ನಿರಾಶ್ರಿತರನ್ನು ಬಿಟ್ಟು ಬೆರೆಯವರ ನೇಮಕ: ಅಂಗನವಾಡಿಗೆ ಮಕ್ಕಳನ್ನೇ ಕಳುಹಿಸುವುದನ್ನು ಬಿಟ್ಟ ಪಾಲಕರು
ಕಾರವಾರ; ತಾಲೂಕಿನ ಮುದಗಾ ಪುನರ್ವಸತಿ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರಲ್ಲಿ ಇಂತಹದೊoದು ಸಮಸ್ಯೆ ಎದುರಾಗಿದೆ. ದೇಶದ ಪ್ರತಿಷ್ಟಿತ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾನೆಲೆಗೆ ಕಾರವಾರ ತಾಲೂಕಿನ ಹಲವು ಗ್ರಾಮದ ಜನರು ಭೂಮಿ ನೀಡಿದ್ದು ಅದರಲ್ಲಿ ಕೆಲವರಿಗೆ ಇದೇ ಮುದಗಾ ಕಾಲೋನಿಯಲ್ಲಿ ಜಾಗವನ್ನ ಕೊಡಲಾಗಿತ್ತು. ಇನ್ನು ನಿರಾಶ್ರಿತರಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ನ್ಯಾಯಾಲಯದ ತಿಳಿಸಿದ ಹಿನ್ನಲೆಯಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರವನ್ನ ಪ್ರಾರಂಭಿಸಲಾಗಿತ್ತು.
ಅಲ್ಲದೇ ಈ ಕೇಂದ್ರದಲ್ಲಿ ಸ್ಥಳೀಯ ನಿರಾಶ್ರಿತರಿಗೆ ಉದ್ಯೋಗ ಕೊಡುವಂತೆ ಸಹ ಸೂಚನೆ ಮಾಡಲಾಗಿತ್ತು. ಆದರೆ ಸದ್ಯ ನಿರಾಶ್ರಿತರದಲ್ಲದವರನ್ನು ಈ ಅಂಗನವಾಡಿ ಕೇಂದ್ರದಲ್ಲಿ ನೇಮಕ ಮಾಡಿಕೊಂಡಿರುವುದು ನಿರಾಶ್ರಿತರ ಆಕ್ರೋಶಕ್ಕೆ ಕಾರಣವಾಗಿದೆ. ನಮಗೆ ನೀಡಿದ ಉದ್ಯೋಗ ಬೇರೆಯವರ ಪಾಲಾಗಿದೆ ಎಂದು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸದೇ ನಿರಾಶ್ರಿತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನು ಕದಂಬ ನೌಕಾನೆಲೆ ಸ್ಥಾಪನೆ ವೇಳೆ ಭೂಮಿ ಪಡೆಯುವಾಗ ಪ್ರತಿ ಮನೆಯೊಂದಕ್ಕೆ ಉದ್ಯೋಗ ಕೊಡುವ ಭರವಸೆಯನ್ನ ಸರ್ಕಾರ ನೀಡಿತ್ತು. ಆದರೆ ಇದಾದ ನಂತರ ಈ ಭರವಸೆ ಭರವಸೆಯಾಗಿಯೇ ಉಳಿಯಿತು. ಸದ್ಯ ನಿರಾಶ್ರಿತರು ಬೇರೆ ಬೇರೆ ಉದ್ಯೋಗವನ್ನ ಹುಡುಕಿಕೊಂಡು ಹೋಗುತ್ತಿದ್ದಾರೆ. ತಮಗಾಗಿ ಮೀಸಲಿಟ್ಟ ಸಣ್ಣ ಪುಟ್ಟ ಅಂಗನವಾಡಿ ಕೇಂದ್ರದ ಹುದ್ದೆಯನ್ನೂ ಬೇರೆಯವರಿಗೆ ಕೊಡುವ ಮೂಲಕ ಇರುವ ಉದ್ಯೋಗವನ್ನ ಸಹ ಕಿತ್ತುಕೊಳ್ಳುವ ಕೆಲಸಕ್ಕೆ ಆಡಳಿತ ಮುಂದಾಗಿದೆ ಎನ್ನುವುದು ನಿರಾಶ್ರಿತರ ಆಗ್ರಹ.
ಇನ್ನು 2023ರ ವರೆಗೆ ಇದೇ ಕೇಂದ್ರದಲ್ಲಿ ನಿರಾಶ್ರಿತ ಮಹಿಳೆಯೇ ಅಂಗನವಾಡಿ ಕಾರ್ಯಕರ್ತೆಯಾಗಿದ್ದು ಅವರ ನಿವೃತ್ತಿ ನಂತರ 16 ಜನ ನಿರಾಶ್ರಿತರೃ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಬಿಟ್ಟು ದೂರದ ಊರಿನಿಂದ ನಿರಾಶ್ರಿತರಲ್ಲದವರನ್ನು ನೇಮಕ ಮಾಡಲಾಗಿದೆ. ನಮ್ಮ ವಾರ್ಡಿನವರಿಗೆ ಉದ್ಯೋಗ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸದ್ಯ ಮುದಗಾ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನೇ ಕಳಿಸದೇ ಹಲವು ತಿಂಗಳಿನಿoದ ನಿರಾಶ್ರಿತರು ಹೋರಾಟ ನಡೆಸುತ್ತಿದ್ದಾರೆ. ಆದರೆ ರಾಜಕೀಯ ಒತ್ತಡದಿಂದ ನಿರಾಶ್ರಿತರಿಗೆ ಉದ್ಯೋಗ ಕೊಡುವ ಬದಲು ಬೇರೆಯವರನ್ನು ನೇಮಕ ಮಾಡಿದ್ದು ಇದನ್ನ ಬದಲಿಸಲು ಮುಂದಾಗುತ್ತಿಲ್ಲ. ಸದ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ದೇಶಕ್ಕಾಗಿ ಭೂಮಿ ನೀಡಿದ ನಿರಾಶ್ರಿತರ ಹಕ್ಕನ್ನ ಕಸಿಯಲು ಆಡಳಿತ ವ್ಯವಸ್ಥೆ ಹೊರಟಿದ್ದು ಸಂಭoದ ಪಟ್ಟ ಇಲಾಖೆಯವರು ಈ ಬಗ್ಗೆ ಗಮನಹರಿಸಿ ನಿರಾಶ್ರಿತರಿಗೆ ನ್ಯಾಯ ಒದಗಿಸಿಕೊಡುವ ಕಾರ್ಯ ಮಾಡಬೇಕಾಗಿದೆ.
ವಿಸ್ಮಯ ನ್ಯೂಸ್, ಕಾರವಾರ