Big News
Trending

ಕ್ಷತ್ರೀಯ ಕೋಮಾರಪಂಥ ಸಮಾಜದ ವೀರ ಪರಂಪರೆ ನೆನಪು: ವಿಜೃಂಭಣೆಯಿoದ ನಡೆದ ಹೊಂಡೆಯಾಟ

ಅಂಕೋಲಾ: ಕ್ಷತ್ರೀಯ ಕೊಮಾರಪಂಥ ಸಮಾಜದ ವೀರ ಪರಂಪರೆ ನೆನಪಿಸುವ ಹೊಂಡೆ ಆಟ, ದೀಪಾವಳಿಯ ದೊಡ್ಡ ಹಬ್ಬದ ದಿನ ಅಂಕೋಲಾದಲ್ಲಿ ವಿಜೃಂಭಣೆಯಿoದ ನಡೆಯಿತು. ಭಜರಂಗಿ, ಮಹಿಷಾಸುರ ಮರ್ದಿನಿ, ಶೃಂಗೇರಿ ಗುರುಗಳು, ಮಹಾದೇವ ಇತರೆ ಪೌರಾಣಿಕ ದೃಶ್ಯಾವಳಿ ಹಾಗೂ ಸ್ಥಬ್ದ ಚಿತ್ರಗಳು, ಚಂಡೆ ವಾದ್ಯ, ಸಿದ್ಧಿಗಳ ಡಮಾಮಿ, ಮತ್ತಿತರ ಕಲಾ ಪ್ರಕಾರಗಳೊಂದಿಗೆ ನಡೆದ ಬೃಹತ್ ಶೋಭಾ ಯಾತ್ರೆ ಜನ-ಮನ ಸೂರೆಗೊಂಡಿತು*

ದೀಪಾವಳಿಯ ದೊಡ್ಡ ಹಬ್ಬದ ದಿನದಂದು ಅಂಕೋಲಾ ತಾಲೂಕಿನಲ್ಲಿ ನಡೆಯುವ ಅಖಿಲ ಕೋಮಾರಪಂಥ ಸಮಾಜದ ಹೊಂಡೆ ಉತ್ಸವ ಅತ್ಯಂತ ವೈಭವದಿಂದ ನಡೆಯಿತು. ಕುಂಬಾರಕೇರಿ ಕಳಸ ದೇವಾಲಯದಿಂದ ಹೊರಟ ಕುಂಬಾರಕೇರಿ, ಲಕ್ಷ್ಮೇಶ್ವರ, ಭಟ್ಟನ ಭಾಗ, ಕೆರೆಕಟ್ಟಾ ಭಾಗ ಸೇರಿ ಕುಂಬಾರಕೇರಿಯ ಒಂದು ತಂಡ ಕಟ್ಟೆ ಮಹಾಗಣಪತಿ ದೇವಸ್ಥಾನ ಮಾರ್ಗವಾಗಿ, ಕದಂಬೇಶ್ವರ ದೇವಾಲಯದ ಎದುರು ಹೊಂಡೆಯ ಸಾಂಕೇತಿಕ ಪ್ರದರ್ಶನ ನೀಡಿ, ಬಂಡಿಕಟ್ಟೆ, ಹಳೆಪೇಟೆ , ನರಸಿಂಹ ದೇವಸ್ಥಾನ ಮಾರ್ಗವಾಗಿ ಪೇಟೆಯುತ್ತ ಮುಖ ಮಾಡಿ ರಣೋತ್ಸಾಹದೊಂದಿಗೆ ಸಾಗಿತು.

ಇದೇ ವೇಳೆ ಹೊನ್ನಿಕೇರಿ, ಪಳ್ಳಿಕೇರಿ, ಕನಸಿಗದ್ದೆ ಭಾಗವನ್ನೊಳಗೊಂಡ ಹೊನ್ನೇಕೇರಿ ತಂಡ ಮಹಾದೇವ ದೇವಾಲಯದಿಂದ ಹೊರಟು ತಾಲೂಕಿನ ಶಕ್ತಿ ದೇವತೆ ಶ್ರೀ ಶಾಂತಾದುರ್ಗಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಎದುರಿನ ಮುಖ್ಯ ರಸ್ತೆಯಲ್ಲಿ ಎದುರಾಳಿ ತಂಡದ ಜೊತೆ ಸೆಣಸಲು ಸಮರ ಸಿಧ್ಧತೆಯಲ್ಲಿತ್ತು.

ಕುಂಬಾರ ಕೇರಿ ತಂಡ ಮತ್ತು ಹೊನ್ನೇಕೇರಿ ತಂಡದವರು ಪರಸ್ಪರ ಎದುರಾಳಿಗಳಾಗಿ,ಕವಣೆಯಲ್ಲಿ ಹಿಂಡಲಕಾಯಿ ಹಾಕಿ ಎದುರಾಳಿಗಳ ಮಂಡಿಗಾಲಿಗಿoತ ಕೆಳ ಮಟ್ಟದಲ್ಲಿ ಗುರಿಯಿಟ್ಟು ಆಡುವ ಪರಿ ಅವರ ಪೂರ್ವಜರ ವಿರಾವೇಶದ ಹೋರಾಟವನ್ನು ಇಂದಿನ ಪೀಳಿಗೆಗೆ ನೆನಪಿಸುವ ಸಂಪ್ರದಾಯದoತೆ ಕಂಡು ಬಂತು. ಪಟ್ಟಣದ ಮುಖ್ಯ ರಸ್ತೆಯ 4-5 ಕಡೆ ಪರಸ್ಪರರು ಎದುರಾಗಿ ಆಡುವ ಈ ಆಟ ನೋಡುಗರ ಮೈ ಜುಂ ಎನ್ನಿಸುವಷ್ಟರ ಮಟ್ಟಿಗೆ ರೊಚ್ಚಿನ ಕಾಳಗದಂತಿತ್ತು. ಹೊಂಡೆಯಾಟ ಆಡಿದ ಕೋಮಾರಪಂಥ ಸಮಾಜದ ಕೆಲ ಹಿರಿಯರೊಂದಿಗೆ ಹೆಚ್ಚಿನ ಸಂಖ್ಯೆಯ ಯುವಕರು ಎದೆಯೊಡ್ಡಿ ನಿಂತು ಹಿರಿಯರ ಹಾಗೂ ಮುಖಂಡರ ಮಾರ್ಗದರ್ಶನದಲ್ಲಿ ತಮ್ಮ ಸಂಪ್ರದಾಯವನ್ನು ಮುಂದುವರೆಸಿ ಕ್ಷತ್ರೀಯ ವೀರ ಪರಂಪರೆ ನೆನಪಿಸುವಂತೆ ಉತ್ತಮ ಪ್ರದರ್ಶನ ನೀಡಿದರು.

ಹೊನ್ನೇಕೇರಿ ತಂಡದ ರತನ ಮತ್ತು ಕುಂಬಾರಕೇರಿಯ ಅಭಿ ಮತ್ತಿತರ ಯುವಕರ ಕವಣೆ ಸಪ್ಪಳ ನಿಂತವರ ಎದೆ ಝಲ್ ಎನ್ನಿಸುವಷ್ಟರ ಮಟ್ಟಿಗೆ ಸದ್ದು ಮಾಡಿದರೆ, ಈ ಎರಡೂ ತಂಡಗಳಲ್ಲಿ ಅನೇಕ ಹಿರಿ-ಕಿರಿಯರು ಮುನ್ನುಗ್ಗಿ ತೋರಿದ ಸಾಹಸ ಪ್ರದರ್ಶನಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಯಿತು. ದುರ್ಗಾ ಮಂದಿರದ ಎದುರು ಕೊನೆಯ ಕಾಳಗ ಮುಗಿಸಿ ಪಟ್ಟಣದ ದೊಡ್ಡ ದೇವರೆಂದೇ ಖ್ಯಾತವಾದ ವೆಂಕಟರಮಣ ದೇವಾಲಯಕ್ಕೆ ಸಾಗಿದ ಎರಡೂ ತಂಡಗಳು ದೇವಾಲಯದ ಎದುರು ಹಿಂಡಲಕಾಯಿ ಹೊಡೆದು ಕೊನೆಯ ಸುತ್ತು ಮುಗಿಸಿ ಸಮಾಜದ ಮತ್ತು ಸರ್ವರ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಿದರು..

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವಲಕ್ಕಿ ಪ್ರಸಾದ ವಿತರಿಸಲಾಯಿತು. ಸೋಲು – ಗೆಲುವು ಎನ್ನುವುದಕ್ಕಿಂತ ಸಹೋದರತೆ ಸಂಕೇತವಾಗಿ ಎರಡೂ ತಂಡಗಳಿಗೆ ಬಹುಮಾನ ರೂಪದಲ್ಲಿ ಮೊಗೆಕಾಯಿ ನೀಡಿ ಗೌರವಿಸಲಾಯಿತು. ನಂತರ ಅಲ್ಲಿಂದ ಎರಡೂ ತಂಡಗಳು ಶ್ರೀ ಶಾಂತಾದುರ್ಗಾ ದೇವಾಲಯಕ್ಕೆ ಮರಳಿ ಭಾತೃತ್ವ ಮೆರೆದವು. ನಂತರ ಸಂಜೆಯ ವೇಳೆ ವೆಂಕಟರಮಣ ದೇವಾಲಯದ ರಥಬೀದಿಯಿಂದ ಪಟ್ಟಣದ ಬಂಡಿ ಬಜಾರ ಬಳಿಯ ಆಡುಕಟ್ಟೆ ವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಜನರು ಶೋಭಾ ಯಾತ್ರೆ ಕಣ್ಣು ತುಂಬಿಸಿಕೊoಡರು. .

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Back to top button