Firecracker Accident: ಪಟಾಕಿ ದುರಂತದ ಹಿನ್ನೆಲೆ: ಹಲವೆಡೆ ಅಧಿಕಾರಿಗಳ ತಂಡ ಭೇಟಿ, ಪಟಾಕಿ ದಾಸ್ತಾನು ಪರಿಶೀಲನೆ
ಅಂಕೋಲಾ: ರಾಜ್ಯ ರಾಜಧಾನಿ ಬೆಂಗಳೂರಿನ ಅತ್ತಿವೆಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪಟಾಕಿ ದುರಂತದಲ್ಲಿ ( Firecracker Accident) 14 ಜನ ಪ್ರಾಣ ಕಳೆದುಕೊಳ್ಳುವಂತಾದ ದುರ್ಘಟನೆ ನಂತರ ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮಕ್ಕೆ ಸರ್ಕಾರ ಸೂಚಿಸಿದ್ದು, ಇದೇ ವೇಳೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶದಂತೆ ತಾಲೂಕಾ ಆಡಳಿತ ಮತ್ತು ಸಂಬಂಧಿಸಿದ ವಿವಿಧ ಇಲಾಖೆಗಳು ಪಟಾಕಿ ದಾಸ್ತಾನುಗಾರರನ್ನು ಪತ್ತೆ ಮಾಡುವ , ಮತ್ತು ಅಧಿಕೃತ ಪರವಾನಿಗೆದಾರರು ಮಾತ್ರ ನಿಗದಿತ ಸ್ಥಳ ಮತ್ತು ಸಮಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಒದಗಿಸಿಕೊಡಲು ಪರಿಶೀಲನೆ ನಡೆಸಿದ್ದಾರೆ.
ತಹಶೀಲ್ಧಾರ ಅಶೋಕ ಭಟ್ಟ ನೇತೃತ್ವದಲ್ಲಿ, ಡಿ.ವೈ.ಎಸ್. ಪಿ ವೆಲಂಟನ್ ಡಿಸೋಜ ಅವರ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಪಟಾಕಿ ಮಾರಾಟಗಾರರ ಅಂಗಡಿಗಳಿಗೆ ಮತ್ತು ದಾಸ್ತಾನು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಮುಂಜಾಗೃತಾ ಕ್ರಮಗಳ ಕುರಿತಂತೆ ಸಲಹೆ ಸೂಚನೆ ಮತ್ತು ಎಚ್ಚರಿಕೆ ನೀಡಿದಂತಿದೆ.
ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶವಾದ ಹಟ್ಟಿಕೇರಿ ಮತ್ತು ಪಟ್ಟಣ ವ್ಯಾಪ್ತಿ ಸೇರಿದಂತೆ ಒಟ್ಟು 5 ಜನ ಅಧಿಕೃತ ಪರವಾನಿಗೆ ಹೊಂದಿರುವ ಪಟಾಕಿ ವ್ಯಾಪಾರಸ್ಥರಿದ್ದಾರೆ ಎನ್ನಲಾಗಿದ್ದು, ಅವರ ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಹಲವೆಡೆ ತಪಾಸಣೆ ನಡೆಸಿ, ಆಯಾ ಸ್ಥಳ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಅಗ್ನಿ ಅವಘಡ, ಸುಡುಮದ್ದು ದುರಂತ ಎಲ್ಲಿಯೂ ಸಂಭವಿಸದಂತೆ ಸೂಕ್ತ ಮನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಪಟಾಕಿ ದಾಸ್ತಾನು ಪ್ರದೇಶದಲ್ಲಿ (Firecracker Accident) ಸಣ್ಣ ಬೆಂಕಿ ಕಿಡಿಯಿಂದಲೂ ದೊಡ್ಡ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಜಾಗ್ರತೆ ವಹಿಸಬೇಕು, ದಾಸ್ತಾನು ಸ್ಥಳದಲ್ಲಿ ಅಗ್ನಿ ಶಮನ ಗೊಳಿಸುವ,ನಿಯಂತ್ರಿಸುವ ಸಾಧನ ಸಲಕರಣೆ ಅಳವಡಿಸಿ ,ಸುರಕ್ಷಾ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಪಟಾಕಿ ವ್ಯಾಪಾರಸ್ಥರಿಗೆ ಅಧಿಕಾರಿಗಳು ಸೂಚಿಸಿದರು.
ಸರ್ಕಾರದಿಂದ ಮಾರಾಟಕ್ಕೆ ಪರವಾನಗಿ ಇರುವ , ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಹಾಗೂ ಎಲ್ಲಿ ಮಾರಾಟಕ್ಕೆ ಸ್ಥಳ ನಿಗದಿ ಮಾಡಲಾಗಿದೆ ಆ ಸ್ಥಳದಲ್ಲಿ ಮಾತ್ರ ಮಾರಾಟ ಮಾಡಬೇಕು ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲು ಮತ್ತು ಮಾರಾಟದ ಪರವಾನಗಿ ರದ್ದು ಪಡಿಸಲು ಅವಕಾಶವಿದೆ ಎಂದು ತಹಶೀಲ್ಧಾರ ಅಶೋಕ ಭಟ್ಟ ತಿಳಿಸಿದರು.
ಹೆಸ್ಕಾಂ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಟಾಕಿ ದಾಸ್ತಾನು ಸ್ಥಳಕ್ಕೆ ಪ್ರತಿ ವಾರ ಭೇಟಿ ನೀಡಿ, ಸುರಕ್ಷಾ ಕ್ರಮಗಳ ಪರಿಶೀಲನೆ ನಡೆಸುವಂತೆ ತಹಶೀಲ್ಧಾರರು ಸೂಚನೆ ನೀಡಿದರು. ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ನಾಯ್ಕ, ಅಗ್ನಿಶಾಮಕ ದಳದ ಪ್ರಭಾರಿ ಠಾಣಾಧಿಕಾರಿ ಗಜಾನನ ನಾಯ್ಕ, ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಉಪ ನಿರೀಕ್ಷಕರಾದ ಉದ್ದಪ ಧರೆಪ್ಪನವರ್, ಸುನೀಲ್ ಹುಲ್ಲೊಳ್ಳಿ , ಕಂದಾಯ ಮತ್ತು ಪೊಲೀಸ್ ಇಲಾಖೆಯ ಇತರೆ ಸಿಬ್ಬಂದಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ