Yakshagana: ಮಲೆನಾಡಿನ ಕೋಗಿಲೆ ಎಂದೇ ಖ್ಯಾತರಾದ,ಅದ್ಭುತ ಕಂಠಸಿರಿಯ ಖ್ಯಾತ ಯಕ್ಷಗಾನ ಭಾಗವತ ಹೃದಯಾಘಾತದಿಂದ ನಿಧನ
ಸಿದ್ದಾಪುರ: ಮಲೆನಾಡಿನ ಕೋಗಿಲೆ ಎಂದೇ ಖ್ಯಾತರಾದ, ನಾಡಿನ ಹೆಮ್ಮೆಯ ಯಕ್ಷಗಾನ (Yakshagana) ಭಾಗವತ, ರಾಮಚಂದ್ರ ನಾಯ್ಕ (56) ಹೆಮ್ಮನಬೈಲ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಅದ್ಭುತ ಕಂಠಸಿರಿಯಿoದ ರಾಮಚಂದ್ರ ನಾಯ್ಕ ಅವರು ಮಲೆನಾಡಿದ ಕೋಗಿಲೆ ಅಂತಲೇ ಖ್ಯಾತಿಯನ್ನು ಪಡೆದಿದ್ದರು. ಯಕ್ಷಗಾನ ಭಾಗವತರಾಗಿ ಮಾತ್ರವಲ್ಲ, ಕೃತಿ ರಚನಾಕಾರರಾಗಿಯೂ ಹೆಸರು ಗಳಿಸಿದ್ದರು.
ಶಾಸ್ತ್ರೋಕ್ತವಾಗಿ ಯಕ್ಷಗಾನ ಭಾಗವತಿಯನ್ನು ಅಧ್ಯಯನ ಮಾಡಿ ಕನ್ನಡ ನಾಡಿನ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಉತ್ತಮ ಭಾಗವತರಾಗಿ, ಸುಮಧುರವಾದ ಕಂಠಸಿರಿಯಿoದ ಜನಮನದಲ್ಲಿ ನೆಲೆಸಿದ್ದರು. ಸಿಗಂದೂರು, ಸಾಲಿಗ್ರಾಮ, ಪೆರ್ಡೂರು, ಅಮ್ರತೇಶ್ವರಿ, ಗೋಳಿಗರಡಿ, ಮಡಾಮಕ್ಕಿ, ಹಾಲಾಡಿ, ಸೇರಿದಂತೆ ಅನೇಕ ಮೇಳಗಳಲ್ಲಿ ಭಾಗವತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರು ರಚಿಸಿದ ಶ್ರೀ ನಾಗಚೌಡೇಶ್ವರಿ, ಹಾಗೂ ಶೃಂಗಾರಪ್ರಿಯ ನಾಗಚೌಡೇಶ್ವರಿ ಹಳಿಯಾಳ ಎಂಬ ಎರಡು ಯಕ್ಷಗಾನಗಳು (Yakshagana) ಜನಮನಸೂರೆಗೊಂಡಿದ್ದವು. ಈಗ ಮತ್ತೊಂದು ಯಕ್ಷಗಾನ ಬರೆದಿದ್ದು, ಸದ್ಯ ಅದರ ಬಿಡುಗಡೆ ನಡೆಯುವುದಿತ್ತು. ಮೃತರು ಒಂದು ಗಂಡು, ಒಂದು ಹೆಣ್ಣು ಮಗಳು, ಪತ್ನಿ ಹಾಗೂ ಅಪಾರ ಬಂಧು- ಬಳಗ, ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಅಪಾರ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ