ಅಂಕೋಲಾ : ಇತ್ತೀಚೆಗಷ್ಟೇ ತಾಲೂಕಿನ ಬಾಳೆಗುಳಿ ಹತ್ತಿರದ ಕೃಷ್ಣಾಪುರ – ಆರೇಗದ್ದೆ ಪ್ರದೇಶದಲ್ಲಿ ಸುಮಾರು 13 ಅಡಿ ಉದ್ದದ ಭಾರೀ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದ ಉರಗ ಸಂರಕ್ಷಕ ಅವರ್ಸಾದ ಮಹೇಶ್ ನಾಯ್ಕ,, ಇದಾಗಿ ವಾರ ಕಳೆಯುವುದರೊಳಗೇ , ಹಿಲ್ಲೂರ – ಹೊಸಕಂಬಿ ವ್ಯಾಪ್ರಿಯ ಬೋರಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಸುಮಾರು 9 ರಿಂದ 10 ಅಡಿ ಉದ್ದವಿರುವ ಇನ್ನೊಂದು ಸಾಮಾನ್ಯ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಸಂರಕ್ಷಿಸುವ ಮೂಲಕ ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.
ಬೋರಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಸಾಮಾನ್ಯ ಗಾತ್ರದ ಕಾಳಿಂಗಸರ್ಪ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.ಸ್ಥಳೀಯ ಪ್ರಮುಖರು,ಈ ವಿಷಯವನ್ನು ಹೊಸಕಂಬಿ ವ್ಯಾಪ್ತಿಯ ಅರಣ್ಯ ಇಲಾಖೆಯ ಗಮನಕ್ಕೆ ತಂದು ಅವರ ಮೂಲಕ ಅವರ್ಸಾದ ಮಹೇಶ್ ನಾಯ್ಕ ಅವರಿಗೆ ಫೋನ್ ಕರೆಯ ಮೂಲಕ ವಿಷಯ ತಿಳಿಸಿದ್ದರು.ತಮ್ಮ ಅಲ್ಪ ಪ್ರಮಾಣದ ಅನಾರೋಗ್ಯದ ನಡುವೆಯೂ,ಕರೆಯನ್ನು ನಿರಾಕರಿಸದ ಮಹೇಶ್ ನಾಯ್ಕ್, ಕಾಳಿಂಗ ಹಿಡಿಯಲು ಬರುವ ಭರವಸೆ ನೀಡಿದ್ದಾರೆ.
ದೂರದ ಅವರ್ಸಾದ ತನ್ನ ಮನೆಯಿಂದ ಸುಮಾರು 47 ಕಿ.ಮೀ ದೂರವಿರುವ ಬೋರಳ್ಳಿಗೆ ಮಹೇಶ ನಾಯ್ಕ ಬರುವಷ್ಟರಲ್ಲಿ ಮೂಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪ ತೆವಳುತ್ತಾ ತೆವಳುತ್ತಾ ಮುಂದೆ ಸಾಗಲಾರಂಭಿಸಿದೆ. ಈ ನಡುವೆ ಕಾಳಿಂಗ ಸರ್ಪದ ಹತ್ತಿರ ನಾಯಿಗಳು ಬೊಗಳುತ್ತಾ ಸಾಗಿದಾಗ , ಕಾಳಿಂಗ ಸರ್ಪವು ಹೆಡೆಯೆತ್ತಿ ನಿಂತಿದೆ. ಇದನ್ನು ಸ್ಥಳೀಯ ಕೆಲವರು ತಮ್ಮ ಮೊಬೈಲ್ ಕೆಮರಾಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಬರಬರುತ್ತಾ ಕತ್ತಲಾವರಿಸಿದೆ.
ಆದರೂ ಸ್ಥಳೀಯ ಗ್ರಾಮಸ್ಥರು ಹೆಡ್ ಲೈಟ್ ಮತ್ತು ಮೊಬೈಲ್ ಟಾರ್ಚ್ ಬೆಳಕಿನ ಮೂಲಕವೇ ಕಾಳಿಂಗದ ಚಲನವಲನಗನನ್ನು ಗಮನಿಸಿ,ಅದು ಹತ್ತಿರದ ಮುಳ್ಳು – ಗಿಡ ಗಂಟಿಗಳ ಪೊದೆಯೊಂದರ ಬಳಿ ನುಸುಳಿದಾಗ,ಸ್ಥಳೀಯರನೇಕರು ಮೊದೆಯ ಹೊರ ಭಾಗದಲ್ಲಿ ಸುತ್ತುವರಿದಿದ್ದಾರೆ. ನಾಯಿಗಳ ಬೊಗಳಾಟ,ಜನರ ಓಡಾಟ ಕಂಡು ಹಾವು ಸಹ ಕೊಂಚ ಗಾಬರಿಯಾದಂತೆ ಕಂಡುಬಂದು ಅಲ್ಲಿಯೇ ಅವಿತು ಕುಳಿತಿದೆ.ಈ ವೇಳೆಗಾಗಲೇ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,ಅವರ್ಸಾದ ಮಹೇಶ್ ನಾಯ್ಕರನ್ನು ಸ್ಥಳಕ್ಕೆ ಕರೆತಂದಿದ್ದಾರೆ.
ಮಹೇಶ್ ನಾಯ್ಕ ಜೊತೆ ಮಗ ಗಗನ ನಾಯ್ಕ,ಸಹೋದರನ ಮಗ ಸಾಯೀಶ ನಾಯ್ಕ ಮತ್ತು ಆಪ್ತ ಹರಿಶ್ಚಂದ್ರ ನಾಯ್ಕ ಹಾಗೂ ಬೋರಳ್ಳಿ ಮತ್ತು ಸುತ್ತಮುತ್ತಲಿನ ಹತ್ತಾರು ಪ್ರಮುಖರು, ಸ್ಥಳೀಯ ಅರಣ್ಯ ಇಲಾಖೆಯವರೊಂದಿಗೆ ಸೇರಿಕೊಂಡು ಕಾರ್ಯಚರಣೆ ನಡೆಸಿದ್ದಾರೆ.ಮಹೇಶ್ ನಾಯ್ಕ ತಮ್ಮ ಚಾಕಚಕ್ಯತೆಯಿಂದ ಮೊದಲು ಕಾಳಿಂಗ ಸರ್ಪದ ಬಾಲ ಹಿಡಿದು ನಿಧಾನವಾಗಿ ಎಳೆಯವ ಪ್ರಯತ್ನ ಮಾಡಿದರೂ, ಮುಳ್ಳು ಗಿಡ ಗಂಟಿಗಳ ಬಳಿ ಸುತ್ತಿಕೊಂಡ ಕಾಳಿಂಗ ಸರ್ಪ, ತನ್ನನ್ನು ಹಿಡಿಯುವ ಸೂಚನೆ ಅರಿತು ಸುಲಭವಾಗಿ ಹೊರ ಬರದೇ ಪ್ರತಿರೋಧ ತೋರಿದೆ.
ಆದರೂ ಛಲ ಬಿಡದ ಮಹೇಶ ನಾಯ್ಕ ಮತ್ತು ಟಿಂ, ಕಾಳಿಂಗವನ್ನು ಸೆರೆ ಹಿಡಿದು, ಅದು ಸುರಕ್ಷಿತವಾಗಿ ಚೀಲ ಸೇರುವಂತೆ ಮಾಡಿ, ಅಲ್ಲಿಯೇ ಇದ್ದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅದನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಹರ್ಷದಿಂದ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಸಂಭ್ರಮಿಸಿದ್ದಾರೆ.ಸ್ಥಳೀಯ ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆಯ ಪರವಾಗಿ ಮಾತನಾಡಿದ ಅರಣ್ಯ ಇಲಾಖೆ ಸಿಬ್ಬಂದಿ ರಾಘವೇಂದ್ರ ಅವರು,ಮಹೇಶ್ ನಾಯ್ಕ ಅವರ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಕಳೆದೊಂದು ವಾರದಲ್ಲಿಯೇ ಎರಡು ಕಾಳಿಂಗ ಸರ್ಪವನ್ನು ಹಿಡಿದು ಉರಗ ಸಂರಕ್ಷಣೆ ಮಾಡುವ ಜೊತೆ,ಸ್ಥಳೀಯರ ಆತಂಕ ದೂರ ಮಾಡಿದ್ದ ಮಹೇಶ ನಾಯ್ಕ ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಬೇರೆ ಬೇರೆ ಜಾತಿಯ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡಿರುವರಾದರೂ, ಇದು ಅವರು ಹಿಡಿದ 12 ನೇ ಕಾಳಿಂಗ ಸರ್ಪವಾಗಿದೆ. ಸ್ಥಳೀಯ ಯುವಕರು, ಮಹಿಳೆಯರು, ಮಕ್ಕಳು, ವೃದ್ಧರು, ಇತರರೂ ಸೇರಿ ನೂರಾರು ಜನ ಜಮಾಯಿಸಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ