Aghnashini River: ಅಘನಾಶಿನಿ ನದಿಮುಖಜ ಪ್ರದೇಶ `ರಾಮ್‌ಸರ್’ ಪಟ್ಟಿಗೆ ಸೇರ್ಪಡೆ: ಅಂತಾರಾಷ್ಟ್ರೀಯ ಜೌಗು ಪ್ರದೇಶವಾಗಿ ಖ್ಯಾತಿ
ಕುಮಟಾ: ನಿತ್ಯ ಹರಿದ್ವರ್ಣ ವನದ ಸಹ್ಯಾದ್ರಿ ಪರ್ವತ ಶ್ರೇಣಿಗಳ ನಡುವೆ ಪವಿತ್ರವಾಗಿ ಹರಿಯುವ, ಕೋಟ್ಯಾಂತರ ಜೀವಿಗಳ ತಾಯಿಯಾಗಿರುವ ಅಘನಾಶಿನಿ ನದಿಮುಖಜ ( Aghnashini River) ಪ್ರದೇಶ `ರಾಮ್‌ಸರ್’ ಪಟ್ಟಿಗೆ ಸೇರ್ಪಡೆಯಾಗಿದ್ದು, ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶವಾಗಿ ಖ್ಯಾತಿ ಪಡೆದುಕೊಂಡಿದೆ. ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಈ ಮಾಹಿತಿಯನ್ನು ಹಂಚಿಕೊoಡಿದೆ.
ಜೌಗು ಪ್ರದೇಶಗಳನ್ನು ಉಳಿಸಲು 1971ರ ಫೆಬ್ರುವರಿ 2ರಂದು ಇರಾನ್‌ನ ಕ್ಯಾಸ್ಪಿಯನ್ ಸಮುದ್ರತೀರದ ರಾಮ್‌ಸರ್'ನಲ್ಲಿ ಪ್ರಥಮ ಬಾರಿಗೆ ಒಪ್ಪಂದ ಏರ್ಪಟ್ಟಿತ್ತು. ಆ ಒಪ್ಪಂದದ ಬಳಿಕ, ನೈಸರ್ಗಿಕವಾಗಿ ರೂಪುಗೊಂಡ ಜೌಗು ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತಿದ್ದು. ಅಂತಹ ಪ್ರದೇಶಗಳನ್ನು
ರಾಮ್‌ಸರ್ ತಾಣ’ಗಳೆಂದು ಗುರುತಿಸಲಾಗುತ್ತದೆ.
ಉಪ್ಪಿನಪಟ್ಟಣದಿಂದ ಅಘನಾಶಿನಿ ತುತ್ತ ತುದಿಯ ಸುಮಾರು 4,801 ಹೆಕ್ಟೇರ್ ಪ್ರದೇಶವನ್ನು `ರಾಮ್‌ಸರ್’ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಅಘನಾಶಿನಿ ನದಿಯು ಜೀವ ವೈವಿಧ್ಯತೆಯಲ್ಲಿ ದಶಲಕ್ಷಗಳಷ್ಟು ವಿವಿಧ ಜೈವಿಕ ಪ್ರಭೇಧಗಳಿದ್ದು, ಕಳೆದ 2 ವರ್ಷಗಳ ಹಿಂದೆಯೇ ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅಧ್ಯಯನ ನಡೆಸಿತ್ತು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಅಘನಾಶಿನಿ ಅಳಿವೆ, ಅಘನಾಶಿನಿ ನದಿ ಅರಬ್ಬಿ ಸಮುದ್ರದೊಂದಿಗೆ ಸ್ಥಳದಲ್ಲಿ ರೂಪುಗೊಂಡಿದೆ.
ಅಘನಾಶಿನಿ ನದಿಯು ( Aghnashini River) ತನ್ನೊಡಲಲ್ಲಿ 50-60 ಜಾತಿಯ ಮೀನುಗಳು, ರುಚಿಯಾದ ಶಿಗಡಿ, ಬೆಳಚು, ಸಾಂಪ್ರದಾಯಿಕ ಮೀನುಗಾರಿಕೆ, ಕೃಷಿ, ಏಡಿಗಳ ಸಂಗ್ರಹ ಇಲ್ಲಿನ 2 ಸಾವಿರ ಕುಟುಂಬಗಳ ತುತ್ತಿನ ಚೀಲ ತುಂಬುವ ಮಾತೆಯಾಗಿದ್ದಾಳೆ. ರೈತರಿಗೆ ಅನ್ನಪೂರ್ಣೆಯಾಗಿ ಬೆಳೆಗಳಿಗೂ ನೀರುಣಿಸುತ್ತಿದ್ದಾಳೆ. ಪೋಷಕಾಂಶಗಳ ಕೊರತೆಯಾಗದಂತೆ, ಮೀನುಕ್ಷಾಮವಾಗದಂತೆ ಮೈದೋರುವ ಅಘನಾಶಿನಿ, ಕೋಟ್ಯಾಂತರ ಜಲಚರಗಳನ್ನು ಪೊರೆಯುವ ಪವಿತ್ರ ನದಿಯಾಗಿದೆ.
ನದಿ, ಸಮುದ್ರದಂಡೆ ಒತ್ತುವರಿ, ಬಂದರು ಖಾಸಗೀಕರಣ, ಪ್ರವಾಸೋಧ್ಯಮದ ಹೆಸರಿನಲ್ಲಾಗುವ ಅವೈಜ್ಞಾನಿಕ ಭೂಪರಿವರ್ತನೆ, ಅಕ್ರಮ ಮರಳು ಗಣಿಗಾರಿಕೆಗಳು ನದಿಗಳ ಸ್ವರೂಪವನ್ನೇ ಧ್ವಂಸಗೊಳಿಸಲಿದೆ. ಸೂಕ್ಷö?? ಪರಿಸರವನ್ನು ಆಧರಿಸುವ ಬೆಳಚು, ಸಿಗಡಿ, ಏಡಿಯಂಥಹ ಜಲಚರಗಳು ಹಾಗೂ ಮೀನಿನ ಸಂಕುಲಗಳು ನಾಶವಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಇಲ್ಲಿಯ ಅಘನಾಶಿನಿ ಅಳಿವೆ ಪ್ರದೇಶಗಳಲ್ಲಿ ಯಾವುದೇ ಖಾಸಗೀಕರಣ, ಭೂ ಪರಿವರ್ತನೆ ಮಾಡಲು ಮುಂದಾಗಬಾರದು ಎಂಬುದು ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ನಿಲುವಾಗಿದೆ.
ಇಲ್ಲಿನ ಕಾಂಡ್ಲಾ ಸಸ್ಯ ಪ್ರದೇಶ ಹಾಗೂ ಇಲ್ಲಿನ ಸ್ವಚ್ಛಂದ ಪರಿಸರದ ಸುತ್ತ ವಿವಿಧ ಜಾತಿಯ 40 ಪಕ್ಷಿಗಳ ಆಶ್ರಯಧಾಮವಾಗಿದೆ. ಚಳಿಗಾಲದಲ್ಲಿ ಸೈಬೀರಿಯಾ, ಯುರೋಪ್, ರಷಿಯಾ, ಮಂಗೋಲಿಯಾ, ಹಿಮಾಚಲ ಹೀಗೆ ವಿದೇಶಗಳಿಂದಲೂ ಇಲ್ಲಿಗೆ ಪಕ್ಷಿಗಳು ಆಶ್ರಯ ಪಡೆಯುತ್ತವೆ. ಹೀಗಾಗಿ ಅಘನಾಶಿನಿ ಜೌಗು ಪ್ರದೇಶಗಳು ರಾಮ್‌ಸರ್ ಪ್ರದೇಶಕ್ಕೆ ಸೇರ್ಪಡೆಯಾಗಿವೆ. ಇಂತಹ ಪ್ರದೇಶಗಳು ಇಲ್ಲವಾದಲ್ಲಿ ಪಕ್ಷಿ ಸಂಕುಲಗಳು ನಾಶವಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು. ಇಲ್ಲಿನ ನೀರಿನಲ್ಲಿ ಕಾಂಡ್ಲಾ ವನ ಬಲುಪುಷ್ಠಿಯಿಂದ ಕೂಡಿದ್ದು, ಜೀವ ವೈವಿಧ್ಯತೆ ಹೆಚ್ಚಿನ ಪ್ರಮಾಣದಲ್ಲಿದೆ.
ಈ ಪ್ರದೇಶದುದ್ದಕ್ಕೂ ಕಾಂಡ್ಲಾ ವನಗಳು ಸಮೃದ್ಧವಾಗಿ ಬೆಳೆದಿರುವುದರಿಂದ 30 ಜಾತಿಯ ಏಡಿ, ಸಿಗಡಿ, ಬೆಳಚುಗಳು ಹೇರಳವಾಗಿದೆ ಅಘನಾಶಿನಿ ನದಿ ಅತ್ಯಂತ ಫಲವತ್ತಾಗಿದೆ. ಈ ಪ್ರದೇಶವು ಅತ್ಯಂತ ಸಂರಕ್ಷಿತ ಪ್ರದೇಶವಾಗಿದ್ದು, ಮನುಕುಲಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ `ರಾಮ್‌ಸರ್’ ಮಾನ್ಯತೆ ಪಟ್ಟ ಸಿಕ್ಕಿದೆ ಎನ್ನುವುದು ಖ್ಯಾತ ಪರಿಸರ ವಿಜ್ಞಾನಿ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ. ಎಂ.ಡಿ. ಸುಭಾಶ್ಚಂದ್ರನ್ ಅವರ ಅಭಿಪ್ರಾಯವಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ