Cycling: ಕಾರು ಮತ್ತು ಬೈಕ್ ಇದ್ದರೂ ಈ ಅಧಿಕಾರಿ ಪ್ರತಿದಿನ 56 ಕಿಲೋಮೀಟರ್ ಸೈಕಲ್ ರೈಡ್ ಮಾಡುವುದೇಕೆ?

ಅಂಕೋಲಾ: ಉನ್ನತ ಹುದ್ದೆಯಲ್ಲಿದ್ದರೂ ದಿನ ನಿತ್ಯ ಸೈಕಲ್ ( Cycling) ತುಳಿಯುತ್ತ ಆರೋಗ್ಯ ರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಮಹತ್ವದ ಸಂದೇಶ ಸಾರುತ್ತಿರುವ ವ್ಯಕ್ತಿಯೋರ್ವರು, ವಿದೇಶದಿಂದ ಸೈಕಲ್ ಆಮದು ಮಾಡಿಕೊಂಡು ಸದ್ದಿಲ್ಲದೇ ಸುದ್ದಿಯಾಗುವಂತಾಗಿದ್ದಾರೆ, ನೌಕಾನೆಲೆ ಉದ್ಯೋಗಿಯೊಬ್ಬರು ಪ್ರತಿದಿನ ಅಂಕೋಲಾದಿಂದ ಕಾರವಾರಕ್ಕೆ ಸೈಕಲ್ ಮೇಲೆ ಕರ್ತವ್ಯಕ್ಕೆ ತೆರಳುವ ಮೂಲಕ ಈಗಾಗಲೇ ಹಲವರ ಗಮನ ಸೆಳೆಯುತ್ತಲೇ ಬಂದಿದ್ದರು.

ಉದ್ಯೋಗಾವಕಾಶ: 92 ಸಾವಿರದ ವರೆಗೆ ಮಾಸಿಕ ವೇತನ: PUC, Diploma ಆದವರು ಅರ್ಜಿ ಸಲ್ಲಿಸಿ: ಅಕ್ಟೋಬರ್ 30, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ಭೀಮಾ ಎಸ್ ಕೊಕಟನೂರ ಅರ್ಗಾದ ಕದಂಬ ನೌಕಾನೆಲೆಯಲ್ಲಿ ಸಂಹವನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಅಂಕೋಲಾ ತಾಲೂಕಿನ ವಂದಿಗೆ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಹುಟ್ಟೂರು ಬಬಲೇಶ್ವರ ಗ್ರಾಮದ ಪಕ್ಕದ ಕುಂಬರಹಳ್ಳ ಗ್ರಾಮದಲ್ಲಿರುವ ನೂರಾರು ಸೈಕ್ಲಿಸ್ಟ್ ಗಳನ್ನು ಹತ್ತಿರದಿಂದ ಕಂಡು, ಸ್ಥಳೀಯ ಪರಿಸರದಿಂದ ಪ್ರೇರೇಪಣೆಗೊಂಡು ಬಾಲ್ಯ ದಿಂದಲೇ ಸೈಕಲ್ ಕ್ರೇಜ್ ಹೊಂದಿದ್ದ ಇವರು ಬೆಳೆದು ದೊಡ್ಡವರಾದಂತೆ ತಮ್ಮ ಸೈಕಲ್ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದ್ದಾರೆ.

ಆರಂಭದಿಂದ ಇಲ್ಲಿಯವರೆಗೆ ಇವರು ಬೇರೆ ಬೇರೆ ಮಾದರಿಯ ಸಾಮಾನ್ಯದರದ ನೈಕಲ್ ನಿಂದ ಹಿಡಿದು,ಲಕ್ಷಾಂತರ ಮೌಲ್ಯದ ಸೈಕಲ್ ಗಳನ್ನು ಸವಾರಿ ಮಾಡಿದ್ದಾರೆ. ವಾರದಿಂದೀಚೆಗೆ ಸುಮಾರು 70 ಸಾವಿರ ರೂಪಾಯಿ ಬೆಲೆ ಬಾಳುವ ಇಟಲಿ ನಿರ್ಮಿತ ಜಾವಾ ಕಂಪನಿಯ ಹೊಸ ಮಾದರಿಯ ಸೈಕಲ್ ಖರೀದಿಸಿ ಇದೀಗ ಸುದ್ದಿಯಾಗುವಂತಾಗಿದ್ದಾರೆ..

ಹಾಗಂತ ಅವರು ಈಗ ಸುದ್ದಿಯಾದದ್ದು ಅವರು ವಿದೇಶದಿಂದ ಹೆಚ್ಚಿನ ಹಣ ಕೊಟ್ಟು ತರಿಸಿದ ಸೈಕಲ್ ನಿಂದಾಗಿಯೇ ಮಾತ್ರ ಎನ್ನುವಂತಿಲ್ಲ. ಏಕೆಂದರೆ ಈ ಹಿಂದೆಯೇ ಅವರ ಬಳಿ ದುಬಾರಿ ಬೆಲೆಯ ಸೈಕಲ್ ಒಂದು ಇದ್ದು ಅದು ಈ ಬಾರಿ ವಿದೇಶದಿಂದ ತರಿಸಿದ ಸೈಕಲ್ಲಿನ ದುಪ್ಪಟ್ಟು ಬೆಲೆಯದ್ದಾಗಿತ್ತು. ಅಂದರೆ ಸರಿ ಸುಮಾರು ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಸೈಕಲ್ ಸಹ ಅವರ ಬಳಿ ಇತ್ತು. ಖರೀದಿಸಿ ಸುಮಾರು ಐದು ವರ್ಷಗಳ ಸುದೀರ್ಘ ರೈಡ್‌ ಬಳಿಕ ಅದನ್ನು ಅರ್ಧ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ.

ಈ ಹಿಂದೆ ಸಹ ಹಲವು ಬೆಲೆ ಬಾಳುವ ಸೈಕಲ್ ಗಳನ್ನು ಇವರು ಖರೀದಿಸಿದ್ದು ಅವುಗಳಲ್ಲಿ ಕೆಲವು ಈಗಲೂ ಅವರ ಬಳಿ ಇದೆ. ಇನ್ನು ಕೆಲವನ್ನು ತಮ್ಮ ಗೆಳೆಯರಿಗೆ ನೀಡಿದ್ದಾರೆ. ನೌಕಾ ಸೇನೆಯ ಅಧಿಕಾರಿ ಆಗಿರುವ ಇವರ ಬಳಿ ಸ್ವಂತ ಕಾರು , ಬೈಕ್ ಇದ್ದರೂ ಸಹ , ಅಂಕೋಲಾದ ಬಾಡಿಗೆ ಮನೆಯಿಂದ ಸುಮಾರು 28 ಕಿಲೋಮೀಟರ್ ದೂರವಿರುವ ಕದಂಬ ನೌಕಾನೆಲೆಗೆ ಪ್ರತಿದಿನ ಸೈಕಲ್ ಮೂಲಕವೇ ಹೋಗಿ ಬರುವುದನ್ನು ಇವರು ಹೆಚ್ಚಾಗಿ ರೂಡಿಸಿಕೊಂಡಿದ್ದಾರೆ. ಮತ್ತು ತನ್ನ ಸೈಕಲ್ (Cycling) ಪ್ರಯಾಣದ ಸಮಯ ಮತ್ತು ಕ್ರಮಿಸುವ ದೂರದ ಕುರಿತು ಟಿಪ್ಪಣಿ ಮಾಡಿಕೊಂಡಿದ್ದಾರೆ.

ಹತ್ತಿರದ ಸ್ಥಳಗಳಿಗೆ ತೆರಳಲು ವಾಹನಗಳನ್ನು ಬಳಸಿ ಇಂಧನ ವ್ಯಯ, ಪರಿಸರ ಮಾಲಿನ್ಯಕ್ಕೆ ಕಾರಣ ಆಗುವುದುಕ್ಕಿಂತ ಸೈಕಲ್ ಬಳಸುವ ಮೂಲಕ ಪರಿಸರ ಕಾಳಜಿ ತೋರುವ ಜೊತೆಗೆ ದೈಹಿಕ ಆರೋಗ್ಯವನ್ನೂ (ಬಾಡಿ ಫಿಟ್ನೆಸ್ ) ಕಾಪಾಡಿಕೊಳ್ಳಲು ಸಾಧ್ಯ ಎಂಬ ಸ್ವಂತ ಅನುಭವದ ಮಾತನಾಡುವ ಇವರು, ಸಮಾನ ಮನಸ್ಕರು ಕೈ ಜೋಡಿಸಿದರೆ ಸ್ಥಳೀಯವಾಗಿ ಸೈಕ್ಲಿಂಗ್ ಕ್ಲಬ್ ಸ್ಥಾಪನೆ , ಬಿಡುವಿನ ವೇಳೆ ಮಾರ್ಗದರ್ಶನ ನೀಡುವ ತುಡಿತ ವ್ಯಕ್ತಪಡಿಸಿದ್ದಾರೆ.

ತಮ್ಮ ವೈಯಕ್ತಿಕ ಹವ್ಯಾಸ ಹಾಗೂ ಆರೋಗ್ಯ ಕಳಕಳಿ ದೃಷ್ಟಿಯಿಂದ ಲೋ ಎಂಬಂತೆ ಸೈಕಲ್ ತುಳಿಯುತ್ತಾ ಬಂದಿರುವ ಈ ಅಧಿಕಾರಿ,ತನ್ನ ನಿರಂತರ ಸೈಕ್ಲಿಂಗ್ ಸಾಮರ್ಥ್ಯದ ಮೂಲಕ ಸದ್ದಿಲ್ಲದೇ ಹಲವರಲ್ಲಿ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಜಾಗೃತಿ ಸಂದೇಶ ಮೂಡಿಸುತ್ತಿದ್ದಾರೆ. ಈ ಅಧಿಕಾರಿಯ ವಿಶೇಷ ವ್ಯಕ್ತಿತ್ವಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version