ಮುಂಡಗೋಡು: 108 ಆರೋಗ್ಯ ಕವಚ ತುರ್ತು ಚಿಕಿತ್ಸಾ ವಾಹನದಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ತಾಲೂಕಿನ ಗುಂಜಾವತಿ ಗ್ರಾಮದ 36 ವರ್ಷದ ಆಶಾಭಿ ನಿಸಾರ್ ಘಾಡಿ ಎಂಬ ಮಹಿಳೆಯೇ 108 ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ 108ಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ 108 ತುರ್ತು ಚಿಕಿತ್ಸಾ ವಾಹನದ ಸಿಬ್ಬಂದಿಗಳು ಗರ್ಭಿಣಿಯನ್ನು ವಾಹನದಲ್ಲಿ ಕರೆತರುವಾಗ ಮಾರ್ಗ ಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ.
ಕೂಡಲೇ ವಾಹನವನ್ನು ನಿಲ್ಲಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ 10 ವಾಹನದ ತುರ್ತು ವೈದ್ಯಕೀಯ ತಂತ್ರಜ್ಞ ಪ್ರಕಾಶ್ ಮತ್ತು ಕಿರಿಯ ಆರೋಗ್ಯ ಸಹಾಯಕಿ ಗೌರಮ್ಮ ಕಮತಗಿ ಅವರು ಬಳಿಕ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿಸ್ಮಯ ನ್ಯೂಸ್, ಮುಂಡಗೋಡು