ವೃದ್ಧ ದಂಪತಿಗಳ ಕೊಲೆ ಪ್ರಕರಣ: ಸುಕೇಶ್ ಮತ್ತು ಗ್ಯಾಂಗ್ ಮೇಲಿನ ಆರೋಪ ಸಾಬೀತು: ಜನವರಿ 2 ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ನ್ಯಾಯಾಲಯ
ಅಂಕೋಲಾ: ಕಳೆದ 4 ವರ್ಷಗಳ ಹಿಂದೆ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ತಾಲೂಕಿನ ಆಂದ್ಲೆಯ ವೃದ್ಧ ದಂಪತಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ,ಬಂಧಿತ ಆರೋಪಿಗಳನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿದ್ದು 2024 ರ ಜನೆವರಿ 2 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದು , ಜೀವಾವಧಿ ಶಿಕ್ಷೆ ಖಂಡಿತ ಎನ್ನಲಾಗುತ್ತಿದೆ. ಜೋಡಿ ಕೊಲೆಯ ಪ್ರಮುಖ ಸೂತ್ರದಾರ ಮತ್ತು ವೃದ್ಧ ದಂಪತಿಗಳ ಸಹೋದರ ಸಂಬಂಧಿಯಾಗಿದ್ದ ಆರೋಪಿ, . ಸುಕೇಶ ನಾಯಕ ಆಂದ್ಲೆ ಮತ್ತು ಕೊಲೆಯಲ್ಲಿ ಭಾಗಿಯಾಗಿದ್ದ ವೆಂಕರಾಜು, ನಾಗಣ್ಣ ಮತ್ತು ಭರತ್ ಅವರು ಅಪರಾಧಿಗಳೆಂದು ಸಾಬೀತು ಆಗಿರುವುದಾಗಿ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ತಿಳಿಸಲಾಗಿದೆ.
2019 ರ ಡಿಸೆಂಬರ್ 20 ರಂದು ತಾಲೂಕಿನ ಆಂದ್ಲೆಯ ನಿವಾಸಿ ನಾರಾಯಣ ಬೊಮ್ಮಯ್ಯ ನಾಯಕ ಮತ್ತು ಅವರ ಪತ್ನಿ ಸಾವಿತ್ರಿ ನಾರಾಯಣ ನಾಯಕ ಅವರನ್ನು ಕೈ ಕಾಲು ಕಟ್ಟಿ, ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಆಭರಣಗಳನ್ನು ಮತ್ತು ಹಣವನ್ನು ದೋಚಿ ಕೊಲೆಗಡುಕರು ಪರಾರಿಯಾಗಿದ್ದರು. ಆರಂಭದಲ್ಲಿ ಇದು ಡಕಾಯಿತರ ಕೃತ್ಯ ಎಂದೆನಿಸಿತ್ತಾದರೂ ನಂತರ ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಕೇಶ ಎಂಬಾತ ಇತರ ಮೂವರೊಂದಿಗೆ ಸೇರಿ ತನ್ನ ದೊಡ್ಡಪ್ಪ ಮತ್ತು ದೊಡ್ಡಮ್ಮನನ್ನು ಕೊಲೆ ಮಾಡಿ ಆಭರಣಗಳನ್ನು ಮತ್ತು ಹಣವನ್ನು ತೆಗೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿತ್ತು.
ಆರೋಪಿ ಸುಕೇಶ ನಾಯಕ ಯಾರಿಗೂ ಅನುಮಾನ ಬಾರದಂತೆ ಕೊಲೆಯಾದವರ ತಿಥಿಗೆ ಬಂದು ಮೊಸಳೆ ಕಣ್ಣೀರು ಸುರಿಸಿದಂತೆ ಮಾಡಿ ಹೋಗಿದ್ದ ಎನ್ನಲಾಗಿದ್ದು , ಕೊಲೆಯಾದ ಸಂಬಂಧಿಕರ ಕುರಿತು ತನಿಖೆ ನಡೆಸುತ್ತಿದ್ದ ಅಂಕೋಲಾ ಪೊಲೀಸರು ಈ ವೇಳೆ ಸುಕೇಶನನ್ನು ಸಹ ವಿಚಾರಣೆಗೆಂದು ಕರೆದಾಗ ಆತ ನಾಪತ್ತೆಯಾದ ಕಾರಣ ಆತನ ಮೇಲೆ ಅನುಮಾನ ಮೂಡಿ ಬಂಧಿಸಿ ವಿಚಾರಣೆ ನಡೆಸಿದಾಗ ಜೋಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು, ಪೊಲೀಸ್ ನಿರೀಕ್ಷಕ ಕೃಷ್ಣಾನಂದ ನಾಯಕ ಮತ್ತು ಉಪ ನಿರೀಕ್ಷಕ ಸಂಪತ್ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ವೇಳೆ ಯಲ್ಲಾಪುರ ಮತ್ತಿತರೆಡೆ ಕೆಲ ಸಾಂಧರ್ಭಿಕ ಸಾಕ್ಷ್ಯ ಕಲೆಹಾಕಲಾಗಿತ್ತು. ಐ ವಿಟ್ನೆಸ್ ಇರದಿರುವುದರಿಂದ ಪ್ರಕರಣ ಸವಾಲಿನ ಕೆಲಸವಾಗಿತ್ತು.
ವಿಶೇಷ ಸರಕಾರಿ ಅಭಿಯೋಜಕರಾದ ಮಂಗಳೂರಿನ ಶಿವಪ್ರಸಾದ ಆಳ್ವ ಕೆ 452 ಪುಟಗಳ ಲಿಖಿತ ವಾದ ಮಂಡಿಸಿದ್ದರು. ಕಾರವಾರದ ಸರಕಾರಿ ಅಭಿಯೋಜಕರಾಗಿ ತನುಜಾ ಹೊಸಪಟ್ಟಣ ಸಹಕರಿಸಿದ್ದು, ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ, ಎ ಎಸ್ ಐ ಗಡದ ಮತ್ತಿತರ ಸಿಬ್ಬಂದಿಗಳು ವಿಶೇಷ ಕರ್ತವ್ಯ ಮಾಡಿದ್ದರು.
ತನಿಖಾಧಿಕಾರಿಗಳು ಆರೋಪಿಗಳ ವಿರುದ್ಧ ಭಾ.ದಂ.ಸಂ. ಕಲಂ 302, 392,201,120 ಅಪಾದನಾ ಪಟ್ಟಿ ಯನ್ನು ಸಲ್ಲಿಸಿದ್ದರು. ಕೊನೆಗೂ ಆರೋಪಿತರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗದೇ, ಜೀವಾವಧಿಯಂತ ಶಿಕ್ಷೆಗೆ ಒಳಗಾಗುವ ದಿನಗಳು ಹತ್ತಿರವಾಗಿರುವುದಕ್ಕೆ, ನೊಂದ ಕುಟುಂಬದ ಹಲವರು ಮತ್ತು ಇತರೆ ಕೆಲ ಮಾನವೀಯ ಹೃದಯಗಳು ನ್ಯಾಯಕ್ಕೆ ಸಂದ ಜಯ ಇದೆಂದು ಹೇಳಿ, ಕಾರಣೀಕರ್ತರಾದ ವಿಶೇಷ ಸರಕಾರಿ ಅಭಿಯೋಜಕರು ಸೇರಿದಂತೆ ನ್ಯಾಯಾಂಗ ವ್ಯವಸ್ಥೆ ಮತ್ತು ಪೋಲೀಸ್ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮತ್ತು ಸಹಕರಿಸಿದ ಸರ್ವರಿಗೆ ಮನದಾಳದ ಕೃತಜ್ಞತೆ ಸೂಚಿಸಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ