ಅಡಿಕೆಗೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಹೀಗೆ ಮಾಡಿ: ಮುನ್ನೆಚ್ಚರಿಕೆ ಏನು?

ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಅಡಿಕೆಗೆ (Arecanut) ಎಲೆಚುಕ್ಕೆ ರೋಗ ಮತ್ತು ಹಳದಿರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿರಸಿ ನಗರದ ಮಿನಿವಿಧಾನಸೌಧದ ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ವಿಜ್ಞಾನಿಗಳ ಸಭೆ ನಡೆಯಿತು. ಈ ವೇಳೆ ಎಲೆಚುಕ್ಕೆ ರೋಗದ ಕುರಿತು ಚರ್ಚೆಗಳು ನಡೆದವು.

ಶಿರಸಿಯ ಬಾಗಲಕೋಟ ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿ ಡಾ. ಪ್ರಸಾದ ಮಾತನಾಡಿ, ಎಲೆಚುಕ್ಕೆ ಮತ್ತು ಹಳದಿರೋಗ ನಿಯಂತ್ರಣದ ಕುರಿತು ವಿಟ್ಲದ ವಿನಾಯಕ ಹೆಗ್ಡೆ ನೇತೃತ್ವದಲ್ಲಿ ಟಾಸ್ಕಪೋರ್ಸ್ ಸಮಿತಿ ರಚಿಸಲಾಗಿದೆ. ಅವರು ಸಾಕಷ್ಟು ಕಡೆಗಳ ಅಡಿಕೆ ತೋಟಗಳಿಗೆ ಭೇಟಿ ನೀಡಿ, ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮದ ಕುರಿತು ಸೂಕ್ತ ಮಾಹಿತಿ ನೀಡುತ್ತಿದ್ದಾರೆ.

(Arecanut) ಎಲೆಚುಕ್ಕೆ ರೋಗ ಹಳೆಯ ರೋಗವಾಗಿದ್ದು, ಇಂದಿನ ಹವಾಮಾನದ ವೈಪರೀತ್ಯದಿಂದ ಶಿಲೀಂಧ್ರದ ಪ್ರಮಾಣ ಹೆಚ್ಚಾಗಿ ರೋಗ ಉಲ್ಬಣಗೊಂಡಿದೆ. ಬೋರ್ಡೋ ದ್ರಾವಣವನ್ನು ಕೇವಲ ಸಿಂಗಾರಕ್ಕೆ ಮಾತ್ರವಲ್ಲದೇ, ಅಡಿಕೆ ಸುಳಿಗೆ, ಎಲೆಗಳಿಗೆ ಸಿಂಪರಣೆ ಮಾಡಬೇಕು. ಕೇವಲ ಒಂದು ಬಾಡಿ ಸಿಂಪರಣೆ ನಿಯಂತ್ರಣ ಸಾಧ್ಯವಿಲ್ಲ. ಮೇ ಕೊನೆಯಲ್ಲಿ ಮತ್ತು ಜೂನ್ ಮೊದಲ ವಾರದಲ್ಲಿ ಹಾಗೂ 25 ನಂತರ ಸ್ಪೇ ಮಾಡುವುದರಿಂದ ರೋಗ ಹತೋಟಿ ಸಾಧ್ಯ ಎಂದರು.

ಮಳೆಗಾಲದ ಪ್ರಾರಂಭವಾದ ನಂತರ ರೋಗದ ಪ್ರಮಾಣವೂ ಹೆಚ್ಚಾಗಲಿದ್ದು, ಕಡಿಮೆ ಉಷ್ಣಾಂಶ ಅಧಿಕ ತೇವಾಂಶದಿoದ ಬೇಗ ಹರಡುತ್ತದೆ. 1 ಕೆ.ಜಿ ಸುಣ್ಣ ಮತ್ತು ಒಂದು ಕೆ.ಜಿ ಸುಣ್ಣ ಸರಿಯಾದ ಪ್ರಮಾಣದಲ್ಲಿ 100 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಬೇಕು. ನಂತರ ತಟಸ್ಥ ಸಾರವನ್ನು ಪರೀಕ್ಷಿಸುವುದು ಕಡ್ಡಾಯವಾಗಿದೆ. ಅಡಿಕೆ ಮರ-ಗಿಡಗಳಿಗೆ ಸೂರ್ಯನ ಬೆಳಕು ಬೀಳದ ಜಾಗದಲ್ಲಿ ರೋಗದ ಪ್ರಮಾಣ ಹೆಚ್ಚಿರುತ್ತದೆ.

ತೋಟಗಳಿಗೆ ಗಾಳಿ ಬೆಳಕು ಮುಖ್ಯ. ಪೋಟಾಶ್ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪ್ರತಿ ವರ್ಷ ಪೋಟಾಷ್ ನೀಡುವುದಲ್ಲದೇ, ಬೇವನಹಿಂಡಿ ಮುಖ್ಯವಾಗಿದ್ದು, ಇದರಿಂದ ಬೇರು ಹುಳ ನಿಯಂತ್ರಣ ಸಾಧ್ಯ. ಪ್ರತಿ ಮರಕ್ಕೆ 25 ಗ್ರಾಂ ಜಿಂಕ್ ಮತ್ತು ಬೋರಾನ್ ನೀಡುವುದು ಉತ್ತಮ. ಲಘು ಪೋಷಕಾಂಶದ ಕೊರತೆಯಿಂದ ಸುಳಿ ಕೊಳೆ ಹಾಗೂ ಇಡಿ ಮುಂಡಿಗೆ ರೋಗ ಹೆಚ್ಚಾಗುತ್ತದೆ. ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಈ ರೋಗದ ಪ್ರಮಾಣವೂ ಹೆಚ್ಚಿದೆ ಎಂದು ಹೇಳಿದರು.

ಪ್ರೋಪಿಕೊನಝೋಲ್, ಟೆಬುಕೊನಝೋಲ್ ಅಥವಾ ಹೆಕ್ಸಾಕೊನಝೋಲ್ ಶಿಲೀಂಧ್ರ ನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಎಲೆಗಳಿಗೆ ಸಿಂಪರಣೆ ಮಾಡಬೇಕು. ಪ್ರತಿ ಲೀಟರ್ ದ್ರಾವಣಕ್ಕೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಕಡ್ಡಾಯವಾಗಿ ಅಂಟನ್ನು ಸೇರಿಸಬೇಕು ಎಂದರು.

ಕಣ್ಣಿಗೆ ಕಾಣದ ಕೊಲೆಟೋಟ್ರೈಕಮ್ ಸ್ಪಿಸಸ್ ಮತ್ತು ಫಿಲೋಸ್ಟಿಕ್ಟಾ ಅರೆಕೆ ಎನ್ನುವ ಶಿಲೀಂಧ್ರದಿOದ ಎಲೆಚುಕ್ಕೆ ರೋಗ ಬರುತ್ತದೆ. ಅಧಿಕ ತೇವಾಂಶವಿರುವ ತೋಟಗಳಲ್ಲಿ ರೋಗದ ಪ್ರಮಾಣ ಹೆಚ್ಚಾಗಿದೆ. ಎಲೆಗಳ ಕೆಳಭಾಗದ ಸಂಪೂರ್ಣ ಮರಕ್ಕೆ ಔಷಧಿ ಸಿಂಪರಣೆ ಅತ್ಯಗತ್ಯ. –ಡಾ.ಪ್ರಸಾದ, ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿ

ರೋಗಗಳಿಗೆ ಸೂಕ್ತ ಔಷಧಿ ಕಂಡುಹಿಡಿದು ರೈತರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ತಜ್ಞರು ತೋಟಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಬೇಕು. ಯಾವ ಜೌಷಧಿ ಪರಿಣಾಮ ಬೀರುತ್ತದೆ ಎಂಬುದನ್ನು ವಿಜ್ಞಾನಿಗಳು ತಿಳಿದು, ರೈತರಿಗೆ ಮಾಹಿತಿ ಒದಗಿಸಬೇಕು. -ಭೀಮಣ್ಣ ನಾಯ್ಕ, ಶಾಸಕ

ವಿಸ್ಮಯ ನ್ಯೂಸ್, ಶಿರಸಿ

Exit mobile version