ಅಲಗೇರಿ ವಿಮಾನ ನಿಲ್ದಾಣ ಯೋಜನೆ ಕುರಿತು ಚರ್ಚೆ : ಯೋಗ್ಯ ಪರಿಹಾರದ ಭರವಸೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇತೃತ್ವದಲ್ಲಿ ಅಂಕೋಲಾದಲ್ಲಿ ವಿಶೇಷ ಸಭೆ

ಅಂಕೋಲಾ: ಈ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ರಿತೇಶ್ ಕುಮಾರ್ ಸಿಂಗ್ ಇವರು ಇದೀಗ ಜಿಲ್ಲಾಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು ,ಉದ್ದೇಶಿಕ ಅಲಗೇರಿ ವಿಮಾನ ನಿಲ್ದಾಣ ಯೋಜನೆಗೆ ಸಂಬoಧಿಸಿದoತೆ ಸ್ಥಳೀಯರ ಅಹವಾಲು ಆಲಿಸಿದರು. ಶಾಸಕ ಸತೀಶ ಸೈಲ್,ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ,ಎಸಿ ತಹಸಿಲ್ದಾರ್ ಇತರೆ ಅಧಿಕಾರಿಗಳಿದ್ದರು .

ಈ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ರಿತೇಶ್ ಕುಮಾರ್ ಸಿಂಗ್ ಅವರನ್ನು ಸರ್ಕಾರ ಇದೀಗ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರ ಘನ ಉಪಸ್ಥಿತಿಯಲ್ಲಿ ಅಂಕೋಲಾದಲ್ಲಿ ವಿಶೇಷ ಸಭೆ ಕರೆದು ತಾಲೂಕಿನ ಅಲಗೇರಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಯಲ್ಲಿ ಭೂಸಂತ್ರಸ್ಥರಾಗಲಿರುವ ಸ್ಥಳೀಯ ಗ್ರಾಮಸ್ಥರ ಕುಂದು- ಕೊರತೆ ಆಲಿಸಲಾಯಿತು.ಉದ್ದೇಶಿತ ಅಲಗೇರಿ ವಿಮಾನ ನಿಲ್ದಾಣ ಯೋಜನೆಯಲ್ಲಿ ಅಲಗೇರಿ , ಭಾವಿಕೇರಿ, ಬೆಲೇಕೇರಿ ಗ್ರಾಪಂ ವ್ಯಾಪ್ತಿಯ ನೂರಾರು ಕುಟುಂಬಗಳು ತಮ್ಮ ಮನೆ – ಭೂಮಿ ಕಳೆದುಕೊಳ್ಳಲಿದ್ದು, ಭೂ ಸ್ವಾಧೀನ ಮತ್ತು ಪರಿಹಾರದ ಕುರಿತಂತೆ ಸ್ಥಳೀಯರೊಂದಿಗೆ ಪಟ್ಟಣದ ನಾಡವರ ಸಭಾಭವನದಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಬಹು ಹೊತ್ತು ಚರ್ಚಿಸಿ ಯೋಗ್ಯ ಪರಿಹಾರದ ಭರವಸೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಉ. ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಈ ಹಿಂದೆ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ರಿತೇಶಕುಮಾರ ಸಿಂಗ್ ಅವರು ಮಾತನಾಡಿ ನೌಕಾನೆಲೆಯವರು ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿರುವ ಕಾರಣ ಅದರೊಂದಿಗೆ ನಾಗರಿಕ ವಿಮಾನ ನಿಲ್ದಾಣಕ್ಕೆ ಅವಕಾಶ ದೊರಕಿದಂತಾಗಿದೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಿವಿಧ ಕಾಮಗಾರಿಗಳಿಗೆ ಹಂತ ಹಂತವಾಗಿ ಟೆಂಡರ್ ಕರೆಯಲಾಗುತ್ತದೆ ಎಂದರು.

ವಿಮಾನ ನಿಲ್ದಾಣ ನಿರ್ಮಾಣವಾದರೆ ಸುತ್ತ ಮುತ್ತಲಿನ ಪ್ರದೇಶಗಳು ಸಂಪೂರ್ಣ ಅಭಿವೃದ್ಧಿಯಾಗಲಿದ್ದು ಕಾರವಾರ ಹಾಗೂ ಅಂಕೋಲಾ ತಾಲೂಕಿನ ಮತ್ತು ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಹಲವಾರು ರೀತಿಯಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಅಭಿವೃಧಿಯಾಗಲಿದೆ ಎಂದ ಅವರು ಯೋಜನೆಗಾಗಿ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗುವ ಜನರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಆದಷ್ಟು ಬೇಗ ವಿಮಾನ ನಿಲ್ದಾಣ ಯೋಜನೆ ಕಾಮಗಾರಿ ಆರಂಭಿಸಲು ಸಹಕಾರ ನೀಡಬೇಕು ಎಂದರು.

ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಮಾತನಾಡಿ ಈ ಹಿಂದೆ ನೌಕಾನೆಲೆ ನಿರಾಶ್ರಿತರಾದವರು ಇದೀಗ ವಿಮಾನ ನಿಲ್ದಾಣ ಯೋಜನೆಗೆ ಮತ್ತೊಮ್ಮೆ ತಮ್ಮ ಭೂಮಿ ಮನೆ ಕಳೆದುಕೊಳ್ಳುತ್ತಿದ್ದಾರೆ ಅವರ ಪ್ರತಿಯೊಂದು ಬೇಡಿಕೆಗಳೂ ನ್ಯಾಯಯುತವಾಗಿದ್ದು ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಸರ್ಕಾರಕ್ಕೆ ಮನವರಿಕೆ ಮಾಡುವುದಾಗಿ ತಿಳಿಸಿದರು.

ನಿರಾಶ್ರಿತರ ಪರವಾಗಿ ಪ್ರಮುಖರಾದ ಸುರೇಶ ನಾಯಕ ಅಲಗೇರಿ, ದೇವರಾಯ ನಾಯಕ ಇತರೆ ಕೆಲ ಕೃಷಿಕರು, ಭೂ ಮಾಲಿಕರು, ಯುವಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ನ್ಯಾಯ ಯತ ಬೇಡಿಕೆ ಈಡೇರಿಸಿ, ಸರ್ಕಾರ ಸಂತ್ರಸ್ಥರಿಗೆ ಯೋಗ್ಯ ಪರಿಹಾರ ನೀಡುವಂತೆ ವಿನಂತಿಸಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್,ಜಿ.ಪಂ ಕಾರ್ಯನಿರ್ವಹಣ ಅಧಿಕಾರಿ ಈಶ್ವರ ಕಾಂದೂ,ಕುಮಟಾ ಉಪವಿಭಾಗ ಅಧಿಕಾರಿ ಕಲ್ಯಾಣಿ ಕಾಂಬಳೆ , ಅಂಕೋಲಾ ತಹಶೀಲ್ಧಾರ ಅಶೋಕ ಭಟ್ಟ ಉಪಸ್ಥಿತರಿದ್ದರು. ಬಾವಿಕೇರಿ, ಬೇಲೆ ಕೇರಿ, ಅಲಗೇರಿ ಗ್ರಾ ಪಂ ವ್ಯಾಪ್ತಿಯ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಮಾನ ನಿಲ್ದಾಣಕ್ಕೆ ನೀಡುವ ಭೂಮಿಯಲ್ಲಿ ರೈತರು ಭತ್ತ,ಶೇಂಗಾ,ಕಲ್ಲoಗಡಿ ಹೀಗೆ ಪ್ರತಿ ವರ್ಷ ಮೂರು ಬೆಳೆ ಬೆಳೆಯಲಾಗುತ್ತಿದ್ದು ಸರ್ಕಾರ ಅವಾರ್ಡ್ ಮಾಡಿರುವ ದರ ನ್ಯಾಯಯುತ ಆಗಿಲ್ಲ ನೌಕಾನೆಲೆ ಯೋಜನೆಗೆ ಭೂಮಿ ಕಳೆದುಕೊಂಡು ನಿರಾಶ್ರಿತರಾದವರು ಇದ್ದು 35 ವರ್ಷಗಳ ನಂತರ ಮತ್ತೆ ಕಷ್ಟ ಪಟ್ಟು ಬದುಕು ಕಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ವಿಮಾನ ನಿಲ್ದಾಣ ಯೋಜನೆಗೆ ಭೂಮಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಆದರೂ ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಿದ್ದೇವೆ ಭೂಮಿ ಕಳೆದುಕೊಳ್ಳುವ ಜನರ ಬೇಡಿಕೆಗಳನ್ನು ಸರ್ಕಾರ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಭೂಮಿ ಕಳೆದುಕೊಳ್ಳಲಿರುವ ಸ್ಥಳೀಯರ ಪರವಾಗಿ ಅಲಗೇರಿ ಸುರೇಶ ನಾಯಕ ಅಧಿಕಾರಿಗಳಲ್ಲಿ ವಿನಂತಿಸಿಕೊoಡರು. ಸ್ಥಳೀಯರ ಸಮಸ್ಯೆಯನ್ನು ಆಲಿಸಿದ ರಿತೇಶ್ ಸಿಂಗ್ ,ಸರ್ಕಾರದ ಗಮನಕ್ಕೆ ತಂದು ತಮ್ಮ ಬೇಡಿಕೆಗಳ ಈಡೇರಿಕೆಗೆ ಸಾಧ್ಯವಾದಷ್ಟು ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವ ಭರವಸೆ ನೀಡಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version