Important
Trending

ತಹಶೀಲ್ದಾರ್ ಕಾರ್ಯಾಲಯದ ಕಟ್ಟಡದ ಒಳಗನುಗ್ಗಿದ ಮಳೆನೀರು: ಕಚೇರಿ ಕೆಲಸ ಕಾರ್ಯಗಳು ಅಸ್ತವ್ಯಸ್ತ

ಅಂಕೋಲಾ: ತಹಶೀಲ್ದಾರ್ ಕಾರ್ಯಾಲಯದ ಕಟ್ಟಡದ ಮೇಲ್ಮಮಹಡಿಯ ವಿಸ್ತರಣಾ ಕಾಮಗಾರಿ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು,ನಾನಾ ಕಾರಣಗಳಿಂದ ಇಲ್ಲಿಯ ಕಾಮಗಾರಿಯ ವಿರುದ್ಧ ಆಗಾಗ ಸಾರ್ವಜನಿಕರಿಂದ ಅಪಸ್ವರ ಮತ್ತು ಅಸಮಾಧಾನ ಕೇಳಿ ಬರುತ್ತಲೇ ಇದೆ. ಇತ್ತೀಚೆಗಷ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ದಾಳಿ ನಡೆಸಿ,ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಮತ್ತು ಪಕ್ಕದ ಆವರಣದಲ್ಲಿ ಅಧಿಕೃತ ಪರವಾನಿಗೆಯಿಲ್ಲದೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳು ಮತ್ತಿತರ ಕಟ್ಟಡ ಸಾಮಗ್ರಿಗಳನ್ನು ದಾಸ್ತಾನು ಮಾಡಿರುವುದಕ್ಕೆ, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು.

ಆನಂತರವು ಕಟ್ಟಡ ಕಾಮಗಾರಿ ಮುಂದುವರೆದಿತ್ತಾದರೂ,ಅಕಾಲಿಕ ಮಳೆಯ ಮುನ್ಸೂಚನೆಯ ನಡುವೆಯೂ ಸಂಬoಧಿತ ಕಟ್ಟಡ ಕಾಮಗಾರಿ ನಡೆಸುವವರು,ಕೆಲ ಅಗತ್ಯ ಮುಂಜಾಗ್ರತೆ ಕೈಗೊಳ್ಳದೆ ಇರುವುದರಿಂದ ತಹಶೀಲ್ದಾರ್ ಕಾರ್ಯಾಲಯದ ಕಟ್ಟಡದ ಹಲವು ಕೋಣೆಗಳಿಗೆ ಮಳೆ ನೀರು ಒಳ ನುಗ್ಗಿ,ಆವಾಂತರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದರಿಂದ ಸರ್ವೆ ಆಫೀಸ್ ಸೇರಿದಂತೆ, ತಹಶೀಲ್ದಾರ ಕಾರ್ಯಾಲಯದ ಇತರ ಕೊಠಡಿಗಳಿಗೆ ನೀರು ಪ್ರವೇಶಿಸಿ ಸಿಬ್ಬಂದಿಗಳು ಕೆಲ ಸಮಸ್ಯೆ ಎದುರಿಸುವಂತಾಯಿತು.

ತಹಶೀಲ್ಧಾರರ ಕಾರ್ಯಾಲಯದ ಕಟ್ಟಡದ ಮೇಲ್ಮಹಡಿಯಲ್ಲಿ ಕಾರ್ಯಾಲಯದ ವಿಸ್ತರಣಾ ಕಾಮಗಾರಿ ನಡೆಯುತ್ತಿದ್ದು ಮೇಲಗಡೆ ಬಿದ್ದ ಮಳೆ ನೀರು ಹೊರಗೆ ಹರಿದು ಹೋಗಲು ಸಾಧ್ಯವಾಗದೇ, ಮಹಡಿ ಮೆಟ್ಟಿಲುಗಳ ಮೇಲಿಂದ ಇಳಿದು ತಹಶೀಲ್ಧಾರರ ಕಾರ್ಯಾಲಯ ಒಳಗೆ ಹರಿದು ಬಂದಿದೆ., ಭೂ ದಾಖಲೆಗಳ ಕಚೇರಿ, ಚುನಾವಣಾ ವಿಭಾಗಗ ಸೇರಿದಂತೆ ಬಹುತೇಕ ಎಲ್ಲಾ ಕೊಠಡಿಗಳಿಗೆ ನೀರು ನುಗ್ಗಿದೆ.

ಶನಿವಾರ ಬೆಳಿಗ್ಗೆ ಕಚೇರಿಗೆ ಬಂದ ಸಿಬ್ಬಂದಿಗಳು ಮೇಲಿನಿಂದ ಎಲ್ಲೆಡೆ ನೀರು ನುಗ್ಗಿ ಬರುತ್ತಿರುವುದನ್ನು ಕಂಡು ಅವಕ್ಕಾಗಿದ್ದಾರೆ.ರಜಾ ದಿನವಾಗಿದ್ದರೆ ನೀರಿನ ಪ್ರಮಾಣ ಹೆಚ್ಚಿ ಇಲ್ಲವೇ ತೇವಾಂಶದಿoದ ಕಂಪ್ಯೂಟರ್, ಕಾಗದ ಪತ್ರಗಳು, ಕೆಲ ಅಗತ್ಯ ದಾಖಲಾತಿಗಳು ಮತ್ತು ಕಚೇರಿ ಪೀಠೋಪಕರಣಗಳಿಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇತ್ತೆಂದು ಕೇಳಿ ಬಂದಿದೆ.

ಈ ನಡುವೆ ತಹಶೀಲ್ಧಾರ ಕಾರ್ಯಾಲಯದ ಕೆಲ ಸಿಬ್ಬಂದಿಗಳು ಮತ್ತು ತಡವಾಗಿ ಎಚ್ಚೆತ್ತುಕೊಂಡ ಗುತ್ತಿಗೆದಾರನ ಕಡೆಯವರು ಒಳ ನುಗ್ಗಿದ ನೀರನ್ನು ಮತ್ತು ರಾಡಿಯನ್ನು ಹೊರಹಾಕಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಬಹು ಹೊತ್ತು ತೊಡಗಿಕೊಳ್ಳುವಂತಾಯಿತು.ಲೋಕೋಪಯೋಗಿ ಇಲಾಖೆಯ ಹಿರಿಕಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ,ಮತ್ತೆ ಮಳೆಯಾದರೆ ಈ ರೀತಿ ಅವಾಂತರವಾಗದAತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬoಧಿಸಿದ ಗುತ್ತಿಗೆದಾರನಿಗೆ ಸೂಚಿಸಿದರು ಎನ್ನಲಾಗಿದೆ.

ಹಲವು ಕೊಠಡಿಗಳಲ್ಲಿ ಒಳ ನುಗ್ಗಿದ್ದ ನೀರನ್ನು ಹೊರಹಾಕಿ ಸ್ವಚ್ಛಗೊಳಿಸುತ್ತಿರುವುದರಿಂದ,ಕೆಲ ಕಾಲ ತಹಶೀಲ್ದಾರ್ ಕಾರ್ಯಾಲಯದ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ತಮ್ಮ ಟೇಬಲ್ ಮೇಲೆ ಕುಳಿತು ಕೆಲಸ ಮಾಡಲಾಗದ,ಅಸಹಾಯಕ ಸ್ಥಿತಿಯಲ್ಲಿ ಕೆಲ ಕಾಲ ಕೈಕಟ್ಟಿ ನಿಲ್ಲುವಂತಾಗಿರುವುದು ಕಂಡುಬoತು.

ಇದೇ ವೇಳೆ, ತಾಲೂಕಿನಲಿ ಅಕಾಲಿಕವಾಗಿ ಸುರಿದ ಮಳೆ ಅಲ್ಲಲಿ ಕೆಲ ಅವಾಂತರಗಳನ್ನು ಸೃಷ್ಟಿಸಿದೆ.ಶಿರೂರ ಪ್ರದೇಶದಲ್ಲಿ ಮನೆಯೊಂದರ ಮೇಲೆ ಮರ ಒಂದು ಮುರಿದು ಬಿದ್ದು,ಮನೆಗೆ ಧಕ್ಕೆಯಾಗಿದೆಯಲ್ಲದೇ,ಮನೆಯ ಒಳಗಡೆ ಸಂಗ್ರಹಿಸಿಟ್ಟ ಭತ್ತದ ಚೀಲಗಳು ಮತ್ತಿತರ ಮನೆ ಸಾಮಗ್ರಿ ಮಳೆ ನೀರಿನಿಂದ ಹಾನಿಗೊಳಗಾಗಿದೆ ಎನ್ನಲಾಗಿದ್ದು,ತಾಲೂಕ ಪಂಚಾಯತ್ ಹಾಗೂ ಸ್ಥಳೀಯ ಗ್ರಾಫಂ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಬಾರಿ ಪ್ರಮಾಣದ ಗುಡುಗು ಹಾಗೂ ಮಳೆಯಿಂದಾಗಿ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳ ಹಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿದ್ಯುತ್ ಪೂರೈಕೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button