ಕಾರವಾರ: ಅವರೆಲ್ಲರೂ ಕೊಂಕಣ ರೈಲ್ವೆಗಾಗಿ ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದರು. ಆದರೆ ಊರಿನ ರಸ್ತೆಗೆ ಅಡ್ಡವಾಗಿರುವ ರೈಲ್ವೆ ಹಳಿಗೆ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ಕಳೆದ 30 ವರ್ಷದಿಂದ ಒತ್ತಾಯಿಸುತ್ತಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಬೇಡಿಕೆಗೆ ಘಟ್ಟಿ ಧ್ವನಿ ಎತ್ತಿರುವ ಗ್ರಾಮಸ್ಥರು ಇದೀಗ ಲೋಕಸಭಾ ಚುನಾವಣೆಯನ್ನೆ ಬಹಿಷ್ಕರಿಸಲು ಮುಂದಾಗಿದ್ದು ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಹೊನ್ನಾವರ ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯಿತಿಯಲ್ಲಿ ಕೊಂಕಣ ರೈಲ್ವೆ ಹಾದು ಹೋಗಿದೆ. ಆದರೆ ಅಲ್ಲಿನ ಕೋಟ, ತುಂಬೆಬೀಳು ಹಾಗು ಇತರ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿನ ರೈಲ್ವೇ ಗೇಟ್ ಯಾವಾಗಲೂ ಮುಚ್ಚಿರುತ್ತದೆ. ಇದರಿಂದ ಶಾಲೆಯ ಮಕ್ಕಳು ಹಾಗೂ ವೃದ್ದರಿಗೆ ತೊಂದರೆಯಾಗುತ್ತಿದೆ. ಲೋಕಸಭೆ ಚುನಾವಣೆಯೊಳಗೆ ಕೊಂಕಣ ರೈಲ್ವೆಗೆ ಮೇಲ್ಸೇತುವೆ ಮಾಡಲು ಕ್ರಮ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಕೋಟ, ತುಂಬೆಬೀಳು, ಅನಂತವಾಡಿ ರೈಲ್ಬೆ ಮೇಲ್ಸೇತುವೆ ಹೋರಾಟ ಸಮಿತಿಯ ಸದಸ್ಯರು ಎಚ್ಚರಿಸಿದ್ದಾರೆ.
ಇನ್ನು ರೈಲ್ವೇ ಸೇತುವೆಯನ್ನು ನಿರ್ಮಿಸುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಹಾಗೂ ಕೊಂಕಣ ರೈಲ್ವೇ ಮುಖ್ಯ ಕಚೇರಿಗೆ ಕಳೆದ 5 ವರ್ಷದಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದೇವೆ. ಜತೆಗೆ ಪ್ರಧಾನ ಮಂತ್ರಿ ಕಚೇರಿಗೂ ಪತ್ರ ಬರೆಯಲಾಗಿದೆ. ಆದರೆ ಸೂಕ್ತ ಉತ್ತರ ಬಂದಿಲ್ಲ. ಸಂಸದರಿಗೂ ಮೂರು ಬಾರಿ ಮನವಿ ನೀಡಿದ್ದು ಯಾವುದೇ ಸ್ಪಂಧನೆ ನೀಡಿಲ್ಲ. ಆದರೆ ೨೦೧೯ ರಲ್ಲಿ ಕೊಂಕಣ ರೈಲ್ವೇ ಕಚೇರಿಯಿಂದ ಉತ್ತರ ಬಂದಿದ್ದು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರವು ಶೇ. ೫೦ ರಷ್ಟು ಹಣ ನೀಡಬೇಕು ಎಂದು ತಿಳಿಸಿದ್ದು ಸರಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಲೋಕಸಭೆ ಚುನಾವಣೆ ಮಾತ್ರವಲ್ಲದೇ ಸೇತುವೆ ನಿರ್ಮಾಣವಾಗುವವರೆಗೆ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡಲಿದ್ದೇವ ಎಂದು ಹೋರಾಟ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ ಆಗ್ರಹಿಸಿದರು.
ಇನ್ನು ಕಳೆದ ೩೦ ವರ್ಷ ದಿಂದ ತೊಂದರೆ ಅನುಭವಿಸುತ್ತಿದ್ದೇವೆ. ೧೦ ನಿಮಿಷ ಗೇಟ್ ಹಾಕಿದರೆ ನೂರಾರು ವಾಹನಗಳು ನಿಲ್ಲುತ್ತವೆ. ಹೀಗಿದ್ದರೂ ವಾಹನಗಳು ಬಂದಾಗ ಅಕ್ಕಪಕ್ಕದ ನಿಲ್ದಾಣಗಳಿಗೆ ಸಂಪರ್ಕಿಸಿ ಬಳಿಕ ೪೫ ನಿಮಿಷದ ಬಳಿಕ ಗೇಟ್ ತೆಗೆಯಲಾಗುತ್ತದೆ. ಇದರಿಂದಲೇ ತುರ್ತು ಪರಿಸ್ಥಿತಿಯಲ್ಲಿದ್ದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಗ್ರಾಮಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮತಗಳಿದ್ದು ಚುನಾವಣಾ ಬಹಿಷ್ಕಾರ ಮಾಡಲಿದ್ದೇವೆ.
ಇದಕ್ಕೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ರೈಲ್ವೆ ಹಳಿಯ ಮೇಲೆ ಕೂತು ಪ್ರತಿಭಟನೆ ಮಾಡಲಿದ್ದೇವೆ. ಈ ಸಮಸ್ಯೆಯಿಂದ ಊರಿಗೆ ಸಾರಿಗೆ ಬಸ್ ಕೂಡ ಬರುವುದಿಲ್ಲ. ಬಸ್ಸಿಗಾಗಿ ನಾಲ್ಕು ಕಿಲೋಮೀಟರ್ ನಡೆಯಬೇಕಾಗುತ್ತದೆ. ಶಾಲೆಯ ಮಕ್ಕಳು ಕೂಡ ಇದೆ ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಯ ಮಕ್ಕಳು ಹಾಗು ಅನಾರೋಗ್ಯ ಪೀಡಿತರು ಗ್ರಾಮ ಬಿಟ್ಟು ಹೋಗಲು ಕೂಡ ತೊಂದರೆಯಾಗುತ್ತದೆ ಎಂದು ಗ್ರಾಮದ ನಾಗಮ್ಮ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆ ಕಳೆದ 30 ವರ್ಷದಿಂದ ರೈಲ್ವೆ ಮೇಲ್ಸೇತುವೆಗಾಗಿ ಹೋರಾಟ ನಡೆಸುತ್ತಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸ್ಥಳೀಯರು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದು ಇನ್ನಾದರು ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳುವೋದೊ ಕಾದು ನೋಡಬೇಕಾಗಿದೆ.
ವಿಸ್ಮಯ ನ್ಯೂಸ್, ಕಾರವಾರ