ಕಟಾವಿಗೆ ಬಂದ ಗದ್ದೆಯಲ್ಲಿ ಕಾಡು ಪ್ರಾಣಿಗಳ ಹಾವಳಿ: ಕೈಗೆ ಬಂದ ತುತ್ತು ಬಾಯಿಗೆ ಬರದೆ ಅನ್ನದಾತ ಕಂಗಾಲು
ಸುಮಾರು 20 ಚೀಲಕ್ಕೂ ಹೆಚ್ಚು ಬತ್ತ ನಷ್ಟ
ಸಿದ್ದಾಪುರ: ಕಟಾವಿಗೆ ಬಂದ ಗದ್ದೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ನಡೆಸಿ ಗದ್ದೆ ತುಳಿದು ಬತ್ತ ತಿಂದು ರೈತರಿಗೆ ಅಪಾರ ನಷ್ಟ ಪಡಿಸಿದ ಘಟನೆ ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುತ್ತಿಗೆ ಗ್ರಾಮದ ಕುಂಬ್ರಿಗದ್ದೆ ಬಳಿ ನಡೆದಿದೆ. ದ್ಯಾವ ರಾಮ ನಾಯ್ಕ್ ಹರಕನಳ್ಳಿ ಎನ್ನುವವರಿಗೆ ಸೇರಿದ ನಾಲ್ಕುವರೆ ಎಕರೆಯಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಕಾಡು ಕೋಣ, ಕಾಡು ಹಂದಿಗಳು, ನವಿಲು ಬೆಳೆ ತಿಂದು ನಾಶ ಮಾಡಿದ್ದು ಕೈ ಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿವೆ.
ಈ ವರ್ಷದ ಮಳೆ ಕೊರತೆಯ ನಡುವೆಯೂ ಕಷ್ಟಪಟ್ಟು ಗದ್ದೆಯನ್ನು ಉಳುಮೆ ಮಾಡಿ ಬೆಳೆಯನ್ನ ಬೆಳೆಯಲಾಗಿತ್ತು ಆದರೆ ಕಟಾವು ಮಾಡುವ ಸಂದರ್ಭದಲ್ಲಿ ಈ ರೀತಿ ಕಾಡುಪ್ರಾಣಿಗಳು ದಾಂದಲೆಯನ್ನು ನಡೆಸಿ ಬೆಳೆ ಹಾಳು ಮಾಡಿದ್ದು ರೈತನ ವರ್ಷದ ತುತ್ತನ್ನ ಕಸಿದುಕೊಂಡಿವೆ ಅಲ್ಲದೆ ಜಾನುವಾರುಗಳಿಗೆ ಮೇವಾದ ಬತ್ತದ ಹುಲ್ಲು ಸಹ ಇಲ್ಲದಂತಾಗಿದ್ದು ರೈತರು ಕಂಗಲಾಗಿದ್ದಾರೆ.
ಕಾಡುಪ್ರಾಣಿ ಹಾವಳಿಯಿಂದ ಸುಮಾರು 20 ಚೀಲ ಬತ್ತ ನಷ್ಟವಾದರೆ 300 ಕ್ಕೂ ಹೆಚ್ಚು ಹೊರೆ ಹುಲ್ಲು ನಾಶವಾಗಿದೆ, ಸಂಬoಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕೊಡಲೇ ಪರಿಹಾರವನ್ನು ಒದಗಿಸಬೇಕು ಎನ್ನುವಂತಹ ಒತ್ತಾಯ ಮಾಡಿದ್ದಾರೆ.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ