ಕರ್ನಾಟಕ ರಾಜ್ಯೋತ್ಸವದ ಆಚರಣೆ ನಿಮಿತ್ತ ಎರಡನೆ ಪೂರ್ವಭಾವಿ ಸಭೆ: ಸಭೆಗೆ ಗೈರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಆಗ್ರಹ
ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಪುರಸಭೆ ಮುಖ್ಯಾಧಿಕಾರಿ ನಡುವೆ ಮಾತಿನ ಜಟಾಪಟಿ
ಅಂಕೋಲಾ : ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ಆದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿ ರಾಜ್ಯ ಸರಕಾರ ಹೊರಡಿಸಿರುವ ಹೊಸ ಸುತ್ತೋಲೆಯ ಅನುಷ್ಠಾನದ ಕುರಿತು ತಾಲೂಕಿನ ನೂತನ ತಹಶೀಲ್ದಾರ ಬಿ ಜಿ ಕುಲಕರ್ಣಿಯವರ ಅಧ್ಯಕ್ಷತೆಯಲ್ಲಿ,ರಾಜ್ಯೋತ್ಸವ ಆಚರಣೆಯ ಎರಡನೆ ಪೂರ್ವಭಾವಿ ಸಭೆ ನಡೆಯಿತು.
ಸುತ್ತೋಲೆಯಲ್ಲಿ ಸೂಚಿಸಿರುವಂತೆ ಕರ್ನಾಟಕ ನಾಮಕರಣದ 50 ವರ್ಷದ ಪ್ರಯುಕ್ತ ನವೆಂಬರ 1 ರ ಬೆಳಿಗ್ಗೆ 9 ಗಂಟೆಗೆ ಆಕಾಶವಾಣಿ ಕೇಂದ್ರದಿಂದ ನಾಡಗೀತೆ ಪ್ರಸಾರವಾಗಲಿದ್ದು ನಾಡಗೀತೆಗೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುವದು ಹಾಗೂ ಈ ಮೊದಲೇ ನಿಗದಿ ಪಡಿಸಿದಂತೆ 5 ಗೀತೆಗಳನ್ನು ಹಾಡುವದು. ಸಂಜೆ 5 ಗಂಟೆಗೆ ತಾಲೂಕಿನ ವಿವಿಧ ಇಲಾಖೆಗಳು, ತಾ.ಪಂಚಾಯತ ಮತ್ತು ಗ್ರಾಮ ಪಂಚಾಯತಗಳ ವ್ಯಾಪ್ತಿಯ ಮೈದಾನಗಳಲ್ಲಿ ವಹಳದಿ ಕೆಂಪು ಬಣ್ಣದ ಗಾಳಿಪಟಗಳನ್ನು ಹಾರಿಸುವದು.
ಇಳಿಹೊತ್ತಿನಲ್ಲಿ ಮನೆಗಳ ಮುಂದೆ, ಅಂಗಡಿ ಮುಂಗಟ್ಟು ಕಚೇರಿಗಳ ಮುಂದೆ ಹಣತೆಯನ್ನು ಹಚ್ಚುವದು. ಮುಂತಾದ ವಿಷಯಗಳ ಕುರಿತು ನಿರ್ಣಯಿಸಲಾಯಿತು. ಹಾಗೂ ಇದರ ಕುರಿತು ವ್ಯಾಪಕ ಪ್ರಚಾರ ನಡೆಸುವ ಬಗ್ಗೆ ನಿರ್ಣಯಿಸಲಾಯಿತು. ಹಾಗೂ ರಾಜ್ಯೋತ್ಸವ ಮೆರವಣಿಗೆಯ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಪೂರ್ವಭಾವಿ ಸಭೆಗಳಿಗೆ ಸತತ ಗೈರು ಹಾಜರಾಗುತ್ತಿದ್ದ ಪುರಸಭೆಯ ಮುಖ್ಯಾಧಿಕಾರಿಗಳನ್ನು ವಿವಿಧ ಸಂಘಟನೆಗಳ ಪ್ರಮುಖರು ತೀವ್ರ ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ಕರ್ನಾಟಕ ಸಂಘದ ಅಧ್ಯಕ್ಷ ವಿಠಲದಾಸ ಕಾಮತ, ಹಿರಿಯರಾದ ಕಾಳಪ್ಪ ನಾಯಕ, ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ, ಸಿಡಿಪಿಓ ಸವಿತಾ ಶಾಸ್ತ್ರೀಮಠ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ ,ಸರಕಾರಿ ಪ. ಪೂ ಕಾಲೇಜಿನ ಪ್ರಾಚಾರ್ಯ ಮಹೇಶ ನಾಯಕ, ದಿನಕರ ವೇದಿಕೆ ಅದ್ಯಕ್ಷ ರವೀಂದ್ರ ಕೇಣಿ, ಜೈಹಿಂದ್ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರಭಾಕರ ಬಂಟ, ಕೆ.ಎಲ್. ಇ ಶಿಕ್ಷಣ ಸಂಸ್ಥೆಯ ನಾಗಮ್ಮ ಆಗೇರ, ವಕೀಲ ಉಮೇಶ ನಾಯ್ಕ, ಕರವೇ ಅಧ್ಯಕ್ಷ ಉದಯ ನಾಯ್ಕ,ಅಗ್ನಿಶಾಮಕ ಪ್ರಭಾರಿ ಠಾಣಾಧಿಕಾರಿ ಗಜಾನನ ನಾಯ್ಕ, ಸೇವಾದಳದ ಹೊನ್ನಪ್ಪ ನಾಯಕ, ಪುರಸಭೆ, ಕಂದಾಯ ಮತ್ತಿತರ ಕೆಲ ಇಲಾಖಾ ಸಿಬ್ಬಂದಿಗಳಿದ್ದರು. ಭಾವನಾ ನಾಯಕ ನಿರೂಪಿಸಿದರು.
ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆರಂಭವಾದ ಸಭೆ, ಸಭೆ ಆರಂಭವಾಗಿ ಬಹು ಹೊತ್ತಾದರೂ ಸಭೆಗೆ ಹಾಜರಾಗದ ಕೆಲ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ಅಸಮಾಧಾನದ ಮಾತು ಕೇಳಿ ಬಂತು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಹಲವು ಸಭೆಗಳಿಗೆ ಸರಿಯಾಗಿ ಹಾಜರಾಗುತ್ತಿಲ್ಲ. ಅವರನ್ನು ಕರೆಯಿಸಿಯೇ ಸಭೆ ಮಾಡಬೇಕೆಂದು ಕೆಲವರು ಪಟ್ಟು ಹಿಡಿದಾಗ, ತಹಶೀಲ್ದಾರ ಅವರು ಫೋನ್ ಕರೆ ಮಾಡಿ ಸಭೆಗೆ ಕರೆಯಿಸಿಕೊಂಡರು. ಈ ವೇಳೆ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷ ಮತ್ತು ಪುರಸಭೆ ಮುಖ್ಯಾಧಿಕಾರಿ ಇವರೀರ್ವರ ನಡುವೆ ತೀವೃ ಮಾತಿನ ಜಟಾಪಟಿ ನಡೆದು ಕೆಲಕಾಲ ಕಾವೇರಿದ ವಾತಾವರಣ ಕಂಡುಬಂತು. ಈ ವೇಳೆ ಪೋಲೀಸ್ ಇಲಾಖೆಯ ಸಿಬ್ಬಂದಿಗಳೂ ಇರಲಿಲ್ಲ. ನಂತರ ತಹಶೀಲ್ದಾರ ಹಾಗೂ ಇತರರು ವಾತಾವರಣ ತಿಳಿಗೊಳಿಸಿ, ಸಭೆ ಸೂಸೂತ್ರವಾಗಿ ನಡೆಯಿತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ