕರು, ವಿವಿಧ ಸಂಘ ಸಂಸ್ಥೆಗಳು, ಯುವಕರ ತಂಡ, ಪೊಲೀಸರು, ನಗರಸಭೆ ಸೇರಿದಂತೆ ಹಲವರು ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪಿಸಿ 9 ರಿಂದ 11 ದಿನಗಳ ಕಾಲ ಪೂಜೆ ಸಲ್ಲಿಸುತ್ತಾರೆ. ನಂತರ ಅವುಗಳನ್ನ ನಗರದಲ್ಲಿ ಡಿಜೆ ಹಾಡಿನೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಇದನ್ನ ನೋಡುವುದಕ್ಕೆ ಅಂತಾನೇ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇನ್ನು ಮನೆಗಳಲ್ಲೂ ಸಹ ಸಾಕಷ್ಟು ಮಂದಿ ವೈಯಕ್ತಿಕವಾಗಿ ಮೂರ್ತಿ ಸ್ಥಾಪನೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಕೊರೊನಾದಿಂದಾಗಿ ಈ ಹಿಂದೆ ತಗ್ಗಿದ್ದ ಬೇಡಿಕೆ ಈ ಬಾರಿ ಹೆಚ್ಚಳವಾಗಿರುವ ಹಿನ್ನಲೆ ಮೂರ್ತಿ ತಯಾರಕರೂ ಸಹ ಹಗಲು ರಾತ್ರಿ ಕುಳಿತು ಗಣೇಶನ ವಿಭಿನ್ನ ಬಗೆಯ ಮೂರ್ತಿಗಳನ್ನ ತಯಾರಿಸುತ್ತಿದ್ದು ಅಂತಿಮ ಸ್ಪರ್ಶ ನೀಡುವುದರಲ್ಲಿ ನಿರತರಾಗಿದ್ದಾರೆ. ಈ ಬಾರಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಸಹ ಅದನ್ನು ತಯಾರಿಸಲು ಬೇಕಾದ ಮಣ್ಣಿಗೆ ಕೊರತೆಯಿದ್ದು ಹೆಚ್ಚಿನ ಹಣ ಕೊಟ್ಟು ಮಣ್ಣು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಈ ಬಾರಿ ಮಳೆ ಕೂಡ ಇಲ್ಲದ ಕಾರಣ ಮಣ್ಣು ಹದ ಮಾಡುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಮೂರ್ತಿ ತಯಾರಕರು.

ಒಟ್ಟಾರೇ ಸಾರ್ವಜನಿಕ ಹಬ್ಬದಂತಿರುವ ಗಣೇಶ ಚತುರ್ಥಿ ಸಮೀಪಿಸುತ್ತಿರುವ ಬೆನ್ನಲ್ಲೇ ನಗರದಲ್ಲಿ ಹಬ್ಬದ ವಸ್ತುಗಳ ಖರೀದಿ ಭರಾಟೆ ಸಹ ಜೋರಾಗಿದ್ದು ಬೆಲೆ ಏರಿಕೆಯಿದ್ದರೂ ಸಹ ಜನರು ಹಬ್ಬವನ್ನ ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ನೀವೂ ಸಹ ಕರಾವಳಿಯ ಸಾರ್ವಜನಿಕ ಗಣೇಶೋತ್ಸವವನ್ನ ಕಣ್ತುಂಬಿಕೊಳ್ಳಬೇಕು ಅಂತಿದ್ದಲ್ಲಿ ಕಾರವಾರಕ್ಕೆ ಭೇಟಿ ನೀಡಿ.

Back to top button