ತಾಲೂಕಾಡಳಿತದ ಕಣ್ಣೆದುರೇ ಅಕ್ರಮ ಮರಳು ದಂಧೆ ? ಬೇಕಾ ಬಿಟ್ಟಿ ಸಾಗಾಟ ಶಂಕೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಅಂಕೋಲಾ: ಬಡವರ ಪಾಲಿಗೆ ಕಬ್ಬಿಣದ ಕಡಲೆಯಂತಾದ ಕಾನೂನಿನ ಬಿಗಿ ಕ್ರಮಗಳಿಂದ ಜನಸಾಮಾನ್ಯರು ಮನೆ, ಕೊಟ್ಟಿಗೆ,, ಶೌಚಾಲಯ ಮತ್ತಿತರ ಅತ್ಯವಶ್ಯ ಕಟ್ಟಡ ಕಟ್ಟಲೂ ಮರಳು ಸಿಗದೇ ಪರದಾಡುತ್ತಿರುವಾಗ, ತಾಲೂಕಿನಲ್ಲಿ ನಡೆಯುತ್ತಿರುವ ಒಬ್ಬೂ ಅಂದಾಜು 5 ಕೋಟಿ ರೂ ಗಳ 1-2 ಸರ್ಕಾರಿ ಕಾಮಗಾರಿ ಹೆಸರಿನಲ್ಲಿ ಕುಮಟಾದಿಂದ ಬೇಕಾ ಬಿಟ್ಟಿಯಾಗಿ ಮರಳು ತಂದು ಸಂಗ್ರಹ ಮಾಡುತ್ತಿರುವ ಸಾಧ್ಯತೆ ಕುರಿತು ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಮೇಲ್ಮಹಡಿ ಮತ್ತು ಪಕ್ಕದಲ್ಲೇ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಇನ್ನೊಂದು ದೊಡ್ಡ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇವೆರಡೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನ ಕಡೆಯವರು, ತಮ್ಮ ಮನಸೋ ಇಚ್ಛೆ ಎಂಬಂತೆ ರಾತ್ರಿ ಮತ್ತಿತರ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಂಗ್ರಹ ಮಾಡಿ ಇಡುತ್ತಿರುವುದು ಮತ್ತು ಇವನ್ನೆಲ್ಲಾ ಗಮನಿಸಬೇಕಾಗಿದ್ದ ಕೆಲ ಅಧಿಕಾರಿಗಳು ಸುಮ್ಮನಿರುವುದಕ್ಕೆ ಕೆಲ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದಂತಿತ್ತು.
ಈ ಹಿನ್ನಲೆಯಲ್ಲಿ ಹಿರಿಯ ಭೂ ವಿಜ್ಞಾನಿ ಆಶಾ ಎಂ.ಎಸ್, ಮತ್ತು ಭೂ ವಿಜ್ಞಾನಿ ಮಂಜುನಾಥ ದೇವಾಡಿಗ ಅವರು ಅಂಕೋಲಾಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸರ್ಕಾರಿ ಕಾಮಗಾರಿ ಹೆಸರಿನಲ್ಲಿ ಸರಿಯಾದ ಪರವಾನಿಗೆ ಇಲ್ಲದೇ ಹೆಚ್ಚಿನ ಪ್ರಮಾಣದ ಮರಳು ಸಂಗ್ರಹ ಮಾಡಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ , ಮರಳು ಸಂಗ್ರಹ ಪ್ರಮಾಣ, ಸಾಗಾಟ ಪರವಾನಿಗೆ ಮತ್ತಿತರ ದಾಖಲಾತಿ ನೀಡುವಂತೆ ಗುತ್ತಿಗೆದಾರರ ಕಡೆಯವರಿಗೆ ಕೇಳಿ , ಸದ್ಯ ಕಾಮಗಾರಿ ಸ್ಥಗಿತ ಗೊಳಿಸುವಂತೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ವತಿಯಿಂದ 51 ಮೆ ಟನ್ ಮರಳು ಪಡೆಯಲಾಗಿದ್ದು, ಇತರೆ ಪ್ರಮಾಣದ ಮರಳನ್ನು 2022 ರಲ್ಲಿಯೇ ಕುಮಟಾದಲ್ಲಿ ದಾಸ್ತಾನು ಮಾಡಿಕೊಂಡಿದ್ದೆವು ಎಂಬ ಹಾರಿಕೆ ಉತ್ತರ ನೀಡಲು ಮುಂದಾದ ಗುತ್ತಿಗೆದಾರನ ಕಡೆಯವರ ಮಾತು ಕೇಳದ ಮಹಿಳಾ ಅಧಿಕಾರಿ, ಬಡವರಿಗೊಂದು – ನಿಮಗೊಂದು ಕಾನೂನಿಲ್ಲ ದಾಖಲಾತಿ ಇಲ್ಲದಿದ್ದರೆ ದಂಡ ವಸೂಲಿ ಮಾಡಲಾಗುವುದೆಂದು ಎಚ್ಚರಿಸಿದರು.
ಈ ವೇಳೆ ಗುತ್ತಿಗೆದಾರನ ಕಡೆಯವರು, ನಾವು ರಾಜಧನ ಕಟ್ಟುತ್ತೇವೆ . ಎಲ್ಲವೂ ಕಾನೂನೇ ಆದರೆ ಮತ್ತೆ ಕಾಮಗಾರಿ ನಿರ್ವಹಿಸುವುದು ಹೇಗೆ ಎಂದು ಸ್ವಲ್ಪ ಏರು ದನಿಯಲ್ಲಿ ಹೇಳಿದಾಗ, ಅದಕ್ಕೆ ಜಗ್ಗದ ಅಧಿಕಾರಿ, ನನಗೂ ಹಳೆಯ ಮರಳು ಯಾವುದು ? ಹೊಸದು ಯಾವುದು ಗೊತ್ತಿದೆ. ಒಂದೊಮ್ಮೆ ನಿಮ್ಮ ಬಳಿ ದಾಸ್ತಾನು ಇದ್ದರೂ ಅದರ ಸಾಗಾಟಕ್ಕೆ ಅನುಮತಿ ನೀಡಿದವರಾರು ? ಇಲ್ಲಿರುವ ಕೆಂಪು ಕಲ್ಲು, ಜಲ್ಲಿ ಮತ್ತಿತರ ಸಾಮಾಗ್ರಿ ಸಂಗ್ರಹದ ಬಗ್ಗೆಯೂ ದಾಖಲಾತಿ ಕೊಡಿ ಎಂದಾಗ ಗುತ್ತಿಗೆದಾರನ ಕಡೆಯವರು ಸರಿಯಾಗಿ ಉತ್ತರಿಸಿಲಾಗದೇ ಪೆಚ್ಚು ಮೋರೆ ಹಾಕಿದಂತಿತ್ತು.
ಗುತ್ತಿಗೆದಾರರ ಕಡೆಯವರು ಹಳೆಯ ಮರಳನ್ನು ತಂದು ಸಂಗ್ರಹ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರಾದರೂ ಹೀಗೆ ಮರಳು ಸ್ಥಳಕ್ಕೆ ಸಾಗಿಸಲು ಯಾವುದೇ ರೀತಿಯ ಅನುಮತಿ ಪಡೆದಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದೀಗ ಯಾವುದೇ ಕಾಮಗಾರಿಗೆ ಮರಳು ಪಡೆಯಲು ಅವಕಾಶ ಇಲ್ಲ. ಇಲಾಖೆ ಜಪ್ತಿ ಮಾಡಿರುವ ಅಕ್ರಮ ಸಾಗಾಟದ ಮರಳನ್ನು ಮಾತ್ರ, ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿಗೆ ನೀಡಲು ಅವಕಾಶ ಇದೆ ಎಂದು ತಿಳಿಸಿದ ಭೂ ವಿಜ್ಞಾನಿ ತಹಶೀಲ್ಧಾರ ಕಾರ್ಯಾಲಯದ ಆವರಣದಲ್ಲಿ ಮತ್ತು ಲೋಕೋಪಯೋಗಿ ವಸತಿಗೃಹ ಕಾಮಗಾರಿ ಸ್ಥಳದಲ್ಲಿ ಮರಳು ಸಂಗ್ರಹ ಮಾಡಿರುವ ಕುರಿತು ಸೂಕ್ತ ದಾಖಲಾತಿಗಳನ್ನು ಸಲ್ಲಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದರು.
ತಹಶೀಲ್ಧಾರರ ಕಚೇರಿ ಆವರಣದಲ್ಲಿ ಹತ್ತಾರು ಲೋಡು ಗಟ್ಟಲೆ ಮರಳು ಸಂಗ್ರಹ ಮಾಡಿರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಹಶೀಲ್ಧಾರ ಅನಂತ ಶಂಕರ ಅವರಿಂದ ವಿವರಣೆ ಪಡೆದರು. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಮೇಲ್ಮಹಡಿ ಕಾಮಗಾರಿ ನಡೆಯುತ್ತಿದೆ ಯಾವ ಉದ್ದೇಶಕ್ಕಾಗಿ ಕಾಮಗಾರಿ ನಡೆಯುತ್ತಿದೆ ಎನ್ನುವುದು ಸಹ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ತಮಗೆ ಮಾಹಿತಿ ಇಲ್ಲ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು. ಕೆಲ ಅಧಿಕಾರಿಗಳು ತಾವು ಇತ್ತೀಚೆಗಷ್ಟೇ ಇಲ್ಲಿ ವರ್ಗವಾಗಿ ಬಂದಿರುವುದು ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾಗುತ್ತಿರುವುದು ಆಡಳಿತ ವ್ಯವಸ್ಥೆಗೆ ಶೋಭೆ ತರುವಂಥದಲ್ಲ, ಸರ್ಕಾರಿ ಕಛೇರಿ ಆವರಣ ಮತ್ತು ಪ್ರಭಾವಿ ಗುತ್ತಿಗೆದಾರ ಎಂದು ಗೊತ್ತಿದ್ದು ಸ್ಥಳ ಪರಿಶೀಲಿಸಿ , ಕಾನೂನು ಕ್ರಮ ಕೈಗೊಂಡ ಅಧಿಕಾರಿ ನಡೆಯ ಬಗ್ಗೆ ವಕೀಲ ಉಮೇಶ ನಾಯ್ಕ ಮತ್ತಿತರರು ಮೆಚ್ಚುಗೆ ಸೂಚಿಸಿದ್ದಾರೆ.
ಬಡ ಡವರಿಗೆ ಲಭ್ಯವಾಗದ ಮರಳನ್ನು , ಸುಪ್ರಿಂ ತೀರ್ಪು ವಿಧಿಸಿ ಅಕ್ರಮವಾಗಿ ದಾಸ್ತಾನು, ಸಾಗಾಟ ಮಾಡುವವರೂ ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತರಾದ ಚಂದನ ಮತ್ತಿತರರು ಬಡವರಿಗೊಂದು ನ್ಯಾಯ, ಉಳ್ಳವರಿಗೆ ಒಂದು ನ್ಯಾಯ ಆಗದಿರಲೆಂದು ನೇರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವೊಮ್ಮೆ ಬಡವರ ಇತರೆ ಸಾಮಾನ್ಯರ ಮನೆ ಮತ್ತಿತರೆಡೆ ದಾಳಿಯ ವೇಳೆ ಕಾನೂನಿನ ಬಿಸಿ ಮುಟ್ಟಿಸುವ ತಾಲೂಕಾ ಆಡಳಿತ, ತನ್ನ ಕಟ್ಟಡದ ಮೇಲ್ಮಹಡಿಯಲ್ಲಿ ಯಾವ ಕಾಮಗಾರಿ ನಡೆಯುತ್ತಿದೆ ಎಂದು ಅರಿತುಕೊಳ್ಳದಷ್ಟು ನಿರ್ಲಕ್ಷವೇ ? ಮತ್ತು ತನ್ನ ಆವರಣದಲ್ಲಿ ಸಾರ್ವಜನಿಕರ ಓಡಾಟಕ್ಕೂ ಅಪಾಯ ಆಗುವ ರೀತಿ ಬೇಕಾ ಬಿಟ್ಟಿ ಕಟ್ಟಡ ಸಾಮಗ್ರಿ ಇಟ್ಟಿರುವುದಲ್ಲದೇ, ರಾತ್ರಿ ಮತ್ತಿತರ ವೇಳೆ ಪ್ರವೇಶ ದ್ವಾರ ತೆರೆದು ಹತ್ತಾರು ಲೋಡ ಮರಳು ಸಂಗ್ರಹಿಸುತ್ತಿದ್ದರೂ ಜಾಣ ಕುರುಡುತನ ನೀತಿ ಅನುಸರಿಸುತ್ತಿದೆಯೇ ಅಥವಾ ಯಾವುದಾದರೂ ಆಮಿಷ – ಒತ್ತಡಕ್ಕೆ ಒಳಗಾಗಿದೆಯೇ ಎಂಬ ಪ್ರಶ್ನೆ ಮೂಡುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ