ಅಂಕೋಲಾ : ತಾಲೂಕ ಮಟ್ಟದ ಇಲಾಖಾ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಸಹೋದರರಿಬ್ಬರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಪಟ್ಟಣದ ಪೂರ್ಣ ಪ್ರಜ್ಞಾ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿಷ್ನೇಶ್ವರ ಮಂಜುನಾಥ ನಾಯ್ಕ ಶೆಟಗೇರಿಯಲ್ಲಿ ನಡೆದ ತಾಲೂಕ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ತ್ರಿವಿಧ ಎಸೆತಗಳಲ್ಲಿ (ಗುಂಡು, ಚಕ್ರ , ಈಟಿ) ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ವಿಭಾಗದ ವೀರಾಗ್ರಣಿ ಯಾಗಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈ ಹಿಂದೆ ಪ್ರಾಥಮಿಕ ಹಂತದಿಂದಲೇ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿದ್ದ ಈತ ಹೈಸ್ಕೂಲ್ ಹಂತಗಳಲ್ಲಿಯೂ ಅದನ್ನು ಮತ್ತಷ್ಟು ಮುಂದುವರಿಸಿಕೊಂಡು ಬಂದಿದ್ದಾನೆ. ಅಥ್ಲೆಟಿಕ್ ಫೆಡರೇ ಶೇನ್ ಆಫ್ ಇಂಡಿಯಾ (AFI ) ನಲ್ಲಿ ನೊಂದಣೆ ಸದಸ್ಯತ್ವ ಪಡೆದಿರುವ ಈ ಕ್ರೀಡಾ ಪಟು ಸೆ . 15 ರಂದು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಕ್ರ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ , ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಭವಿಷ್ಯದ ಭರವಸೆಯ ಕ್ರೀಡಾಪಟುವಾಗಿ ರೂಪುಗೊಳ್ಳುತ್ತಿದ್ದಾನೆ.
ಅಣ್ಣನಂತೆ ತಾನೇನು ಕಡಿಮೆ ಇಲ್ಲ ಎಂಬಂತಿರುವ ವಿವೇಕ ಮಂಜುನಾಥ ನಾಯ್ಕ (ಸಾನು) ಜೈ ಹಿಂದ್ ಹೈ ಸ್ಕೂಲ್ ನ 8ನೇ ತರಗತಿ ವಿದ್ಯಾರ್ಥಿಯಾಗಿದ್ದು , ಶೆಟಗೇರಿಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ (TGT ವಿಭಾಗ ) ಭಾಗವಹಿಸಿ ಚಕ್ರ ಎಸೆತ ಮತ್ತು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಅರ್ಹತೆ ಗಳಿಸಿಕೊಂಡಿದ್ದಾನೆ.
ಈ ಇಬ್ಬರೂ ಅಣ್ಣ – ತಮ್ಮಂದಿರು, ಜಿಲ್ಲೆಯ ಹೆಸರಾಂತ ಕ್ರೀಡಾಪಟು ಅಂಕೋಲಾ ಬಸ್ ನಿಲ್ದಾಣದ ಎದುರಿನ ನಿವಾಸಿ ಮಂಜುನಾಥ ವಿ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತೆ ದೀಪಾಲಿ ಮಂಜುನಾಥ ನಾಯಕ ದಂಪತಿಗಳ ಪುತ್ರರಾಗಿದ್ದು, ಕಳೆದ ಸಾಲಿನಲ್ಲಿಯೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದನ್ನು ಸ್ಮರಿಸಬಹುದಾಗಿದೆ.
ತಮ್ಮ ತಂದೆ ತಾಯಿಗಳಿಗಷ್ಟೇ ಅಲ್ಲದೇ ತಾವು ಕಲಿತ ಮತ್ತು ಕಲಿಯುತ್ತಿರುವ ಶಾಲೆ , ಕಲಿಸಿದ ಶಿಕ್ಷಕರಿಗೆ, ಇತ್ತೀಚಿನ ತರಬೇತುದಾರರಾದ ಕೃಷ್ಣ ಗೌಡ ಮತ್ತಿತರರು ಸೇರಿದಂತೆ ತಾಲೂಕು ಮತ್ತು ಜಿಲ್ಲೆಯ ಕೀರ್ತಿ ಹೆಚ್ಚುವಂತೆ ಮಾಡಿದ್ದು , ಕಿರಿಯ ವಯಸ್ಸಿನ ಸಹೋದರರ ಈ ಹಿರಿಯ ಸಾಧನೆಗೆ ಕ್ಷೇತ್ರದ ಶಾಸಕ ಸತೀಶ ಸೈಲ್ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ಹಂತಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಕೋರಿದ್ದಾರೆ.
ಅಂತೆಯೇ ಅಥ್ಲೆಟಿಕ್ ಫೆಡರೇಶನ್ ಸದಸ್ಯರು, ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಇಲಾಖೆಯ ಅಧಿಕಾರಿಗಳು,ಮಂಜುನಾಥ ನಾಯ್ಕ ಕುಟುಂಬದ ಆಪ್ತರು, ಹಿತೈಷಿಗಳು , ವಿವಿಧ ಸಮಾಜದ ಗಣ್ಯರು, ತಾಲೂಕಿನ ಹಲವು ಕ್ರೀಡಾಪಟುಗಳು, ಸಂಘಟಕರು ಮತ್ತು ಕ್ರೀಡಾ ಪ್ರೇಮಿಗಳು ಸೇರಿದಂತೆ ಹಲವರು ವಿಘ್ನೇಶ್ವರ ಮತ್ತು ವಿವೇಕ ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ