Big News
Trending

12ನೇ ವರ್ಷದ ರಾಜ್ಯಮಟ್ಟದ ಹವ್ಯಕ ಟ್ರೋಪಿ: 5 ದಿನಗಳ ಕಾಲ ಯಶಸ್ವಿಯಾಗಿ ನಡೆದು ಸಂಪನ್ನಗೊoಡ ಟೂರ್ನಿ

ಬಹುಮಾನ ವಿತರಿಸಿದ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್

ಹೊನ್ನಾವರ: 12ನೇ ವರ್ಷದ ರಾಜ್ಯ ಮಟ್ಟದ ಹವ್ಯಕ ಟ್ರೋಪಿ ಕ್ರಿಕೆಟ್ ಪಂದ್ಯಾವಳಿ 5 ದಿನಗಳ ಕಾಲ ಯಶಸ್ವಿಯಾಗಿ ನಡೆದು ಸಂಪನ್ನಗೊoಡಿತು. ಸಮಾರೋಪ ಸಮಾರಂಭದ ಬಹುಮಾನ ವಿತರಣೆಯನ್ನು ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರು ನೇರವೇರಿಸಿದರು

ಹವ್ಯಕ ವಿಕಾಸ ವೇದಿಕೆಯ ಹೊನ್ನಾವರ ಆಶ್ರಯದಲ್ಲಿ ಹವ್ಯಕರಿಗಾಗಿ ಆಯೋಜಿಸಿದ್ದ 12ನೇ ವರ್ಷದ ರಾಜ್ಯ ಮಟ್ಟದ ಹವ್ಯಕ ಟ್ರೋಪಿ ಕ್ರಿಕೆಟ್ ಪಂದ್ಯಾವಳಿ ಹೊನ್ನಾವರ ತಾಲೂಕಿನ ಸಂತೇಗುಳಿಯಲ್ಲಿ ಮೈದಾನದಲ್ಲಿ 5 ದಿನಗಳ ಕಾಲ ಯಶಸ್ವಿಯಾಗಿ ನಡೆದು ಸಂಪನ್ನಗೊoಡಿತು. ಸಿದ್ದಾಪುರದ ನಿಸರ್ಗ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಶಿರಸಿಯ ತುಂಬೇಮನೆ ತಂಡ ರನ್ನರ ಅಪ್ ಬಹುಮಾನ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ವಿಶೇಷ ಸಾಧನೆಮಾಡಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರೋಪ ಸಮಾರಂಭದ ಬಹುಮಾನ ವಿತರಣೆಯನ್ನು ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರು ನೇರವೇರಿಸಿದರು. ನಂತರ ಮಾತನಾಡಿ, ಕ್ರಿಕೆಟ್ ನಮ್ಮ ದೇಶದಲ್ಲಿ ಕೇವಲ ಕ್ರೀಡೆಯಾಗಿ ಉಳಿದಿಲ್ಲ; ಧರ್ಮವಾಗಿ ಬೆಳೆದಿದೆ. ಇದು ಕ್ರೀಡೆ ಮಾತ್ರವಲ್ಲ ಒಳ್ಳೆಯ ಮನಸ್ಸುಗಳ ಸಂಗಮ. ಇದಕ್ಕೆ ಎಲ್ಲವನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಇದೆ.

ಕ್ರಿಕೆಟ್ ಆಟವು ಎಲ್ಲರನ್ನು ಒಂದುಗೂಡಿಸುವ ಚುಂಬಕಶಕ್ತಿಯನ್ನು ಹೊಂದಿದೆ, ಇದರ ಆಶಯವೇ ಬೆಸೆಯುವ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಪಂದ್ಯಾವಳಿಯನ್ನು ವಿಶ್ವವಾಣಿ ಮತ್ತು ಲೋಕಧ್ವನಿ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಮೈದಾನದಲ್ಲಿ ಆಯೋಜಿಸೋಣ. ಇದರಿಂದ ರಾಜ್ಯಮಟ್ಟದ ಪ್ರಾಧ್ಯಾನ್ಯತೆ ಪಡೆಯಲು ಸಾಧ್ಯವಾಗುವುದು. ಇದಕ್ಕೆ ನಾನು ಸಹಕಾರ ನೀಡುತ್ತೇನೆ. ಹವ್ಯಕ ಟ್ರೋಫಿಯನ್ನು ಪುಟ್ಟಣ್ಣನ ನೇತ್ರತ್ವದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಎಂದರು.

ಶಿರಸಿ ಟಿ ಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಕ್ರಿಕೆಟ್ ನಿಂದ ಒಂದು ಸಮಾಜ, ಊರು ಒಟ್ಟು ಮಾಡುವ ಶಕ್ತಿಯಿದೆ. ಮತ್ತಿಘಟ್ಟದಲ್ಲಿ ಕ್ರಿಕೆಟ್ ಟೂರ್ನಿ ಆರಂಭಿಸಿದಾಗ ಸುತ್ತಲಿನ ಜನರಲ್ಲಿ ಉತ್ತಮ ಬಾಂಧವ್ಯ ಬೆಳೆಯಿತು. 12 ವರ್ಷಗಳ ಕಾಲ ರಾಜ್ಯಮಟ್ಟದ ಟೂರ್ನಿ ಆಯೋಜಿಸಿದ ಸಂಘಟಕರು ಅಭಿನಂದನಾರ್ಹರು. 35 ವರ್ಷ ಸಹಕಾರಿ ಕ್ಷೇತ್ರದಲ್ಲಿ ದುಡಿದಿದ್ದೇನೆ. ಸಹಕಾರಿ ಸಂಘವನ್ನು ಹೇಗೆ ಬೆಳೆಸಬೇಕು ಎಂಬ ಕುರಿತು ಸಹಕಾರಿ ಸಾಕ್ಷರತೆ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ. ಯುವಕರು ಹಳ್ಳಿ ಬಿಟ್ಟು ಬೇರೆಡೆ ಹೋಗುತ್ತಿದ್ದಾರೆ. ಹಳ್ಳಿಯಲ್ಲೇ ಇದ್ದು ಉದ್ಯಮ ಸ್ಥಾಪಿಸಲು ಉದ್ಯೋಗ ನೀಡಬೇಕಾಗಿದೆ. ಕ್ರೀಡೆಯಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಕ್ರೀಡೆ ಸಹಕಾರಿ ಎಂದರು.

ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಹವ್ಯಕ ವಿಕಾಸ ವೇದಿಕೆ ಆಶ್ರಯದಲ್ಲಿ ವಧು ವರರ ಸಮಾವೇಶ, ಹವ್ಯಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆದಿದೆ. ಆರಂಭದ ಮೂರು ವರ್ಷಗಳ ಕಾಲ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಚಾಲನೆ ನೀಡಿದ್ದರು. ಅವರ ಆಶೀರ್ವದದಿಂದ ನಿರಂತರವಾಗಿ ಯಶಸ್ವಿಯಾಗಿ ನಡೇಯುತ್ತಿದೆ. 5 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 500 ಜನ ಆಟಗಾರರು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಸಂಪಾದಕರಾದ ವಿಶ್ವೇಶ್ವರ ಭಟ್ಟರವರಿಗೆ ಹವ್ಯಕ ವಿಕಾಸ ವೇದಿಕೆಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವೆಂಕಟೇಶ ಹೆಗಡೆ ಹೊಸಬಾಳೆ, ನಾಗರಾಜ ಭಟ್ಟ ಬೇಂಗ್ರೆ, ವಿಶ್ವನಾಥ ಭಟ್ಟ, ಮಹಾಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ ಗೋಳಿಬೈಲು, ಎಚ್.ಆರ್.ಗಣೇಶ, ನಾಗರಾಜ ಹೆಗಡೆ, ಮುಂತಾದವರು ಇದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button