Big News
Trending

ದೇಶಕ್ಕೆ ಬೆಳಕು ನೀಡುವ ಜಿಲ್ಲೆಯಲ್ಲಿಯೇ ಕತ್ತಲು: ಸಾವಿರಾರು ಮನೆಗಳಿಗೆ ಇನ್ನೂ ಸಿಗದ ವಿದ್ಯುತ್ : ಸ್ವತಂತ್ರ ಬಂದು 77 ವರ್ಷ ಕಳೆದರೂ ಚಿಮಣಿ ದೀಪವೇ ಗತಿ!

ಕಾರವಾರ: ದೇಶ ಎಷ್ಟೇ ಮುಂದುವರೆದರೂ ಅಭಿವೃದ್ಧಿ ಎನ್ನುವುದು ಉತ್ತರಕನ್ನಡ ಜಿಲ್ಲೆಯ ಜನರಿಗೆ ಮರೀಚಿಕೆ ಎನ್ನುವಂತಿದೆ. ದೇಶಕ್ಕೆ ಬೆಳಕು ನೀಡುತ್ತಿರುವ ಹಲವು ಯೋಜನೆಗಳಿರುವ ಉತ್ತರಕನ್ನಡ ಜಿಲ್ಲೆಯ 1,500 ಕ್ಕೂ ಅಧಿಕ ಮನೆಗಳು ವಿದ್ಯುತ್ ಸಂಪರ್ಕವಿಲ್ಲದೇ ಈವರೆಗೂ ಜೀವನ ನಡೆಸುತಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಒಂದೆಡೆ ಕತ್ತಲ್ಲೇ ಚಿಮಣಿ ಬೆಳಕಲ್ಲಿ ಅಡುಗೆ ಮಾಡುತ್ತಿರುವ ವೃದ್ಧೆ. ಮತ್ತೊಂದೆಡೆ ಚಿಮಣಿ ಬೆಳಕಲ್ಲಿ ಓದುತ್ತಿರುವ ಮಕ್ಕಳು .ಹೌದು ಈ ದೃಶ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅತೀ ಹೆಚ್ಚು ವಿದ್ಯುತ್ ಸರಬರಾಜು ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಕೆಲ ಮನೆಗಳ ದೃಶ್ಯ.

ಇಡೀ ದೇಶದಲ್ಲಿ ಎಲ್ಲಾ ಮನೆಗೂ ವಿದ್ಯುತ್ ಸಂಪರ್ಕ ಕೊಡುತ್ತೇವೆ ಎನ್ನುವ ಕೇಂದ್ರ ಸರ್ಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿನ ಕೈಗಾ, ಕದ್ರಾ, ಅಂಬಿಕಾನಗರ, ಗೇರುಸೊಪ್ಪ ದಂತಹ ವಿದ್ಯುತ್ ಉತ್ಪಾದನಾ ಘಟಕ ಹೊಂದಿದೆ. ರಾಜ್ಯ ಸರ್ಕಾರ ಸಹ ಈ ಭಾಗದ ವಿದ್ಯುತ್ ನನ್ನು ಬಳಸುತ್ತದೆ. ಆದ್ರೆ ದೀಪದ ಬುಡ ಕತ್ತಲು ಎನ್ನುವಂತೆ ಪ್ರತಿ ದಿನ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಿದರರು ಸಹ ಜಿಲ್ಲೆಯ ಜೋಯಿಡಾ, ಕದ್ರಾ, ಕಾರವಾರ, ಸೇರಿದಂತೆ ಹಲವು ತಾಲೂಕಿನ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ.

ಜೋಯಿಡಾ ಭಾಗದ ,ಡಿಗ್ಗಿ ,ಉಳವಿ ಪಂಚಾಯ್ತಿಯ ಅಂಬೂಳಿ, ಮುಂಬರ್ಗಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಸ್ವತಂತ್ರ ಬಂದು 77 ವರ್ಷಗಳು ಕಳೆದರೂ ಚಿಮಣಿ ದೀಪವೇ ಗತಿಯಾಗಿದ್ದು ಇಲ್ಲಿನ ಜನರಿಗೆ ಸೂರ್ಯನೇ ಗತಿಯಾಗಿದ್ದು ಸೂರ್ಯನೊಟ್ಟಿಗೆ ಏಳಬೇಕು ,ಸೂರ್ಯನೊಟ್ಟಿಗೆ ಮಲಗಬೇಕ ಎನ್ನುವ ಪರಿಸ್ಥಿತಿ ಈಗಲೂ ಇದೆ.

ಇನ್ನು ಉತ್ತರ ಕನ್ನಡ ಬಹುತೇಕ ಗುಡ್ಡಗಾಡು ಪ್ರದೇಶ ಹೊಂದಿದೆ. ಹೀಗಾಗಿ ಹಲವು ಗಟ್ಟಭಾಗದಲ್ಲಿ ವನವಾಸಿಗಳಾದ ಸಿದ್ದಿ, ಹಾಲಕ್ಕಿ ಜನಾಂಗಗಳು ವಾಸವಿದೆ. ಇಂತಹ ಚಿಕ್ಕ ಹಳ್ಳಿಗಳಿಗೆ ಇದುವರೆಗೂ ಅರಣ್ಯವ್ಯಾಪ್ತಿಯಾಗಿದ್ದರಿಂದ ರಸ್ತೆಗಳೇ ಇಲ್ಲ. ಇನ್ನು ಹಲವು ಗ್ರಾಮಗಳ ಹೆಸರನ್ನೇ ಅಧಿಕಾರಿಗಳು ತಮ್ಮ ಕಡತದಲ್ಲಿ ಸೇರಿಸಿಕೊಂಡಿಲ್ಲ.ಇದಲ್ಲದೇ ಜೋಯಿಡಾ ಭಾಗದಲ್ಲಿನ ಉಳವಿ ಪಂಚಾಯ್ತಿಯ ಹಳ್ಳಿಗಳಿಗೆ 2015 ರಲ್ಲೇ ವಿದ್ಯುತ್ ಸಂಪರ್ಕ ನೋಡಲಾಗಿದೆ ಎಂದು ದಾಖಲೆ ಹೇಳುತ್ತವೆ.

ಆದ್ರೆ ಈವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಇನ್ನು ಕೆಲವು ಹಳ್ಳಿಗಳಿಗೆ ಸೋಲಾರ್ ವಿದ್ಯುತ್ ದೀಪಗಳನ್ನು ನೀಡಲಾಗಿದೆ.ಆದ್ರೆ ಮಳೆಗಾಲದಲ್ಲಿ ಕತ್ತಲಲ್ಲೇ ಇವರು ಬದುಕಬೇಕು.ಇನ್ನು ಕೆಲವು ಗ್ರಾಮದ ಭಾಗದಲ್ಲೇ ವಿದ್ಯುತ್ ತಂತಿ ಹಾದು ಹೋಗಿದ್ದರೂ ಸಂಪರ್ಕ ಮಾತ್ರ ಕೊಡದೇ ಕತ್ತಲಲ್ಲೇ ಜನರು ಜೀವನ ನಡೆಸುವಂತಾಗಿದೆ.

ಜಿಲ್ಲಾಡಳಿತದ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ 1680 ಮನೆಗಳಿಗೆ ಮಾತ್ರ ಈವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ ಶೀಘ್ರದಲ್ಲೇ ಇರುವ ಸಮಸ್ಯೆ ಸರಿದೂಗಿಸಿ ಕೊಡಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರ ಹಲವು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳ್ಳಿಗರಿಗೆ ವಿದ್ಯುತ್ ಗ್ಯಾರಂಟಿ ಮಾತ್ರ ಇಲ್ಲವೇ ಇಲ್ಲ. ಇನ್ನಾದರೂ ಸರ್ಕಾರ ಬೆಳಕು ಯೋಜನೆಯಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ಬೆಳಕನ್ನು ನೀಡುವ ಮೂಲಕವಾದರೂ ಈ ಹಳ್ಳಿಗರ ಜನರ ಬಾಳಿಗೆ ಬೆಳಕು ತರಲಿ ಎಂಬುದೇ ನಮ್ಮ ಆಶಯ.

ವಿಸ್ಮಯ ನ್ಯೂಸ್, ಕಾರವಾರ

Back to top button