Follow Us On

Google News
Important
Trending

ವೃದ್ಧ ದಂಪತಿಗಳ ಕೊಲೆ ಪ್ರಕರಣ : ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ; ದೊಡ್ಡಪ್ಪನನ್ನೇ ಕೊಲೆ ಮಾಡಿದ್ದ ಪಾತಕಿಗೆ ಕೊನೆಗೂ ತಪ್ಪದ ಶಿಕ್ಷೆ

ಅಂಕೋಲಾ: ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದ ಅಂಕೋಲಾ ತಾಲೂಕಿನ ಆಂದ್ಲೆಯ ವೃದ್ಧ ದಂಪತಿ ಕೊಲೆ ಆರೋಪಿಗಳಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಜೋಡಿ ಕೊಲೆಯ ಪ್ರಮುಖ ಆರೋಪಿ ಸುಕೇಶ ನಾಯಕ ಮತ್ತು ಕೊಲೆಯಲ್ಲಿ ಭಾಗಿಯಾಗಿದ್ದ ವೆಂಕರಾಜು, ನಾಗಣ್ಣ ಮತ್ತು ಭರತ್ ಅವರಿಗೆ ಕೊಲೆ ಮಾಡಿರುವ ಆರೋಪಕ್ಕಾಗಿ ಭಾರತೀಯ ದಂಡ ಸಂಹಿತೆ ಕಲಂ 302 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ವರ್ಷ ಕಾರಾಗೃಹವಾಸ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಲಾಗಿದೆ.

ಅದೇ ರೀತಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐ.ಪಿ.ಸಿ ಕಲಂ 392 ಅಡಿಯಲ್ಲಿ ಐದು ವರ್ಷಗಳ ಕಠಿಣ ಕಾರಾಗೃಹವಾಸ ಮತ್ತು ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ದಂಡ ಕಟ್ಟಲು ತಪ್ಪಿದರೆ ಹೆಚ್ಚುವರಿ ಆರು ತಿಂಗಳ ಜೈಲುವಾಸ ಶಿಕ್ಷೆ ನೀಡಲಾಗಿದೆ. ಮರಣ ದಂಡಣೆ ವಿಧಿಸಬಹುದಾದ ಅಪರಾಧ ಮಾಡಿರುವುದಕ್ಕೆ ಐಪಿಸಿ ಕಲಂ 449 ಅಡಿಯಲ್ಲಿ ಐದು ವರ್ಷಗಳ ಕಠಿಣ ಜೈಲು ವಾಸ ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.

ಅಪರಾಧ ಮಾಡಿರುವ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನ ಮಾಡಿರುವುದಕ್ಕಾಗಿ ಐಪಿಸಿ ಕಲಂ 201 ರ ಅಡಿಯಲ್ಲಿ ಆರೋಪಿಗಳಿಗೆ ಮೂರು ವರ್ಷಗಳ ಕಠಿಣ ಜೈಲು ವಾಸ ಮತ್ತು ತಲಾ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ತೀರ್ಪು ನೀಡಲಾಗಿದೆ. ಕ್ರಿಮಿನಲ್ ಚಟುವಟಿಕೆಗಳಿಗಾಗಿ ಐಪಿಸಿ ಕಲಂ 120 ಬಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ತಪ್ಪಿದರೆ ಮತ್ತೆ 6 ತಿಂಗಳ ಜೈಲುವಾಸ ಅನುಭವಿಸುವಂತೆ ತೀರ್ಪು ನೀಡಲಾಗಿದೆ. ಕಾರಾಗೃಹವಾಸ ಶಿಕ್ಷೆಯನ್ನು ಏಕಕಾಲದಲ್ಲಿ ಜಾರಿಗೊಳಿಸುವಂತೆ ಆರೋಪಿಗಳು ವಿಚಾರಣೆ ಅವಧಿಯಲ್ಲಿ ಈಗಾಗಲೇ ಕಳೆದ ಕಾರಾಗೃಹವಾಸ ಶಿಕ್ಷೆಯನ್ನು ಒಟ್ಟು ಶಿಕ್ಷೆಯ ಪ್ರಮಾಣದಲ್ಲಿ ಕಳೆಯಬಹುದಾಗಿದೆ ಎಂದು ತೀರ್ಪು ನೀಡಲಾಗಿದೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ ಆಳ್ವ
ವಾದ ಮಂಡಿಸಿದ್ದರು.

2019 ರ ಡಿಸೆಂಬರ್ 20 ರಂದು ತಾಲೂಕಿನ ಆಂದ್ಲೆಯ ನಿವಾಸಿ ನಾರಾಯಣ ಬೊಮ್ಮಯ್ಯ ನಾಯಕ ಮತ್ತು ಅವರ ಪತ್ನಿ ಸಾವಿತ್ರಿ ನಾರಾಯಣ ನಾಯಕ ಅವರನ್ನು ಕೈ ಕಾಲು ಕಟ್ಟಿ, ಭೀಕರವಾಗಿ ಕೊಲೆ ಮಾಡಿ ಮನೆಯಲ್ಲಿದ್ದ ಆಭರಣಗಳನ್ನು ಮತ್ತು ಹಣವನ್ನು ದೋಚಿ ಕೊಲೆಗಡುಕರು ಪರಾರಿಯಾಗಿದ್ದರು. ಆರಂಭದಲ್ಲಿ ಇದು ಡಕಾಯಿತರ ಕೃತ್ಯ ಎಂದೆನಿಸಿತ್ತಾದರೂ ನಂತರ ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಕೇಶ ಎಂಬಾತ ಇತರ ಮೂವರೊಂದಿಗೆ ಸೇರಿ ತನ್ನ ದೊಡ್ಡಪ್ಪ ಮತ್ತು ದೊಡ್ಡಮ್ಮನನ್ನು ಕೊಲೆ ಮಾಡಿ ಆಭರಣಗಳನ್ನು ಮತ್ತು ಹಣವನ್ನು ತೆಗೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿತ್ತು.

ದೊಡ್ಡಪ್ಪ ಮತ್ತು ದೊಡ್ಡಮ್ಮನನ್ನು ಕೊಲೆ ಮಾಡಿದ ಆರೋಪಿ ಸುಕೇಶ ನಾಯಕ ಯಾರಿಗೂ ಅನುಮಾನ ಬಾರದಂತೆ ಕೊಲೆಯಾದವರ ತಿಥಿಗೆ ಬಂದು ಕಣ್ಣೀರು ಸುರಿಸಿದ್ದ ಕೊಲೆಯಾದ ದಂಪತಿಯ ಸಂಬಂಧಿಕರ ಕುರಿತು ತನಿಖೆ ನಡೆಸುತ್ತಿದ್ದ ಅಂಕೋಲಾ ಪೊಲೀಸರು ಸುಕೇಶನನ್ನು ವಿಚಾರಣೆಗೆಂದು ಕರೆದಾಗ ಆತ ನಾಪತ್ತೆಯಾದ ಕಾರಣ ಆತನ ಮೇಲೆ ಅನುಮಾನ ಮೂಡಿ ಬಂಧಿಸಿ ವಿಚಾರಣೆ ನಡೆಸಿದಾಗ ಜೋಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು, ಪೊಲೀಸ್ ನಿರೀಕ್ಷಕ ಕೃಷ್ಣಾನಂದ ನಾಯಕ ಮತ್ತು ಉಪ ನಿರೀಕ್ಷಕ ಸಂಪತ್ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button