Important
Trending

ಬೈಕ್ ಡ್ರಾಪ್ ಕೇಳಿದವನಿಗೆ ಜೀವ ಬೆದರಿಕೆ ಉಡುಗೊರೆ: ನದಿ ಮತ್ತು ಸಮುದ್ರ ಸಂಗಮ ನಿರ್ಜನ ಪ್ರದೇಶದಲ್ಲಿ ಮರ್ಡರ್ ಗೆ ಸ್ಕೆಚ್ !

2 -3 ಸಲ ಚಾಕು ಹೊಡೆದ ಗಾಯದ ನಡುವೆಯೂ ಬದುಕುಳಿದ ಬಡ ಜೀವ

ಅಂಕೋಲಾ: ಬಡ ಕುಟುಂಬದ ಯುವಕನೋರ್ವ ಕೂಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ, ದಾರಿಮಧ್ಯೆ ಬಂದ ಬೈಕ್ ಸವಾರನೋರ್ವ ಡ್ರಾಪ್ ಕೇಳಿದ ಯುವಕವನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿ, ನಿಗದಿತ ಸ್ಥಳದಲ್ಲಿ ಇಳಿಸದೇ, ನದಿ ಮತ್ತು ಸಮುದ್ರದಂಚಿನ ಸಂಗಮವಾಗಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕುತ್ತಿಗೆಗೆ ಚಾಕುವಿನಿಂದ ತಿವಿದು ಸಾಯಿಸಲು ಯತ್ನಿಸಿದ ಘಟನೆ ತಾಲೂಕಿನ ಕೆಳಗಿನ ಮಂಜಗುಣಿಯಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಉದ್ಯೋಗ ಕುರಿತ ಮಾಹಿತಿ ಮತ್ತು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ತಾಲೂಕಿನ ಬೆಳಂಬಾರ ತಾಳೇಬೈಲ್ ನಿವಾಸಿ ಗಂಗಾಧರ ರಾಮಾ ಗೌಡ(29) ಚಾಕು ಇರಿತದಿಂದ ಗಾಯಗೊಂಡ ಯುವಕನಾಗಿದ್ದಾನೆ, ಕೂಲಿ ಕೆಲಸ ಮಾಡುತ್ತಿದ್ದ ಗಂಗಾಧರ ಗೌಡ ಪ್ರತಿದಿನ ಕೆಲಸ ಮುಗಿದ ನಂತರ ರಾತ್ರಿ ಸಮಯದಲ್ಲಿ ಯಾರದಾದರೂ ಪರಿಚಯಸ್ಥರ ಬೈಕ್ ಅಥವಾ ರಿಕ್ಷಾ ಮೂಲಕ ಮನೆಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದ್ದು ಮಾರ್ಚ್ 10 ರಂದು ರಾತ್ರಿ ತೆಂಕಣಕೇರಿ ಪೂಜಗೇರಿ ಮಾರ್ಗವಾಗಿ ಮನೆಗೆ ಹೋಗುತ್ತಿರುವಾಗ ಆರೋಪಿತ ಕೆಳಗಿನ ಮಂಜಗುಣಿ ನಿವಾಸಿ ಮಣಿಕಂಠ ರಾಮಾ ಗೌಡ (30) ಅದೇ ಮಾರ್ಗದಲ್ಲಿ ಬಂದಿದ್ದು ಗಂಗಾಧರ ಗೌಡ ತನ್ನನ್ನು ಬಾಸಗೋಡ ಕ್ರಾಸ್ ಬಳಿ ಬಿಡುವಂತೆ ಕೇಳಿಕೊಂಡಿದ್ದಾನೆ.

ಆತನನ್ನು ಬೈಕಿನಲ್ಲಿ ಹತ್ತಿಸಿಕೊಂಡ ಆರೋಪಿತ ಬಾಸಗೋಡ ಕ್ರಾಸ್ ಬಳಿ ಬೈಕ್ ನಿಲ್ಲಿಸದೇ, ಈ ಹಿಂದೆ ನನ್ನ ತಮ್ಮನ ಜೊತೆ ಯಾಕೆ ಜಗಳ ಮಾಡಿದ್ದೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೆಳಗಿನ ಮಂಜಗುಣಿ ದಕ್ಕೆ ಬಳಿ ಬೈಕ್ ನಿಲ್ಲಿಸಿ ನನ್ನ ತಮ್ಮನ ಹತ್ತಿರ ಜಗಳ ಮಾಡುತ್ತಿಯಾ ಈಗ ನನ್ನ ಹತ್ತಿರ ಜಗಳ ಮಾಡು ನಿನ್ನನ್ನು ಸಾಯಿಸಿ ಹೊಳೆಯಲ್ಲಿ ಬಿಸಾಡಿ ಹೋಗುತ್ತೇನೆ ಎಂದು ಬೈಕಿನಲ್ಲಿ ಇದ್ದ ಚಾಕು ತೆಗೆದು ಕುತ್ತಿಗೆಗೆ 2 ರಿಂದ 3 ಸಲ ಹೊಡೆದು ಗಾಯಪಡಿಸಿ , ಇಂದು ನೀನು ಸಾಯದಿದ್ದರೂ ಮುಂದೊಂದು ದಿನ ನಿನ್ನನ್ನು ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿ , ಬೈಕ್ ಏರಿ ತೆರಳಿರುವುದಾಗಿ ತಿಳಿದು ಬಂದಿದೆ.

ಘಟನೆಯ ನಂತರ ನಿತ್ರಾಣದಿಂದ ಸ್ವಲ್ಪ ಸುಧಾರಿಸಿಕೊಂಡ ಗಾಯಾಳು ಯುವಕ ಹೆದರುತ್ತಲೇ ಮನೆಗೆ ಬಂದು, ನಂತರ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ನಡೆದ ವಿಷಯ ಮನೆಯಲ್ಲಿ ಚರ್ಚಿಸಿ, ಮುಂದೆ ಮತ್ತೆ ಪ್ರಾಣಾಪಾಯದ ಭೀತಿ ಇರುವುದರಿಂದ,ದೂರು ನೀಡಲು ನಿರ್ಧರಿಸಿ, ತಾನು ದೂರು ನೀಡಲು ವಿಳಂಬವಾದ ಬಗ್ಗೆ ವಿವರವಾಗಿ ತಿಳಿಸಿದ್ದಾನೆ.

ಈ ಕುರಿತು ಆರೋಪಿತ ಮಣಿಕಂಠ ಗೌಡ ಎಂಬಾತನ ಮೇಲೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಅವರ ನಡುವೆ ಅದೇನೂ ದ್ವೇಷ, ಮನಸ್ತಾಪ ಇದ್ದಿರಬಹುದೋ ಅಥವಾ ಇರಲಿಕ್ಕಿಲ್ಲವಾದರೂ ಸಹ, ಈ ರೀತಿ ಚಾಕು ಪ್ರಯೋಗದಂತಹ ಘಾತಕ ಕೃತ್ಯಗಳು ಸರಿಯಲ್ಲ, ಒಂದೊಮ್ಮೆ ಬಡ ಕೂಲಿ ಕುಟುಂಬದ ಯುವಕನ ಜೀವಕ್ಕೆ ಅಪಾಯವಾಗಿದ್ದರೆ ಯಾರು ಹೊಣೆ? ಊರಿನ ಹಬ್ಬದ ಮೇಲೂ ಅದು ಪರಿಣಾಮ ಬೀರುತ್ತಿತ್ತಲ್ಲವೇ ಎಂದು ಕೆಲ ಸ್ಥಳೀಯ ಪ್ರಮುಖರು ಮಾತನಾಡಿಕೊಂಡಂತೆ ಕೇಳಿ ಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button