ಠಾಣೆಗೆ ಬಂದ ಯುವತಿಯೊಂದಿಗೆ ಒರಟು ವರ್ತನೆ : ನೊಂದ ಯುವತಿಯಿಂದ ಹವಾಲ್ದಾರ್ ವಿರುದ್ಧ ಎಸ್ಪಿಗೆ ದೂರು

ಅಂಕೋಲಾ: ತಾನು ನೀಡಿರುವ ದೂರಿನ ಕುರಿತು ವಿಚಾರಣೆ ನಡೆಸಲು ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿದ್ದ ಯುವತಿ ಓರ್ವಳೊಂದಿಗೆ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ್ (ಹೆಚ್ ಸಿ 1428) ಒಬ್ಬರು ಒರಟುತನದ ವರ್ತನೆ ತೋರಿದ್ದು ಈ ಕುರಿತು ನೊಂದ ಯುವತಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದಾರೆ.

ತಾಲೂಕಿನ ಬೆಲೇಕೇರಿಯ ನಿವಾಸಿ ರಂಜಿತಾ ನಾಗಪ್ಪ ಬಾನಾವಳಿಕರ ಎಂಬಾಕೆ ತಾನು ಈ ಮೊದಲು ಬೇರೊಂದು ವಿಷಯದಲ್ಲಿ ನೀಡಿದ್ದ ದೂರಿನ ಕುರಿತು ವಿಚಾರಿಸಲು ಕಳೆದ ಗುರುವಾರ ಬೆಳಿಗ್ಗೆ 11.15 ರ ಸುಮಾರಿಗೆ ಪೋಲೀಸ್ ಠಾಣೆಗೆ ಬಂದು, ಅಲ್ಲಿ ಮಹಿಳಾ ಸಿಬ್ಬಂದಿ ಪದ್ಮಾ ಎನ್ನುವವರಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡಾಗ ಅಲ್ಲಿ ಕರ್ತವ್ಯದಲ್ಲಿದ್ದ ಹವಾಲ್ದಾರ್ ಆದಂ ಶೇಖ್ ಎನ್ನುವವರು ಯುವತಿಗೆ ಏರು ಸ್ವರದಲ್ಲಿ ಒರಟಾಗಿ ಭಯ ಬರುವಂತೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಆ ವೇಳೆ ಯುವತಿ ಪೋಲೀಸ್ ಹೆಚ್ ಸಿ ಹೆಸರನ್ನು ತಿಳಿದು ಕೊಳ್ಳುವ ಪ್ರಯತ್ನ ನಡೆಸಿದಾಗ, ತಮ್ಮ ಸಮವಸ್ತ್ರದ ಮೇಲಿನ ಹೆಸರಿನ ಪಟ್ಟಿಯನ್ನು ಕೈಯಿಂದ ಮುಚ್ಚಿ ಹೊರಗಡೆ ಹೋಗಿ ನೇಮ್ ಪ್ಲೇಟ್ ತೆಗೆದು ಕಿಸೆಯಲ್ಲಿ ಹಾಕಿ ಬಂದು, ಯಾರಿಗೆ ಬೇಕಾದರೂ ದೂರು ನೀಡು ನನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗದರಿಸಿರುವುದಾಗಿ ನೊಂದ ಯುವತಿ ಕಾರವಾರಕ್ಕೆ ತೆರಳಿ, ಪೊಲೀಸ್ ವರಿಷ್ಠರಿಗೆ ನೀಡಲಾದ ದೂರಿನಲ್ಲಿ ತಿಳಿಸಿದ್ದು ಈ ಕುರಿತು ಅಂಕೋಲಾ ಪೋಲೀಸ್ ಠಾಣೆಯ ಸಿ.ಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುವಂತೆ ಆಗ್ರಹಿಸಿದ್ದಾರೆ.

ಅಂಕೋಲಾ ಮೂಲದವರೇ ಆಗಿರುವ ಆದಂ ಶೇಖ್ ಇತ್ತೀಚೆಗಷ್ಟೇ ಜಿಲ್ಲೆಯ ಬೇರೆ ಠಾಣೆಯಿಂದ ಅಂಕೋಲಾಕ್ಕೆ ವರ್ಗವಾಗಿ ಬಂದಿದ್ದು, ಊರಿನಲ್ಲಿಯಾದರೂ ಜನ ಸ್ನೇಹಿ ಸೇವೆ ನೀಡಬೇಕಿದ್ದ ಇವರು,ಯಾಕೆ ಹಾಗೆ ಒರಟು ವರ್ತನೆ ತೋರಿದ ರೋ ಎಂದು ಕೆಲ ಸ್ಥಳೀಯರು ಮಾತನಾಡಿಕೊಳ್ಳುವಂತಾಗಿದೆ.ಮೇಲಾಧಿಕಾರಿಗಳ ತನಿಖೆ ಮತ್ತು ವಿಚಾರಣೆ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದ ಕ್ರಮದ ಕುರಿತು ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version