Huge Python: ಮನೆಗೆ ಬಂದಿದ್ದ ಸುಮಾರು 10 ಅಡಿ ಉದ್ದ, 38 ಕೆಜಿ ಭಾರದ ಭಾರೀ ಹೆಬ್ಬಾವು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ತಂದೆ ಮತ್ತು ಮಗ

ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯ ಪುರಲಕ್ಕಿ ಬೇಣದ ಮನೆಯೊಂದರ ಪಕ್ಕದ ಕೌಂಪೌಂಡ ಬಳಿ ಬಂದಿದ್ದ ಭಾರೀ ಗಾತ್ರದ ಹೆಬ್ಬಾವನ್ನು (Huge Python) ಹಿಡಿದು ಸಂರಕ್ಷಿಸುವ ಮೂಲಕ ಗ್ರಾಮಸ್ಥರ ಆತಂಕ ದೂರ ಮಾಡಿದ ತಂದೆ ಮತ್ತು ಮಗನ ಬಗ್ಗೆ ಸ್ಥಳೀಯರಿಂದ ಮೆಚ್ಚುಗೆ ಮಾತು ಕೇಳಿ ಬರುತ್ತಿದೆ. ಪುರಲಕ್ಕಿ ಬೇಣದ ಸುಜಾತಾ ನಾಯ್ಕ ಎನ್ನುವವರ ಮನೆಯ ಪಕ್ಕದ ಕೌಂಪೌಡ್ ಒಂದರಲ್ಲಿ ಬೆಳೆದಿದ್ದ ಗಿಡ – ಗಂಟಿಗಳ ಪೊದೆಯ ಮಧ್ಯೆ ಭಾರೀ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಮನೆಯವರು ಮತ್ತು ಅಕ್ಕ ಪಕ್ಕದವರು ಆತಂಕ ಪಡುವಂತಾಗಿತ್ತು.

ವಿಷಯ ತಿಳಿದ ಉರಗ ಸಂರಕ್ಷಕರಾದ ಸೈಮನ್ ಮತ್ತು ಅವರ ಮಗ ಸ್ವಾಮುವೆಲ್ ಗಿಡಗಂಟಿ ಪೊದೆಗಳ ಮಧ್ಯೆ ಸಾಗಿ ಹರಸಾಹಸ ಪಟ್ಟು ಹೆಬ್ಬಾವನ್ನು ಹಿಡಿದು ಸ್ಥಳೀಯರ ಆತಂಕ ದೂರ ಮಾಡಿದರು. ಕೋಳಿ ಇಲ್ಲವೇ ನಾಯಿಯನ್ನು ನುಂಗಿತ್ತು ಎನ್ನಲಾದ ಭಾರೀ ಗಾತ್ರದ ಹೆಬ್ಟಾವು ಸುಮಾರು 10 ಅಡಿ ಉದ್ದ ಮತ್ತು 38 ಕೆ.ಜಿ. ಭಾರ ಇತ್ತು.

ಬಳಿಕ ಅದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದರು. ಸ್ಥಳೀಯರು ಸಹಕರಿಸಿದರು. (Huge Python) ಹೆಬ್ಬಾವನ್ನು ಹಿಡಿದು ಸಂರಕ್ಷಿಸಿದ ತಂದೆ ಮತ್ತು ಮಗನ ಸಾಹಸದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version