Important
Trending

Health Camp: ಅಕ್ಟೋಬರ್ 1 ರಂದು  ಉಚಿತ  ಆರೋಗ್ಯ ತಪಾಸಣಾ ಶಿಬಿರ: ಒಂದು ವಾರ ಅಕ್ಯುಪ್ರೆಷರ್ ಶಿಬಿರ

ಅಂಕೋಲಾ : ಹತ್ತಾರು ವಿಧಾಯಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಅಂಕೋಲಾ ಲಾಯನ್ಸ್ ಕ್ಲಬ್ ಸಿಟಿ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಕಾರವಾರ ಹಾಗೂ ಕಸ್ತೂರಬಾ ಆಸ್ಪತ್ರೆ ಮಣಿಪಾಲ, ಶ್ರೀ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನ ಧರ್ಮದರ್ಶಿ ಮಂಡಳಿ ಹನುಮಟ್ಟಾ ಮತ್ತು ಕೆ.ಎಲ್. ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಾಯನ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಮೆಗಾ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದು ಲಾಯನ್ಸ್ ಕ್ಲಬ್ ಸಿಟಿ ಅಧ್ಯಕ್ಷ ಡಾ. ವಿಜಯದೀಪ ಮಣಿಕೋಟ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ತಮ್ಮ ಸಂಘಟನೆಯ ಮೂಲಕ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುತ್ತಾ ಬರಲಾಗಿದೆ. ಈ ವರ್ಷ ಉಚಿತ ಮೆಗಾ ಆರೋಗ್ಯ ಶಿಬಿರವನ್ನು ಏರ್ಪಡಿಸಿದೆ. ನೇತ್ರ ತಪಾಸಣೆ, ಸಾಮಾನ್ಯ ಔಷಧಿ, ಪ್ರಸೂತಿ ಮತ್ತು ಸ್ತ್ರೀರೋಗ, ಚರ್ಮ, ಕಿವಿ, ಮೂಗು, ಗಂಟಲು ಸಂಬಂಧಿತ ಕಾಯಿಲೆಗಳಿಗೆ ತಪಾಸಣೆ, ಸಲಹೆ ಮತ್ತು ಲಭ್ಯವಿರುವ ಔಷಧಿಯನ್ನು ನೀಡಲಾಗುವುದು. 5 ವಿಭಾಗಗಳಲ್ಲಿ ತಜ್ಞ ವೈದ್ಯರು ಶಿಬಿರದಲ್ಲಿ ಲಭ್ಯವಿದ್ದಾರೆ.

ನೇತ್ರ ಪೊರೆ ಹಾಗೂ ಇತರೆ ಕೆಲ ಅಗತ್ಯದ ಅನುಕೂಲ ಸಾಧ್ಯತೆಯ ಚಿಕಿತ್ಸೆಯನ್ನು ಗುರುತಿಸಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಂದು ಬಿಡುವ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು ಎಂದರು. ದಿನಾಂಕ 1-10-2023 ರಂದು ರವಿವಾರ ಪಟ್ಟಣದ ಕೆ.ಎಲ್. ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಶಿಬಿರ ನಡೆಯಲಿದೆ ಎಂದರು. ಲಯನ್ಸ್ ಸಿಟಿ ಕೋಶಾಧ್ಯಕ್ಷ ಉದಯಾನಂದ ನೇರಲಕಟ್ಟೆ ವಂದಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪ್ರದೀಪ್ ರಾಯ್ಕರ್, ಸಂಸ್ಥಾಪಕ ಅಧ್ಯಕ್ಷ ಕೆ ಎಸ್ ಬೋರ್ಕರ್, ಪ್ರಮುಖರಾದ ಮೋಹನ್ ಶೆಟ್ಟಿ, ಸುರೇಶ್ ನಾಯ್ಕ, ಕೆ ವಿ ಶೆಟ್ಟಿ, ಡಾ. ಶಾಂತಾರಾಮ ಶಿರೋಡಕರ, ನಿಕಟಪೂರ್ವ ಅಧ್ಯಕ್ಷ ಶಶಿಧರ ಶೇಣ್ವಿ ಮತ್ತಿತರರಿದ್ದರು.

ಒಂದು ವಾರ ಆಕ್ಯುಪ್ರೆಶರ್ ಶಿಬಿರ; ಲಯನ್ಸ್ ಕ್ಲಬ್ ಇಂಟರನ್ಯಾಶನಲ್, 

ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಮತ್ತು ಶ್ರೀ ಲಕ್ಷ್ಮೀ ನಾರಾಯಣ ಮಹಾಮಾಯಾ ದೇವಸ್ಥಾನದ ಧರ್ಮದರ್ಶಿ ಮಂಡಳಿ ಹನುಮಟ್ಟಾ ಇವರ ಪ್ರಾಯೋಜಕತ್ವದಲ್ಲಿ ಅಕ್ಯೂಪ್ರೆಸ್ಸರ್ ಮತ್ತು ಸುಜೋಕ್ ಮ್ಯಾಗ್ನೇಟ್ ಮತ್ತು ವೈಬ್ರೇಶನ್ ಥೆರಪಿ ಚಿಕಿತ್ಸಾ ಶಿಬಿರ ದಿನಾಂಕ 3-10-2023ರಿಂದ 8-10-2023ವರೆಗೆ ಆರು ದಿನಗಳ ಕಾಲ ಅಂಕೋಲಾ ಅರ್ಬನ್ ಬ್ಯಾಂಕ್ ಮೊದಲನೇ ಮಹಡಿಯಲ್ಲಿ ನಡೆಯಲಿದೆ. ಇದಕ್ಕೆ ನೊಂದಣಿ ಕಡ್ಡಾಯ ಎಂದು ಲಾಯನ್ಸ್ ಆಡಳಿತಾಧಿಕಾರಿ ಎನ್ ಎಚ್ ನಾಯ್ಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.9845710314, 7795102040, 9448723062 ಇವರನ್ನು ಸಂಪರ್ಕಿಸಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button