Focus News
Trending

ನವೆಂಬರ್ 5 ರಂದು ಉ.ಕ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ರಾಷ್ಟ್ರಮಟ್ಟಕ್ಕೆ ಭಾಗವಹಿಸಲು ಉದಯೋನ್ಮುಖ ಕ್ರೀಡಾಪಟುಗಳಿಗೆ ಆಯ್ಕೆ ಪ್ರಕ್ರಿಯೆ

ಅಂಕೋಲಾ: ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಉತ್ತರ ಕನ್ನಡ, ಮತ್ತು ಹಲವು ವಿಧಾಯಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಅಂಕೋಲಾ ಸ್ಪೋರ್ಟ್ಸ್ ಮತ್ತು ಸೋಷಿಯಲ್ ಅಸೋಸಿಯೇಷನ್ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2023 ಹಾಗೂ ಕಿರಿಯರ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯೆ ನವಂಬರ್ 5 ರಂದು ಅಂಕೋಲಾ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ, ಜಿಲ್ಲೆಯ ಹೆಸರಾಂತ ಹಿರಿಯ ಕ್ರೀಡಾಪಟು ಸದಾನಂದ ನಾಯಕ ತಿಳಿಸಿದರು.

ಅಂಕೋಲಾ ಸ್ಪೋರ್ಟ್ಸ್ ಅಸೋಸಿಯೇಷನ್ ಸಭಾಭವನದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾಕೂಟದಲ್ಲಿ ಭಾಗವಹಿಸುವ ಅಥ್ಲೀಟ್ ಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಯು.ಐಡಿ ಪಡೆಯಬೇಕಿದ್ದು ಈಗಾಗಲೇ 110 ಕ್ರೀಡಾ ಪಟುಗಳ ಅರ್ಜಿಗಳು ಬಂದಿದ್ದು ಸುಮಾರು 150 ರಿಂದ 180 ಅಥ್ಲೀಟ್ ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉದಯೋನ್ಮಖ ಕ್ರೀಡಾ ಪಟುಗಳನ್ನು ಗುರುತಿಸಲು ಮತ್ತು ರಾಷ್ಟ್ರ ಮಟ್ಟದಲ್ಲಿ ನೇರ ಅವಕಾಶ ದೊರಕಿಸಿಕೊಡಲು ಇದು ಸೂಕ್ತ ವೇದಿಕೆಯಾಗಲಿದೆ ಎಂದ ಅವರು ರಾಷ್ಟ್ರೀಯ ಅಥ್ಲೆಟಿಕ್ಸ್ ಅಸೋಸಿಯೇಷನ್ ನಿಯಮಗಳು ಮತ್ತು ಮಾನದಂಡಗಳ ಅಡಿಯಲ್ಲಿ ಕ್ರೀಡಾಕೂಟ ನಡೆಯಲಿದ್ದು 26 ಜನ ಪರಿಣಿತ ತಾಂತ್ರಿಕ ಅಧಿಕಾರಿಗಳು ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ, ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ನಿಂದ ಒಬ್ಬ ಅಧಿಕಾರಿ ಆಗಮಿಸಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಆರ್. ನಾಯಕ ಬೇಲೇಕೇರಿ ಮಾತನಾಡಿ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು ಆಯ್ಕೆ ಪ್ರಕ್ರಿಯೆ ಅತ್ಯಂತ ಮಹತ್ವದಾಗಿದ್ದು ಇಲ್ಲಿ ಆಯ್ಕೆ ಆದವರನ್ನು ರಾಷ್ಟ್ರ ಮಟ್ಟದಲ್ಲಿ ಅವಕಾಶ ನೀಡಲು ಸಾಮರ್ಥ್ಯ ಪರೀಕ್ಷೆ ಮತ್ತು ತರಬೇತಿ ಮೊದಲಾದ ಪ್ರಕ್ರಿಯೆಗಳು ಮುಂದಿನ ಹಂತದಲ್ಲಿ ನಡೆಯುತ್ತದೆ . ಕ್ರೀಡಾಕೂಟದ ಯಶಸ್ಸಿಗೆ ಅಂಕೋಲಾ ಸ್ಪೋರ್ಟ್ಸ್ ಅಸೋಸಿಯೇಷನ್ ಎಲ್ಲಾ ರೀತಿಯ ಪೂರ್ವ ತಯಾರಿ ನಡೆಸಿ ಸಹಕಾರ ನೀಡಿದೆ ಎಂದರು.

ಅಂಕೋಲಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿ.ಟಿ.ನಾಯಕ ಮಾತನಾಡಿ ದಿವಂಗತ ಸುಧಾಕರ ಫೈ ಮತ್ತು ಅವರ ಮಿತ್ರರು ಹುಟ್ಟುಹಾಕಿದ ಕ್ರೀಡಾ ಸಂಸ್ಥೆಗೆ 60 ವರ್ಷಗಳ ಇತಿಹಾಸವಿದ್ದು ತಾಲೂಕಿನಲ್ಲಿ ಹಲವಾರು ಕ್ರೀಡಾ ಚಟುವಟಿಕೆಗಳು ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಸಲಾಗಿದೆ, ಸುಧಾಕರ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಯಾರೂ ಮರೆಯಲು ಸಾಧ್ಯವಿಲ್ಲ ಇದೀಗ ತಾಲೂಕಿನಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಸ್ಪೋರ್ಟ್ಸ್ ಅಸೋಸಿಯೇಷನ್ ಕೈಜೋಡಿಸಿ, ಊಟ- ಉಪಹಾರ, ಕುಡಿಯುವ ನೀರು, ಸ್ಪರ್ಧಾಳುಗಳಿಗೆ ಬಹುಮಾನ ಮತ್ತಿತರ ಸೌಕರ್ಯ ಸೌಲಭ್ಯ ನೀಡಲು ಸಹಕರಿಸಲಿದೆ ಎಂದರು.

ಸ್ಪೋರ್ಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಲಕ್ಷ್ಮೇಶ್ವರ ದ ಮಂಜುನಾಥ ಕಳಸ,ನಮ್ಮ ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಚೆಸ್, ಕೇರಂ , ಬ್ಯಾಡ್ಮಿಂಟನ್ ಮತ್ತಿತರ ಪಂದ್ಯಾವಳಿ ಆಯೋಜಿಸಿ,ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಸಂಘಟನಾ ಸಮಿತಿಯ ಹಿರಿಯ ಸದಸ್ಯ ಆರ್.ಟಿ.ಮಿರಾಶಿ, ಪ್ರಮುಖರಾದ ಮಂಜುನಾಥ ನಾಯಕ ಭಾವಿಕೇರಿ, ರಾಘವೇಂದ್ರ ನಾಯಕ ಬೆಲೇಕೇರಿ , ನಿವೃತ್ತ ಶಿಕ್ಷಕ ಪ್ರಕಾಶ ಕುಂಜಿ, ರಾಜೇಶ ನಾಯಕ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಸರ್ವರ ಸಹಕಾರ ಕೋರಿದಾರಲ್ಲದೇ,ಜಿಲ್ಲೆಯ ಉದಯೋನ್ಮುಖ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ,ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ನಿವೃತ್ತ ಶಿಕ್ಷಕ ಎನ್ ಎಮ್ ನಾಯಕ ವಂದಿಸಿದರು.

ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ವಯೋಮಿತಿಗಣುಗುಣವಾಗಿ 4 ವಿಭಾಗಗಳಲ್ಲಿ ನಡೆಯಲಿದ್ದು 12 ರಿಂದ 20 ವಯಸ್ಸಿನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ನವೆಂಬರ್ 5 ರಂದು ಬೆಳಿಗ್ಗೆ 10.30 ಗಂಟೆಗೆ ಶಾಸಕ ಸತೀಶ ಸೈಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಟಿ.ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉದ್ಯಮಿ ಮಂಗಲದಾಸ ಕಾಮತ್, ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಸುನಿಲ್. ಎಂ ಪಾಲ್ಗೊಳ್ಳಲಿದ್ದು.
ಕ್ರೀಡಾ ಸಾಧಕ ಪೌಲ್ ಮ್ಯಾಥ್ಯೂ ಸುಂಕಸಾಳ, ಯಶಸ್ ಕುರುಬರ್ ಶಿರಸಿ ಮತ್ತು ನಯನಾ ಕೋಕರೆ ಮುಂಡಗೋಡ, ಸ್ಪೋರ್ಟ್ಸ್ ಅಸೋಸಿಯೇಷನ್ ಹಿರಿಯ ಸದಸ್ಯ ಆರ್.ಟಿ.ಮಿರಾಶಿ ಹಾಗೂ ವಿ.ಬಿ.ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button