Important
Trending

ತಾಯಿಯ ಬೆನ್ನಿಗೇ ದೈವ ಪಾದ ಸೇರಿದ ಮಗ: ಶೋಕದ ಛಾಯೆ

ಅಂಕೋಲಾ: ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿ ಮನೆಗೆ ಮರಳಿದ್ದ ಮಗ,ದಿನಗಳೆಯು ವಷ್ಟರಲ್ಲಿಯೇ ತಾನೂ ತಾಯಿಯ ಬೆನ್ನ ಹಿಂದೆಯೇ ದೈವ ಪಾದ ಸೇರಿದ ಆಘಾತಕಾರಿ ಘಟನೆ ಅವರ್ಸಾದಲ್ಲಿ ಸಂಭವಿಸಿದೆ. ಕಾರವಾರ -ಅಂಕೋಲಾದಲ್ಲಿ ಬಹುಸಂಖ್ಯಾತರಾಗಿರುವ ಕೋಮಾರಪಂತ ಸಮಾಜದ ಗುರುಮನೆ ಎನ್ನುವ ಹಿರಿತನ ಇರುವ ಹಾಗೂ ಅವರ್ಸಾ ಗ್ರಾಮದ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾಗಿರುವ ಮೇತ್ರಿ ಕುಟುಂಬದ, ಯಜಮಾನತಿ, ಊರ ಹಾಗೂ ಇತರ ಹಲವರ ಪಾಲಿಗೆ ಮಹಾತಾಯಿ ಎನಿಸಿದ್ದ ಶ್ರೀಮತಿ ಗಿರಿಜಾ ಗಿರಿಯಪ್ಪ ನಾಯ್ಕ ಫೆ 17 ರ ಶನಿವಾರ ರಾತ್ರಿ ವಿಧಿವಶರಾಗಿದ್ದು ಅವರ ಅಂತ್ಯಕ್ರಿಯೆಯನ್ನು ರವಿವಾರ ನೆರವೇರಿಸಲಾಗಿತ್ತು.

ಈ ವೇಳೆ ಸಾವಿರಾರು ಜನರು ಆಗಮಿಸಿ,ಅಗಲಿದ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ದರು. ಈ ವೇಳೆ ತನ್ನ ಇತರ ಸಹೋದರರು ಮತ್ತು ಕುಟುಂಬಸ್ಥರೊಂದಿಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 3 ನೇ ಮಗ ನಾಗೇಶ ಗಿರಿಯಪ್ಪ ಮೇತ್ರಿ (58) ಸಹ ಪಾಲ್ಗೊಂಡು ಮನೆಗೆ ವಾಪಸ್ಸಾಗಿದ್ದ.

ಇದಾಗಿ ದಿನ ಕಳೆಯುವುದರ ಒಳಗೆ ಆ ಕುಟುಂಬದ ದುರ್ದೈವವೋ ಎಂಬಂತೆ ನಾಗೇಶ ಮೇತ್ರಿ ಗೆ ಹೃದಯಾಘಾತವಾಗಿ ಪ್ರಾಣ ಪಕ್ಷಿಯೂ ಹಾರಿ ಹೋಗಿದ್ದು, ತನ್ನ ತಾಯಿಯ ಬೆನ್ನಿಗೇ ಶ್ರೀ ದೇವರ ಪಾದ ಸೇರುವಂತಾಗಿದೆ. ಈ ಅಕಾಲಿಕ ಘಟನೆಯಿಂದ ಕೇವಲ ಮೇತ್ರಿ ಮನೆಗಷ್ಟೇ ಅಲ್ಲದೇ, ಗುರುಮನೆ ಎಂದು ಗೌರವಿಸುತ್ತಿದ್ದ ಕೋಮಾರಪಂತ ಸಮಾಜದಲ್ಲಿ , ಮತ್ತು ಅವರ್ಸಾ ಗ್ರಾಮದಲ್ಲಿ ಶೋಕದ ಛಾಯೆ ಆವರಿ ಸುವಂತಾಗಿದೆ.

ಒಟ್ಟಿನಲ್ಲಿ ತಾಯಿಯ ಅಗಲುವಿಕೆ ದುಃಖ ಮತ್ತು ಹೃದಯಾಂತರದ ನೋವು ತಡೆದುಕೊಳ್ಳಲಾಗದೇ ಮಗನೂ ಹೃದಯಾಘಾತದಿಂದ ಸಾವನ್ನಪ್ಪಿರುವುದು, ತಾಯಿ ಮತ್ತು ಮಗನ ಪ್ರೀತಿ – ವಾತ್ಸಲ್ಯದ ಬಂಧನವೋ ಅಥವಾ ಇಬ್ಬರ ಸಾವು ಕಾಕತಾಳೀಯವೋ ಇಲ್ಲವೇ ವಿಧಿಯಾಟವೋ ಎಂಬ ಪ್ರಶ್ನೆ ಹಲವರಲ್ಲಿ ಮೂಡುವಂತಾಗಿದೆ. ಕಲೆ- ಸಂಪ್ರದಾಯ,ಧಾರ್ಮಿಕ ಆಚಾರ ವಿಚಾರಗಳಲ್ಲಿ ಪ್ರಸಿದ್ಧಿ ಪಡೆದಿರುವ ಮೇತ್ರಿ ಮನೆತನದ ಮಹಾತಾಯಿ ಗಿರಿಜಾ ಮತ್ತು ಅವರ ಮಗ ನಾಗೇಶ್ ಮೇತ್ರಿ ನಿಧನಕ್ಕೆ ಶಾಸಕ ಸತೀಶ ಸೈಲ್ ಸೇರಿದಂತೆ ಸ್ಥಳೀಯ ಹಾಗೂ ಜಿಲ್ಲೆಯ ಹಲವು ಗಣ್ಯರು,ಸಮಾಜದ ಪ್ರಮುಖರು, ಅವರ್ಸಾ ಗ್ರಾಮಸ್ಥರು ಹಾಗೂ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button