Big News
Trending

ಗಂಗಾವಳಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆಗೆ ವಿರೋಧ: ಸ್ಥಳೀಯರ ಪ್ರತಿಭಟನೆ ಹಿನ್ನಲೆ: ಸರ್ವೆ ಕಾರ್ಯ ನಡೆಸದೇ ವಾಪಸ್ಸಾದ ಅಧಿಕಾರಿಗಳು

ಅಂಕೋಲಾ: ತಾಲೂಕಿನ ಅಗಸೂರು ಗ್ರಾ.ಪಂ ವ್ಯಾಪ್ತಿಯ ಹೊನ್ನಳ್ಳಿಯಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಕಿಂಡಿ ಆಣೆಕಟ್ಟು ಯೋಜನೆಗೆ ಈ ಹಿಂದೆ ತಿಳಿಸಲಾದ ಅರಣ್ಯ ಪ್ರದೇಶ ಹೊರತು ಪಡಿಸಿ ಮತ್ತೆ ಕೆಲ ರೈತರ ಕೃಷಿ ಭೂಮಿಯನ್ನೂ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಸರ್ವೆ ಕಾರ್ಯ ನಡೆಸಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಪದ್ಮಶ್ರೀ ತುಳಸಿ ಗೌಡ, ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ಶಿವರಾಂ ಗಾಂವಕರ ನೇತೃತ್ವದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರಿಂದ ಸರ್ವೆಗೆ ಆಗಮಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಸರ್ವೆ ಕಾರ್ಯ ನಡೆಸದೇ ವಾಪಸ್ ಆಗುವಂತಾಗಿದೆ.

ಅoಕೋಲಾ ತಾಲೂಕಿನ ಅಗಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಳ್ಳಿಯಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆಗೆ ಸರ್ಕಾರದ ವತಿಯಿಂದ ಕ್ರಮಗಳು ಮುಂದುವರೆದಿದೆ, ಈ ನಡುವೆ ಕೃಷಿ ಭೂಮಿ ಸರ್ವೆ ನಡೆಸಲು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡಕ್ಕೆ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಮತ್ತು ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಿವರಾಮ ಗಾಂವಕರ್ ಅವರ ನೇತೃತ್ವದಲ್ಲಿ ಕೃಷಿಕರು ತಮ್ಮ ವಿರೋಧ ವ್ಯಕ್ತಪಡಿಸಿದರು.

ಕಿಂಡಿ ಆಣೆಕಟ್ಟು ಯೋಜನೆಗೆ ಕೃಷಿ ಭೂಮಿ ಸರ್ವೆ ಕಾರ್ಯಕ್ಕೆ ರೈತರಿಗೆ ಯಾವುದೇ ರೀತಿಯ ಅಧಿಕೃತ ನೋಟಿಸ್ ನೀಡಲಾಗಿಲ್ಲ ಈ ಯೋಜನೆಗೆ ರೈತರ ಸಂಪೂರ್ಣ ವಿರೋಧವಿದ್ದು ಯಾವುದೇ ಕಾರಣಕ್ಕೂ ತಮ್ಮ ಖಾಸಗಿ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಿಂಡಿ ಆಣೆಕಟ್ಟು ಯೋಜನೆ ವಿರುದ್ಧ ಉಚ್ಛನ್ಯಾಯಾಲಯದಲ್ಲಿ ಈಗಾಗಲೇ ಪಿಐಎಲ್ ಸಲ್ಲಿಸಲಾಗಿದ್ದು ಅದು ವಿಚಾರಣೆಯ ಹಂತದಲ್ಲಿ ಇರುವಾಗ ಸರ್ವೆ ಕಾರ್ಯ ನಡೆಸುತ್ತಿರುವುದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗುತ್ತದೆ ಎಂದು ರೈತರು ಅಧಿಕಾರಿಗಳಿಗೆ ತಿಳಿಸಿದರು.

ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ ಗಾಂವಕರ್ ಮಾತನಾಡಿ ಯಾವುದೇ ಪ್ರದೇಶಕ್ಕೆ ನೀರು ನೀಡಲು ನಮ್ಮ ಯಾವುದೇ ಅಭ್ಯಂತರವಿಲ್ಲ ಆದರೆ ಕೃಷಿ ಭೂಮಿ, ಅರಣ್ಯ ಸಂಪತ್ತು ಮುಳುಗಿಸಿ ನೀರು ಪೂರೈಸುವ ಕಿಂಡಿ ಆಣೆಕಟ್ಟು ಯೋಜನೆಗೆ ಸಂಪೂರ್ಣ ವಿರೋಧವಿದೆ ಎಂದರು. ಪದ್ಮಶ್ರೀ ವೃಕ್ಷಮಾತೆ ತುಳಸಿ ಗೌಡ ಮಾತನಾಡಿ ನನ್ನೂರಿನಲ್ಲೇ ನೂರಾರು ಮರಗಳನ್ನು ಕಡಿದು ಮಾರಣಹೋಮ ಮಾಡುತ್ತಿರುವುದು ನನಗೆ ತುಂಬಾ ನೋವಾಗಿದೆ. ಹೀಗಿರುವಾಗ ನಾನು ಗಿಡ ನೆಡುವವಳೆಂದು ನೀಡಿ ಗೌರವಿಸಲಾಗಿದ್ದ ಪದ್ಮಶ್ರೀ ಪುರಸ್ಕಾರದ ಸಂತಸ ಇನ್ನೆಲ್ಲಿ ಅನುಭವಿಸಲಿ ಎಂದು ಬೇಸರ ವ್ಯಕ್ತ ಪಡಿಸಿ, ಆಣೆಕಟ್ಟು ಯೋಜನೆಗೆ ತಮ್ಮ ಸಂಪೂರ್ಣ ವಿರೋಧವಿದೆ ಎಂದು ತಿಳಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಆನಂದು ಗೌಡ, ಪ್ರಮುಖರುಗಳಾದ ಸಂತೋಷ ಗೌಡ, ಜಯಪ್ರಕಾಶ್ ಹಿಲ್ಲೂರು, ಹಾಗೂ ಸ್ಥಳೀಯ ರೈತರಿದ್ದರು . ಸ್ಥಳೀಯರ ಪ್ರತಿಭಟನೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸರ್ವೆ ಕಾರ್ಯ ನಡೆಸದೇ ವಾಪಸ್ಸಾಗಿದ್ದು, ಸ್ಥಳೀಯರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button