Focus News
Trending

4 ದಶಕಗಳ ಹಿಂದಿನ ಸಮಕಾಲೀನ ರಂಗಭೂಮಿ ಕಲಾವಿದರ ಸಮಾಗಮ: ಸವಿ ನೆನಪಿನ ಬುತ್ತಿ ಬಿಚ್ಚಿಟ್ಟ ಹಿರಿಯ ರಂಗ ಕಲಾವಿದರು

ಅಂಕೋಲಾ : ಕಳೆದು ಹೋದ ದಿನಗಳನ್ನು ಮೆಲುಕು ಹಾಕುವ ಸವಿ ಸವಿ ನೆನಪು ಎನ್ನುವ ವಿಶಿಷ್ಠ ಕಾರ್ಯಕ್ರಮ ಹಿರಿಯ ರಂಗಭೂಮಿ ಕಲಾವಿದರಾದ ವಾಸುದೇವ ಶಾನಭಾಗ ನೇತೃತ್ವದಲ್ಲಿ ಪಟ್ಟಣದ ಶ್ರೀ ಶಾಂತಾದುರ್ಗಾ ದೇವಸ್ಥಾನದ ಬಳಿಯ ಚೇತನ ನಾರ್ವೇಕರ ನಿವಾಸದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಸುಮಾರು 45 ವರ್ಷಗಳ ಹಿಂದಿನಿಂದ ಬಾಲ್ಯದ ಮತ್ತು ಶಾಲಾ ಕಾಲೇಜಿನ ದಿನಗಳಲ್ಲಿ ರಂಗಭೂಮಿ ಕಲಾವಿದರಾಗಿ ಜೊತೆಯಾದ ಸ್ನೇಹಿತರನ್ನು ಹುಡುಕಿ ಒಂದೆಡೆ‌‌ ಸೇರಿಸಿ ತಮ್ಮ‌ ನೆನಪಿನ ಬುತ್ತಿಯನ್ನು ತೆರೆದಿಡುವ ಕಾರ್ಯಕ್ರಮ ಇದಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದರಾದ ವಸಂತ ಮಹಾಲೆ ಮತ್ತು ವಿನಯ ಫಾತರಫೇಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವಸಂತ‌‌ ಮಹಾಲೆ ಮಾತನಾಡಿ ತಮ್ಮ ಜೀವನಗಾಥೆಯ ಅನುಭವಗಳನ್ನು ರಂಗಭೂಮಿ ಕಲಾರಂಗದ ಪ್ರವೇಶ ಮತ್ತು ಮುಂದೆ ಅಭಿನಯಿಸಿದ ನಾಟಕಗಳ ಪಾತ್ರಗಳ ಕುರಿತು ರಸಘಳಿಗೆಗಳನ್ನು ಹಂಚಿಕೊಂಡರು. ಸನ್ಮಾನಿತರಾದ ವಿನಯ ಫಾತರಫೇಕರ ಮಾತನಾಡಿ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಧುರ ಕ್ಷಣಗಳನ್ನು ವಿವರಿಸಿದರು.

ವಿನಯ ಫಾತರಫೇಕರ ಅವರು ದೂರದ ಮುಂಬಯಿಯಲ್ಲಿ ಶಿಕ್ಷಣವನ್ನು ಪಡೆದಿದ್ದರೂ ಅಂಕೋಲೆಯಲ್ಲೇ ನೆಲೆಸಿ ಇಲ್ಲಿನ ರಂಗಭೂಮಿಯಲ್ಲಿ ಅಗಾಧ ಸೇವೆ ಸಲ್ಲಿಸಿದವರು. 8 ನೇ ಇಯತ್ತೆಯಲ್ಲೇ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿ ಪಿಯುಸಿಗೆ ಕಾಲಿಟ್ಟಗಲೇ ಚಲನ ಚಿತ್ರದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡ ಅಭಿನೇತ್ರಿ ಪೂರ್ಣಿಮಾ ಗಾಂವಕರ ಮಾತನಾಡಿ ಮೊದಲ ಬಾರಿ ನಾಟಕದಲ್ಲಿ ಪಾತ್ರ, ಮೊದಲ ಸಲ ಬೆಂಗಳೂರು ಪ್ರಯಾಣ, ಮೊದಲನೇ ಚಲನಚಿತ್ರ ಇವೆಲ್ಲದರ ರೋಚಕ ಅನುಭವವನ್ನು ಹಂಚಿಕೊಂಡರು.

ಹೈಸ್ಕೂಲಿನಲ್ಲಿ ನಾಟಕದಲ್ಲಿ ಅವಕಾಶ ಕಲ್ಪಿಸಿದ ಜಿ ಎಚ್ ನಾಯ್ಕ ಮಾಸ್ತರ, ತರಬೇತಿ ನೀಡಿದ ವಿಷ್ಣು ನಾಯ್ಕ ಅವರನ್ನು ನೆನೆಸಿಕೊಂಡರು. ಈ ಸಂದರ್ಭದಲ್ಲಿ ಹೊಸ ಅಲೆಯ ನಾಟಕಗಳು, ಜಾನಪದ ಕಥಾನಕದ ನಾಟಕಗಳು ಹಾಗೂ ಬೀದಿ ನಾಟಕಗಳು ಎಲ್ಲದರಲ್ಲೂ ಅಗಾಧ ಪ್ರತಿಭೆ ಹೊಂದಿದ್ದ ಜಿ ಸಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ.ಮೋಹನ ಹಬ್ಬು, ತಾಲೂಕಿನ ಯಕ್ಷಗಾನದ ಮೇರು ನಟ, ವಿಭಿನ್ನ ಶೈಲಿಯ ಅಭಿನಯದಿಂದ ನಾಟಕಗಳಲ್ಲಿ ಮಿಂಚುತ್ತಿದ್ದ ವಿಶ್ರಾಂತ ಪ್ರಾಚಾರ್ಯ ಡಾ.ಆರ್ ಜಿ ಗುಂದಿ, ವಿಶೇಷ ಕಲಾವಿದ ಮಾರುತಿ ನಾಯಕ, ರಂಗಭೂಮಿಯ ಸಂಗೀತದಲ್ಲಿ ಹೊಸತನವನ್ನು ನೀಡಿದ ಖ್ಯಾತ ಸಂಗೀತ ನಿರ್ದೇಶಕ ದೇವಿದಾಸ ಸುವರ್ಣ ಹಾಗೂ ಅನಿಲ ಸುವರ್ಣ, ಪ್ರಸ್ತುತ ರಂಗಭೂಮಿಯ ಜನಪ್ರಿಯ ಸಂಗೀತ ನಿರ್ದೇಶಕ ನಾಗರಾಜ ಜಾಂಬಳೇಕರ, ರಂಗ ಕಲಾವಿದ ಹಾಗೂ ಉದ್ಯಮಿ ದಯಾನಂದ ಪ್ರಭು, ರಂಗ ಕಲಾವಿದ ಹಾಲಿ ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕರೂ ಉದ್ಯಮಿಗಳೂ ಆದ ರಾಜೇಂದ್ರ ಶೆಟ್ಟಿ, ಮಂಗಲಾ ಪ್ರಭು, ಹಿರಿಯರಾದ ಚೇತನ ನಾರ್ವೇಕರ, ಪತ್ರಕರ್ತ ರಾಮದಾಸ‌ ಶೆಟ್ಟಿ, ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.

ವಾಸುದೇವ ಶಾನಭಾಗ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ತಮ್ಮ ಕಾರ್ಯಕ್ರಮದ ಅಶಯವನ್ನು ವ್ಯಕ್ತಪಡಿಸಿ ನಾಲ್ಕು ದಶಕಗಳ ಹಿಂದಿನ ರಂಗಕಲಾವಿದರನ್ನು ಒಂದೆಡೆ ಸೇರಿಸಿರುವದು ಒಂದು ಅಪೂರ್ವ ಸಂಗಮ ಎಂದರು. ಮಂಗಲಾ ಪ್ರಭು ಮುಂಬಯಿಯಿಂದ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರಿಗೂ ನೆನಪಿನ ಕಾಣಿಕೆ ಮತ್ತು ಸಿಹಿಯನ್ನು ಹಂಚಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ತಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button