Focus News
Trending

ನೂರಾರು ಕುಟುಂಬಗಳಿoದ ಏಕಕಾಲದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಅಂಕೋಲಾ: ನೂರಾರು ಕುಟುಂಬಗಳು ಏಕಕಾಲದಲ್ಲಿ ಸತ್ಯನಾರಾಯಣ ವ್ರತ ಕೈಗೊಳ್ಳುವ ಮೂಲಕ ಅಂಕೋಲಾ ತಾಲೂಕಿನ ವಂದಿಗೆ ವಲಯ ವ್ಯಾಪ್ತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಸಾಮೂಹಿಕ ಸತ್ಯನಾರಾಯಣ ಪೂಜೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಆಧುನಿಕ ಜಗತ್ತಿನಲ್ಲಿ ಪಾರಂಪರಿಕ ಕುಟುಂಬ ಪದ್ಧತಿ ಮರೆಯಾಗುತ್ತಿದ್ದು,ಸತ್ಯನಾರಾಯಣ ಪೂಜೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಧರ್ಮ ಜಾಗೃತಿ ಮೂಡಿಸಬೇಕಿದೆ ಎಂದು ಅಂಗಡಿಬೈಲ್ ಗಣಪತಿ ಹೆಗಡೆ ಹೇಳಿದರು. ಅವರು ಪಟ್ಟಣದ ವಂದಿಗೆಯ ಹೊನ್ನಾರಾಕಾ ಸಭಾಭವನದಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್, ಅಂಕೋಲಾ ತಾಲೂಕು ವಂದಿಗೆ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವಂದಿಗೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೋಶ್ರೀ ಡಾ. ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಮೂಹಿಕವಾಗಿ ಹಮ್ಮಿಕೊಂಡ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಈ ಹಿಂದೆ ಕುಟುಂಬ ಸಾಮರಸ್ಯ ಪದ್ಧತಿಯೇ ಎಲ್ಲರನ್ನೂ ಒಂದುಗೂಡಿಸುತ್ತಿತ್ತು. ಕುಟುಂಬಗಳು ಭಜನೆ, ದೈವ ಕಾರ್ಯ, ಹಬ್ಬ ಹರಿದಿನಗಳನ್ನು ಎಲ್ಲವನ್ನೂ ಸಮನ್ವಯತೆಯಿಂದ ಆಚರಿಸುತ್ತಿದ್ದವು.

ಆದರೆ ಈಗ ಪಾಶ್ಚಾತ್ಯ ಸಂಸ್ಕ್ರತಿಯ ಪ್ರಭಾವದಿಂದ ನಮ್ಮ ಸಂಸ್ಕ್ರತಿಗಳು ಮರೆಯಾಗುತ್ತಿವೆ. ಸಂಸ್ಕ್ರತಿಯಲ್ಲೂ ವೈಜ್ಞಾನಿಕ ಲಾಭಗಳಿವೆ. ದೈವ ದ್ರೋಹ, ದೈವ ನಿಂದನೆ ಸಲ್ಲದು. ಜಾತೀಯತೆ ಬಿಟ್ಟು ಮಾನವೀಯ ಮೌಲ್ಯಗಳಿಂದ ಮನುಷ್ಯ ದೇವ ಮಾನವರಾಗಬಹುದು ಎಂದರು.
ಪುರಸಭೆಯ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಶಾಂತಲಾ ನಾಡಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದು ಅದನ್ನು ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬನೆಯನ್ನು ಸಾಧಿಸಬೇಕು ಎಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ವಿನೋದ್ ವಿ ಶಾನಭಾಗ ಮಾತನಾಡಿ ಡಾ. ವೀರೇಂದ್ರ ಹೆಗಡೆಯವರು ಕೇವಲ ವ್ಯಕ್ತಿಯಲ್ಲ ಅವರೊಂದು ಶಕ್ತಿ. ಧರ್ಮ ರಕ್ಷಣೆಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ದೈವತ್ವದ ಬಗ್ಗೆ ಯುವಕ ಯುವತಿಯರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ಯೋಜನಾಧಿಕಾರಿ ಶಶಿರೇಖಾ ಪಿ. ಪ್ರಾಸ್ತಾವಿಕ ಮಾತನಾಡಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರು ವಲಯಗಳಲ್ಲಿ ಒಟ್ಟೂ 109 ಕಾರ್ಯಕರ್ತರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದು 19850 ಸದಸ್ಯರಿಗೆ ಈ ವರೆಗೆ 4 ಕೋಟಿ 72 ಸಾವಿರ ರೂ. ಸಾಲ ವಿತರಿಸಲಾಗಿದೆ. ಶೇ. 98% ರಷ್ಟು ಮರುಪಾವತಿಯ ಪ್ರಗತಿಯನ್ನೂ ಸಾಧಿಸಲಾಗಿದೆ.

ಟ್ರಸ್ಟ್ ಮೂಲಕ ಕೃಷಿ ತರಬೇತಿ, ಅಧ್ಯಯನ ಪ್ರವಾಸ, ಸ್ವ ಉದ್ಯೋಗ ಮುಂತಾದ ತರಬೇತಿಗಳನ್ನು ನೀಡಲಾಗುತ್ತಿದೆ. ಜನವರಿಯಲ್ಲಿ ಅಂಕೋಲಾದಲ್ಲಿ ಮದ್ಯವರ್ಜನ ಶಿಬಿರವನ್ನೂ ಆಯೋಜಿಸಲಾಗುತ್ತಿದ್ದು ಸರ್ವರ ಸಹಕಾರ ಸ್ವರಿಸಿ, ಮಹಿಳಾ ಸ್ವಾವಲಂಬಿ, ಅಶಕ್ತರಿಗೆ ನೆರವು, ಸಮುದಾಯ ಅಭಿವೃದ್ಧಿ ಕಾರ್ಯಗಳು ಮತ್ತಿತ್ತರ ಯೋಜನೆಗಳ ಕುರಿತು ವಿವರಿಸಿದರು.

ಹೊನ್ನಾರಾಕಾ ಸಭಾಭವನ ಸಮಿತಿಯ ಪ್ರಮುಖರಾದ ರಾಮಚಂದ್ರ ನಾಯಕ ಕಾರ್ಯಕ್ರಮ ಉದ್ಘಾಟಿಸಿ,ತಮ್ಮ ಸಭಾಭವನದಲ್ಲಿ ಇಂತಹ ಉತ್ತಮ ಕಾರ್ಯ ಹಮ್ಮಿಕೊಂಡಿರುವುದಕ್ಕೆ ಮೆಚ್ಚುಗೆ ಸೂಚಿಸಿದರು. ಕು ಮೇಘನಾ ಪ್ರಾರ್ಥಿಸಿದರು. ಪುಟಾಣಿ ಒಬ್ಬಳು ಪ್ರದರ್ಶಿಸಿದ ಯಕ್ಷ ನೃತ್ಯ ಗಮನ ಸೆಳೆಯಿತು. ಗ್ರೇಡ್ 2 ತಹಶೀಲ್ದಾರ್ ಬಿ ಜಿ ಕುಲಕರ್ಣಿ ಅಡಿಕೆ ಹಿಂಗಾರ ಹೂವು ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.,

ಪಿಎಸ್ಐ ಸುನಿಲ್ ಹಳ್ಳೊಳ್ಳಿ, ಸಾಮಾಜಿಕ ಕಾರ್ಯಕರ್ತ ಮಹೇಶ ನಾಯ್ಕ ಅವರ್ಸಾ, ವಂದಿಗೆ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷೆ ಪುಷ್ಪಲತಾ ನಾಯಕ ಸಾಂಧರ್ಭಿಕವಾಗಿ ಮಾತನಾಡಿ,ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶಿಸ್ತು ಬದ್ಧ ಸಂಘಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೋದಾವರಿ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್, ರಾಘವೇಂದ್ರ ಡಿ ನಾಯಕ ದೇವರ ಬಾವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಕೋರಿದರು. ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶೋಭಾ ಪೂಜಾರಿ ಸ್ವಾಗತಿಸಿದರು. ಮೇಲ್ವಿಚಾರಕ ಅಶೋಕ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟನ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ವಂದಿಗೆಯ ವಲಯದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ನೂರಾರು ಕುಟುಂಬಗಳ ಸದಸ್ಯರು, ಇತರರು ಏಕ ಕಾಲದಲ್ಲಿ ಸತ್ಯನಾರಾಯಣ ಕಥಾವೃತದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಿದವು.ಹಿರಿಕಿರಿಯರೆನ್ನದೇ ಹಲವರು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶನ ತೋರ್ಪಡಿಸಿದರು. ಕರೋನಾ ಕಾಲಾವಧಿಯ ನಂತರ ನೂತನ ಯೋಜನಾಧಿಕಾರಿಗಳ ಮಾರ್ಗದರ್ಶನದಲ್ಲಿ ದೊಡ್ಡ ಮಟ್ಟದ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಹಲವರು ಮೆಚ್ಚುಗೆ ಸೂಚಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button