ಸೂರ್ಯ ಚಂದ್ರ ಚಿಹ್ನೆಯ ಮೇಲೆ ಪಂಥದ ಹಣ : ಕುಟ ಕುಟಿ ಜುಗಾರಾಟ ಆಡುತ್ತಿದ್ದ ಐವರ ಮೇಲೆ ಪೊಲೀಸ್ ಪ್ರಕರಣ
ಅಂಕೋಲಾ: ಸೂರ್ಯ, ಚಂದ್ರ ಮತ್ತಿತರ ಚಿಹ್ನೆಗಳ ಮೇಲೆ ಪಂಥ ಕಟ್ಟಿ ಕಾನೂನು ಬಾಹಿರವಾಗಿ ಕುಟಕುಟಿ ಜುಗಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ಹೊನ್ನೆಬೈಲ್ ವ್ಯಾಪ್ತಿಯ ದೇವಸ್ಥಾನದ ಬಳಿ ನಡೆದಿದೆ. ಈ ಕುರಿತು ಒಟ್ಟು 5 ಜನರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಅಂಕೋಲಾ ತಾಲೂಕಿನ ಹಾರವಾಡ ನಿವಾಸಿ ಸಾಯಿನಾಥ ಜಿ ಗೌಡ ಬಂಧಿತ ಆರೋಪಿಯಾಗಿದ್ದಾನೆ. ಗೋಕರ್ಣ ಸಮೀಪದ ಹಿತ್ತಲಮಕ್ಕಿ ನಿವಾಸಿ ಮಾಣೇಶ್ವರ ಪಟಗಾರ, ಕುಮಟಾ ಮಾಸೂರು ನಿವಾಸಿ ಸುರೇಶ ನಾಯ್ಕ, ದೇವರಬಾವಿ ನಿವಾಸಿ ಗಿರೀಶ ಗೌಡ, ಅಂಕೋಲಾ ತಾಲೂಕಿನ ಸಿಂಗನಮಕ್ಕಿ ನಿವಾಸಿ ಈಶ್ವರ ಗೌಡ ಎನ್ನುವವರು ದಾಳಿಯ ಕಾಲಕ್ಕೆ ಓಡಿಹೋಗಿ ತಪ್ಪಿಸಿಕೊಂಡಿದ್ದು ಅವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.
ಆರೋಪಿತರು ಮಧ್ಯರಾತ್ರಿ, ಆರ್ಟಿನ್, ಚಂದ್ರ , ಸೂರ್ಯ ಮತ್ತಿತರ ಬೇರೆ ಬೇರೆ ಚಿಹ್ನೆಗಳಿಗೆ ಪಂಥದ ಹಣ ಕಟ್ಟಿ ಕುಟಕುಟಿ ಜುಗಾರಾಟದಲ್ಲಿ ತೊಡಗಿದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದು 3780 ರೂಪಾಯಿ ನಗದು ಹಣ ಮತ್ತು ಕುಟಕುಟಿ ಜುಗಾರಾಟದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅಂಕೋಲಾದ ಹಲವೆಡೆ ನಡೆಯುತ್ತಿದ್ದ ಹತ್ತಾರು ಕುಟ ಕುಟಿ ಮಂಡಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಜೋರಾಗಿ ಸುದ್ದಿ ಹರಡಿ,ನಂತರ ಅದು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು.ಇದೀಗ ಚುನಾವಣೆ ನೀತಿ ಸಂಹಿತೆಯೂ ಘೋಷಣೆಯಾಗಿದ್ದು,ಅಕ್ರಮ ಸರಾಯಿ, ಕುಟಕುಟಿಯಂತ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಬಿಗು ಕ್ರಮ ಕೈಗೊಳ್ಳಲು ಮುಂದಾದಂತಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ