Important
Trending

ಸರ್ಕಾರದ ವಿಳಂಬ ನೀತಿಗೆ ರೋಸಿಹೋದ ಗ್ರಾಮಸ್ಥರು: ಊರವರೇ ಸೇರಿಕೊಂಡು ತಾತ್ಕಾಲಿಕ ಅಂಗನವಾಡಿ ನಿರ್ಮಾಣ

ಸರ್ಕಾರದ ವಿಳಂಬ ನೀತಿಗೆ ರೋಸಿಹೋದ ಗ್ರಾಮಸ್ಥರು: ಊರವರೇ ಸೇರಿಕೊಂಡು ತಾತ್ಕಾಲಿಕ ಅಂಗನವಾಡಿ ನಿರ್ಮಾಣ: ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ ವರ್ಗ

ಸಿದ್ದಾಪುರ: ಶಿಕ್ಷಣದಿಂದ ವಂಚಿತವಾಗುವುದನ್ನು ತಪ್ಪಿಸಲು ಸರ್ಕಾರ ಅಂಗನವಾಡಿಗಳನ್ನು ತೆರೆದಿದೆ. ಆದರೆ ಉತ್ತರಕನ್ನಡ ಜಿಲ್ಲೆಯ ಅದೇಷ್ಟೋ ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳೆ ಇಲ್ಲ. ಇದ್ದ ಕೆಲ ಕಟ್ಟಡಗಳು ದುರಸ್ತಿಗೆ ತಲುಪಿ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದರೂ ಕೆಲ ತಿಂಗಳಿoದ ಬಾಡಿಗೆ ಕೂಡ ಕಟ್ಟಿಲ್ಲ. ಆದರೆ ಕಟ್ಟಡ ಮಂಜೂರಿಯಾಗುವುದೆoದು ಕಾದು ಕುಳಿತಿದ್ದ ಇಲ್ಲೊಂದು ಗ್ರಾಮದ ಜನರು ಸರ್ಕಾರ ವಿಳಂಭ ನೀತಿಗೆ ರೋಸಿ ಹೋಗಿ ಇದೀಗ ಊರವರೇ ಸೇರಿ ತಾತ್ಕಾಲಿಕ ಅಂಗನವಾಡಿಯೊoದನ್ನು ನಿರ್ಮಿಸಿಕೊಂಡಿದ್ದು ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ಒಂದೆಡೆ ದುರಸ್ಥಿಗೆ ತಲುಪಿ ಬಾಗಿಲು ಹಾಕಿಕೊಂಡಿರುವ ಅಂಗನವಾಡಿ ಕಟ್ಟಡ. ಇನ್ನೊಂದೆಡೆ ಪಕ್ಕದಲ್ಲಿಯೇ ತಾತ್ಕಾಲಿಕ ಅಂಗನವಾಡಿ ನಿರ್ಮಾಣಕ್ಕೆ ಮುಂದಾಗಿರುವ ಗ್ರಾಮಸ್ಥರು. ಮತ್ತೊಂದೆಡೆ ನಿರ್ಮಾಣಗೊಂಡ ಅಂಗನವಾಡಿಯಲ್ಲಿ ಖುಷಿಯಿಂದಲೇ ಪೂಜೆ ಸಲ್ಲಿಸುತ್ತಿರುವ ಮಕ್ಕಳು. ಈ ದೃಶ್ಯಗಳು ಕಂಡುಬoದಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಉಡಳ್ಳಿ ಗ್ರಾಮದಲ್ಲಿ.

ಹೌದು ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ದುರಸ್ತಿಗೆ ತಲುಪಿತ್ತು. ಕಳೆದ ವರ್ಷ ಅಂಗನವಾಡಿಯಲ್ಲಿ ಮಕ್ಕಳನ್ನು ಕೂರಿಸುವುದು ಅಪಾಯಕಾರಿಯಾಗಿರುವುದರಿಂದ ಅಧಿಕಾರಿಗಳು ಬಾಡಿಗೆ ಕಟ್ಟಡ ನೋಡಲು ಸೂಚಿಸಿದ್ದರು. ಆದರೆ ಗ್ರಾಮದಲ್ಲಿ ಬಾಡಿಗೆ ಕಟ್ಟಡ ಸಿಗದ ಕಾರಣ ಗ್ರಾಮದಲ್ಲಿಯೇ ಓರ್ವವರು ತಮ್ಮ ಮನೆಯ ಒಂದು ಕೋಣೆಯನ್ನೇ ಮೂರು ತಿಂಗಳ ಅವಧಿಗೆ ಮಕ್ಕಳ ವಿದ್ಯಾರ್ಜನೆಗೆ ನೀಡಿದ್ದರು.

ಇತ್ತ ಕಟ್ಟಡ ಮಂಜೂರಿಗಾಗಿ ಕಾದು ಕುಳಿತ್ತಿದ್ದ ಊರವರು ಇಲಾಖೆಗಳಿಗೆ, ಅಧಿಕಾರಿಗಳಿಗೆ ಅದೇಷ್ಟೇ ಮನವಿ ಮಾಡಿದರೂ ಇವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಮನೆಯವರು ಕೊಟ್ಟ ಅವಧಿ ಕೂಡ ಮುಕ್ತಾಯಗೊಂಡ ಕಾರಣ ಇದೀಗ ಉಡಳ್ಳಿ ಬಿಳೆಗೋಡ ಗ್ರಾಮಸ್ಥರು ಸೇರಿ ಹಳೆ ಅಂಗನವಾಡಿ ಕಟ್ಟಡದ ಬಳಿಯೇ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡಿದ್ದಾರೆ.

ಇದೀಗ ಅಂಗನವಾಡಿ ಸಿದ್ದಗೊಂಡಿದ್ದು ಇಂದು ಮಕ್ಳಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪೂಜೆ ಸಲ್ಲಿಸಿ ಅಂಗನವಾಡಿಯಲ್ಲಿ ವಿದ್ಯಾಭ್ಯಾಸ ಆರಂಭ ಮಾಡಿದ್ದಾರೆ. ಗ್ರಾಮದಲ್ಲಿರುವ ಅಂಗನವಾಡಿ ದುರಸ್ಥಿಗೊಂಡು ಹಲವು ವರ್ಷ ಕಳೆದಿದ್ದು, ಈವರೆಗೂ ಕಟ್ಟಡ ಮಂಜೂರಿಯಾಗಿಲ್ಲ. ಅಂಗನವಾಡಿಯಲ್ಲಿ ಸುಮಾರು 20 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈ ಅಂಗನವಾಡಿ ಬಿಟ್ಟರೆ ನಾಲ್ಕೈದು ಕಿ.ಮೀ ದೂರ ಹೋಗಬೇಕಿದೆ. ಆದ್ದರಿಂದ ಕೂಡಲೇ ಸರ್ಕಾರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಮಂಜೂರಿಸಬೇಕು ತುರ್ತಾಗಿ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇನ್ನು ಜಿಲ್ಲೆಯಲ್ಲಿ 2782 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 322 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಂಗನವಾಡಿಗಳಿಗೆ ಕಳೆದ ಏಪ್ರಿಲ್ ತಿಂಗಳಿನಿoದ ಇದುವರೆಗೆ ಸುಮಾರು 8 ತಿಂಗಳ ಬಾಡಿಗೆ ಹಣ ಸರ್ಕಾರದಿಂದ ಪಾವತಿಯಾಗಿಲ್ಲ. ಹೀಗಾಗಿ ಅಂಗನವಾಡಿ ಸಿಬ್ಬಂದಿಯೇ ತಮ್ಮ ವೇತನದಲ್ಲಿಯೇ ಪ್ರತಿ ತಿಂಗಳ ಬಾಡಿಗೆಯನ್ನ ಪಾವತಿಸಬೇಕಾಗಿದೆ.

ಇನ್ನು ಈ ಬಗ್ಗೆ ಅಧಿಕಾರಿಗಳ ಕೇಳಿದ್ರೆ ಅಂಗನವಾಡಿಗಳ ಬಾಡಿಗೆ ಪಾವತಿ ವಿಳಂಬವಾಗಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸಂಬoಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ. ಇದೀಗ ಮತ್ತೊಮ್ಮೆ ಖುದ್ದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಆದಷ್ಟು ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸೋದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದ್ರೂ ಸಹ ಗ್ಯಾರೆಂಟಿ ಯೋಜನೆಗಳ ಬಗ್ಗೆ ತಲೆಕೆಡಿಸಿಕೊಂಡ ಸರ್ಕಾರ ಅಂಗನವಾಡಿಗಳ ಬಾಡಿಗೆ ಹಾಗೂ ಕಟ್ಟಡ ಮಂಜೂರಿಗೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನಿಜಕ್ಕೂ ದುರಂತವೇ. ಇನ್ನಾದ್ರೂ ಸರ್ಕಾರ ಈ ಬಗ್ಗೆ ಎಚ್ಚೆತ್ತು ಅಂಗನವಾಡಿಗಳ ಬಾಡಿಗೆ ಹಾಗೂ ಕಟ್ಟಡ ಸಮಸ್ಯೆ ಶಾಶ್ವತ ಪರಿಹಾರ ಒದಗಿಸುವತ್ತ ಗಮನಹರಿಸಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button