ಶಿರಸಿ : ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಮಹಿಳೆಯರಿಗೆ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳುತ್ತಾ ಇಂದು ಮಹಿಳೆಯರ ಜೀವಕ್ಕೆ ಗ್ಯಾರಂಟಿ ಇಲ್ಲದ ದುಸ್ಥಿತಿ ರಾಜ್ಯಕ್ಕೆ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಶಿರಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಪ್ರತಿ ಸಂದರ್ಭದಲ್ಲಿಯೂ ಜನರಲ್ಲಿ ಮತೀಯ ಭಾವನೆ ಕೆರಳಿಸಿ, ಉದ್ರೇಕಗೊಳ್ಳುವಂತೆ ಮಾಡಿ ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮತಗಳಿಕೆ ಮತ್ತು ಅಧಿಕಾರದ ಆಸೆಯ ಮೂಲ ಉದ್ದೇಶದಿಂದ ಹಿಂದೂ ಸಮಾಜವನ್ನು ಬಲಿ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸಮನಾಗಿ ನೋಡುವುದನ್ನು ಬಿಟ್ಟು ಓಲೈಕೆಯ ರಾಜಕಾರಣಕ್ಕೆ ಬಹುಸಂಖ್ಯಾತರ ಭಾವನೆಯನ್ನು ಕಾಂಗ್ರೆಸ್ ಧಿಕ್ಕರಿಸುತ್ತಿದೆ ಎಂದ ಕಾಗೇರಿ, ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮತದಾರರು ಜಾಗೃತರಾಗಿ ಯೋಚಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.
ಹನುಮಾನ ಚಾಲೀಸ ಪಠಿಸಿದರೆ, ಜೈಶ್ರೀರಾಮ ಘೋಷಣೆ ಕೂಗಿದರೆ ಹಿಂದೂಗಳ ಮೇಲೆ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲಿಸುತ್ತದೆ. ನಮ್ಮ ಸನಾತನ ಧರ್ಮದ ಪವಿತ್ರ ಭಗವಾಧ್ವಜ ಹಾರಿಸಲು ಬಿಡುತ್ತಿಲ್ಲ. ನಮ್ಮ ರಾಜ್ಯದ ಪವಿತ್ರ ದೇಗುಲ ಎಂದು ಕರೆಯುವ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳದೇ ಸುಮ್ಮನೆ ರಾಜ್ಯ ಸರ್ಕಾರ ಕುಳಿತುಕೊಂಡಿದೆ. ಓಲೈಕೆಯ ರಾಜಕಾರಣ ನಡೆಯುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಪರಮೇಶ್ವರ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಹಣ, ಗ್ಯಾರಂಟಿ, ಜಾತಿ, ಧರ್ಮವನ್ನು ಒಡೆದು ಆಳುವ ಸ್ವಾರ್ಥದ ರಾಜಕಾರಣ ಕಾಂಗ್ರೆಸ್ ಮಾಡುತ್ತಿದ್ದು, ಅಲ್ಪಸಂಖ್ಯಾತರನ್ನು ದಾರಿತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದ್ದು, ಇದನ್ನು ಅರ್ಥಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹತ್ಯೆ ನಿರಂತರವಾಗಿ ನಡೆಯುತ್ತದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ, ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಬೇಕು ಎಂದು ವಿನಂತಿಸಿದರು.
ವಿಸ್ಮಯ ನ್ಯೂಸ್, ಶಿರಸಿ