ಬಸ್ ನಿಲ್ದಾಣದಲ್ಲಿ ಮುಂದುವರಿದ ಕಳ್ಳರ ಕರಾಮತ್ತು : ಡ್ಯೂಟಿಗೆ ಹೋಗಿ ಬರುವಷ್ಟರಲ್ಲಿ ಬಸ್ ಚಾಲಕನ ಬೈಕ್ ಕದ್ದವರಾರು?
ಅಂಕೋಲಾ: ಬಸ್ ಚಾಲಕನೋರ್ವ, ತನ್ನ ಬೈಕ್ ನ್ನು ನಿಲ್ದಾಣದಲ್ಲಿ ನಿಲ್ಲಿಸಿಟ್ಟು, ಡ್ಯೂಟಿಗೆ ಹೋಗಿ ಬರುವಷ್ಟರಲ್ಲಿ ಆತನ ಬೈಕ್ ಕಳ್ಳತನವಾಗಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ತಾಲೂಕಿನ ಬಾಳೆಗುಳಿ – ಕೃಷ್ಣಾಪುರ ನಿವಾಸಿ, ಬಾಬು ಗೋಪಾಲ ಗೌಡ, ವೃತ್ತಿಯಿಂದ ಬಸ್ ಚಾಲಕನಾಗಿ, ಕಾರವಾರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಡಿಸೆಂಬರ್ 30 ರಂದು ಬೆಳಿಗ್ಗೆ ತನ್ನ ಬೈಕ್ ಅನ್ನು ಕೆ. ಎಸ್. ಆರ್ ಟಿ ಸಿ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿಟ್ಟಿ ಹೋಗಿದ್ದರು.
ಡ್ಯೂಟಿಗೆ ಹೋಗಿ ಅಂಕೋಲಾಕ್ಕೆ ಮರಳಿ ಬಂದು ನೋಡುವಷ್ಟರಲ್ಲಿ ಬೈಕ್ ನಿಲ್ಲಿಸಿಟ್ಟ ಸ್ಥಳದಲ್ಲಿ ಕಾಣದೇ ಆತಂಕ ಗೊಂಡಿದ್ದಾರೆ.ಅಕ್ಕ -ಪಕ್ಕ ವಿಚಾರಿಸಿದರೂ ಬೈಕ್ ಸುಳಿವು ಸಿಗದ ಹಿನ್ನಲೆಯಲ್ಲಿ , ಅಂಕೋಲಾ ಪೊಲೀಸ್ ಠಾಣೆಯಲ್ಲಿ ಜನವರಿ 4 ರಂದು ತಡವಾಗಿ ದೂರು ಸಲ್ಲಿಸಿದ್ದು, ಪಿ ಎಸ್ ಐ ಸುಹಾಸ ಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಹಿಂದೆಯೂ ಅಂಕೋಲಾ ಬಸ್ ನಿಲ್ದಾಣದಲ್ಲಿ ಮತ್ತು ಬಸ್ ನಿಲ್ದಾಣದ ಎದುರು ನಿಲ್ಲಿಸಿಟ್ಟ ಕೆಲ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದರೂ, ಇಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು,ಕಾನೂನು ಸುವ್ಯವಸ್ಥೆಗೆ ಸಹಕಾರಿಯಾಗಲು ಸಿಸಿ ಕ್ಯಾಮೆರಾ ಅಳವಡಿಸಬೇಕಿದ್ದ ಸಂಬoಧಿತ ಸಾರಿಗೆ ಸಂಸ್ಥೆಯವರು, ಅದೇಕೋ ಮೀನಾ ವೇಷ ಮತ್ತು ವಿಳಂಬ ನೀತಿ ಅನುಸರಿಸುತ್ತಿರುವುದು ಕಳ್ಳ ಕಾಕರರಿಗೆ ಮತ್ತು ಪುಂಡ ಪೋಕರಿಗಳ ದಂಧೆಗೆ ಅನುಕೂಲ ಮಾಡಿಕೊಟ್ಟಂತಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.ತಮ್ಮ ಸಾರಿಗೆ ಸಂಸ್ಥೆಯ ಚಾಲಕನ ಬೈಕ್ ಕಳ್ಳತನವಾದ ನಂತರವಾದರೂ ಸಂಬoಧಿಸಿದವರು ಎಚ್ಚೆತ್ತುಕೊಂಡು ಸಿ ಸಿ ಕ್ಯಾಮೆರಾ ಅಳವಡಿಕೆಗೆ ಶೀಘ್ರಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ