Big News
Trending

ಪರಿಪೂರ್ಣ ವಿಕಾಸದೆಡೆಗೆ ಸಾಗಿಸಬಲ್ಲ ಶೃದ್ದಾ ಕೇಂದ್ರವೇ ಗುರು

ವೈಭವಶಾಲಿಯಾದ ಒಂದು ಸತ್ವಪೂರ್ಣ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ಸಕ್ರಿಯ ಸಜ್ಜನನ ಚಿಂತನೆಯಿಂದ ಮತ್ತು ಆ ಚಿಂತನೆಗಳಿಗನುಗುಣವಾದ ಆತನ ಆದರ್ಶ ಜೀವನ ಪದ್ಧತಿಯಿಂದ.  ಸುಸಂಪನ್ನ ವೈಭವ ಪೂರ್ಣ ರಾಷ್ಟ್ರದ ನಿರ್ಮಿತಿಗಾಗಿ ಪರಂಪರಾಗತ ಮೌಲ್ಯಗಳ ಅರಿವುಳ್ಳ ಪ್ರತಿವ್ಯಕ್ತಿಯ ಕೊಡುಗೆಯೂ ಮಹತ್ವ ಪೂರ್ಣ. ಆದರೆ ಮನುಷ್ಯನು ಯಾವಾಗಲೂ ತನ್ನದೇ ಆದ ಅನೇಕ ವಿಚಾರ, ಗೊಂದಲ, ಸಮಸ್ಯೆ ಹಾಗೂ ಪರಿಸ್ಥಿತಿಗಳಿಂದ ಸುತ್ತುವರಿಯಲ್ಪಟ್ಟಿರುತ್ತಾನೆ. ಅನೇಕ ಒಳಿತು ಕೆಡುಕಿನ, ನೋವು ನಲಿವಿನ ಸನ್ನಿವೇಶಗಳನ್ನು ಆತ ಎದುರಿಸುತ್ತಲೇ ಇರುತ್ತಾನೆ. ಇಂತಹ ಸಂದಿಗ್ಧ ಸಂಧರ್ಭಗಳಲ್ಲಿ ಧೈರ್ಯದಿಂದ ಅಪಾಯಗಳನ್ನು ನಿವಾರಿಸಿಕೊಳ್ಳುತ್ತಾ  ತನ್ನ ಜೀವನವನ್ನು ಉನ್ನತ ಉದ್ದೇಶಗಳಿಗಾಗಿಯೇ ಮೀಸಲಿರಿಕೊಳ್ಳುವ ಯೋಗ್ಯತೆ ಎಲ್ಲರಲ್ಲಿ ಇರಲು ಸಾಧ್ಯವಿಲ್ಲ. ತನ್ನಲ್ಲಿಯೇ ಅಂತಹ ಎಲ್ಲ ಯೋಗ್ಯತೆ ಇದೆಯೆಂದು ಅದಕ್ಕೆ ಯಾರ ಮಾರ್ಗದರ್ಶನ ಬೇಡ ಎಂದು ಅಹಂಭಾವದಿಂದ ಯಾವ ವ್ಯಕ್ತಿ  ಭಾವಿಸುತ್ತಾನೋ ಆತ ಸಮಾಜದಲ್ಲಿ ಏಳಿಗೆ ಸಾಧಿಸಲು ಸಾಧ್ಯವಿಲ್ಲ. ಆತನಿಗೆ ಇಂತಹ ದಂದ್ವದ ಸಂದರ್ಭದಲ್ಲಿ ಒಂದು ಶಕ್ತಿಯ ಮಾರ್ಗದರ್ಶನ ದಾರಿ ಅವಶ್ಯವಾಗಿ ಬೇಕಾಗುತ್ತದೆ.ಅಂತಹ ಮಾರ್ಗತೋರಬಲ್ಲ , ಪರಿಪೂರ್ಣ ವಿಕಾಸದೆಡೆಗೆ ಆ ವ್ಯಕ್ತಿಯನ್ನು  ಸಾಗಿಸಬಲ್ಲ ಒಂದು ಬಲವಾದ ಶ್ರದ್ಧಾ ಕೇಂದ್ರವೇ ’ಗುರು’. ಗುರು ಎಂದರೆ ಪೂರ್ಣತೆ .ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಹ. ನಮ್ಮ ಸನಾತನ ಪರಂಪರೆಯಲ್ಲಿ ಗುರುವಿಗೆ ಭಗವಂತನ ಸ್ಥಾನವನ್ನು ನೀಡಲಾಗಿದೆ. ಮನುಷ್ಯನ ಬದುಕನ್ನು ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಪಶುತ್ವದಿಂದ ದೈವತ್ವದೆಡೆಗೆ ನಡೆಸುವವನೆ ಗುರು. ’ನನ್ನ ಮುಂದೆ ಗುರು ಮತ್ತು ಗೋವಿಂದ  ಇಬ್ಬರೂ ಒಮ್ಮೆಗೆ ಬಂದರೆ ನಾನು ನನ್ನ ಗುರುವಿಗೆ ಮೊದಲು ವಂದಿಸುತ್ತೇನೆ ನಂತರ ಭಗವಂತನಿಗೆ ನಮಸ್ಕರಿಸುತ್ತೇನೆ, ಏಕೆಂದರೆ ಗುರುವಿಂದಲೇ ಅರಿವು, ಅರಿವಿನಿಂದಲೇ ಭಗವಂತನ ಪ್ರಾಪ್ತಿ’ ಎಂದು ಅನೇಕ ದಾಸರು  ಗುರುವನ್ನೇ ತಮ್ಮ ಹಾಡಿನಲ್ಲಿ ಹೊಗಳಿದ್ದಾರೆ. 

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿಎಂದು ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಗುರುವಿನ ಮಹತ್ವವನ್ನು ಅನೇಕ ದೃಷ್ಟಾಂತ ಗಳ ಮೂಲಕ ಹಾಡಿ ತಿಳಿಸಿದ್ದಾರೆ.ಹಾಗಾಗಿ ಯೋಗ್ಯ ಗುರು ಮತ್ತು ಸ್ಪಷ್ಟ ಗುರಿಯುಳ್ಳ ವ್ಯಕ್ತಿ ನಿಸ್ಸಂದೇಹವಾಗಿ ಪರಿಪೂರ್ಣತೆಯೆಡೆಗೆ ಸಾಗಬಲ್ಲ.

ಆದರ್ಶ ಗುರುಪರಂಪರೆಯನ್ನೇ ಹೊಂದಿದ ರಾಷ್ಟ್ರ ನಮ್ಮದು. ಧರ್ಮದ ರಕ್ಷಣೆಗಾಗಿ ತನ್ನ ಜೀವವನ್ನೇ ಪರಿತ್ಯಜಿಸಿದ ಮಹರ್ಷಿ ದಧೀಚಿಯಿಂದ ಹಿಡಿದು ಗುರು ತೇಗ ಬಹಾದ್ದೂರರ ವರೆಗೆ, ದುಷ್ಟ ಮರ್ದನಕ್ಕಾಗಿ ರಾಮ ಲಕ್ಷ್ಮಣರನ್ನು ತರಬೇತಿಗೊಳಿಸಿದ ವಶಿಷ್ಠ-ವಿಶ್ವಾಮಿತ್ರರಿಂದ ಹಿಡಿದು ಹಿಂದೂ ಸಾಮ್ರಾಜ್ಯ ಸ್ಥಾಪಿಸಲೆಂದು ತನ್ನ  ಶಿಷ್ಯರಿಗೆ ರ್ಸ್ಪೂತಿ ನೀಡಿದ ವಿದ್ಯಾರಣ್ಯ-ಸಮರ್ಥ ರಾಮದಾಸರವರೆಗೆ, ದೇಶದ ಘನತೆಯನ್ನೆ ಎತ್ತಿ ಹಿಡಿದ ವಿವೇಕಾನಂದರಂತ ಮಹಾನ್ ಚೇತನವನ್ನು ನೀಡಿದ ಪರಮಹಂಸರು.ಹೀಗೆ  ಸಾವಿರಾರು ಸಂಖ್ಯೆಯಲ್ಲಿ ಯೋಗ್ಯ ಗುರುಗಳ ಉದಾಹರಣೆಗಳು ನಮ್ಮಲ್ಲಿವೆ.
ಬರೀ ವ್ಯಕ್ತಿಗಳು ಮಾತ್ರವಲ್ಲ ಸಂಪೂರ್ಣ ಭಾರತ ದೇಶವೇ ಇಡೀ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಂತದ್ದನ್ನು ನಮ್ಮ ಇತಿಹಾಸದಲ್ಲಿ ಕಂಡಿದ್ದೇವೆ. ಇದೀಗ ಮತ್ತೆ ಅದು ಮರುಕಳಿಸುತ್ತೀರುವುದನ್ನು ನಾವು ಕಾಣುತ್ತಿದ್ದೇವೆ. ಸಮರ್ಥ ನಾಯಕನಿಂದ ಈ ವಿಶ್ವಗುರು ಪಟ್ಟ ಮತ್ತೆ ನಮ್ಮ ದೇಶಕ್ಕೆ ಪ್ರಾಪ್ತವಾಗುತ್ತಿದೆ. ಹಿಂದೆ ಜಗತ್ತಿನ ಎಲ್ಲಾ ಮೂಲೆಗಳಿಂದ ಜ್ಞಾನಾರ್ಜನೆಗಾಗಿ ನಮ್ಮ ದೇಶಕ್ಕೆ ಬರುತ್ತಿದ್ದರು. ಗಣಿತ, ವಿಜ್ಞಾನ, ಖಗೋಳ ಶಾಸ್ತ್ರ, ಲಲಿತ ಕಲೆ, ನಾಟ್ಯ, ಸಂಗೀತ, ವ್ಯಾಕರಣ, ಶಿಲ್ಪಕಲೆ, ಆಯುರ್ವೇದ,ಯೋಗ ಹೀಗೆ ಜ್ಞಾನದ ಯಾವುದೇ ಶಾಖೆಯಿರಲಿ ಅದರ ಮೂಲ ಅರಿಯಬೇಕೆಂದರೆ ಭಾರತಕ್ಕೇ ಬರಬೇಕಿತ್ತು. ಇಲ್ಲಿನ ಪ್ರಾಚೀನ ನಲಂದ, ತಕ್ಷಶಿಲಾ, ವಿಕ್ರಮಶಿಲಾ ಇತ್ಯಾದಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಲಕ್ಷಾಂತರ ವಿದೇಶೀಯರು ಧಾವಿಸಿ ಬರುತ್ತಿದ್ದರು. ಮಾತ್ರವಲ್ಲ ದೇಶದಾಚೆಯ ದೂರದ ನಾಡಿಗೂ ನಮ್ಮ ಪೂರ್ವಜರು, ಋಷಿ ಮುನಿಗಳು, ಸಾಧು ಸಂತರು ಯಾವುದೇ ಪ್ರತಿಫಲಾಕ್ಷೆಯಿಲ್ಲದೇ ಜ್ಞಾನ ಪ್ರಸಾರಕ್ಕಾಗಿ ತೆರಳುತ್ತಿದ್ದರು.  ಹೀಗೆ ಹೊರಟ ನಮ್ಮ ಪೂರ್ವಿಕರು ಯಾರೂ ಕೂಡ ಜಗತ್ತೆ ನಮ್ಮ ಸಂಪ್ರದಾಯ ಒಪ್ಪಬೇಕು ಅಂತ ಅವರ  ಸಂಪ್ರದಾಯಗಳನ್ನು ನಾಶಗೊಳಿಸಲಿಲ್ಲ, ಅಲ್ಲಿನ ಸಂಪತ್ತನ್ನೂ ಇವರ್ಯಾರು ದೋಚಲಿಲ್ಲ, ಮಾನವ ಹತ್ಯೆಗೆ ಮುಂದಾಗಲಿಲ್ಲ ಬದಲಾಗಿ ಆ ಸಮಾಜಗಳು ವಿನಾಶದಿಂದ ಪೂರ್ಣತೆಯೆಡೆಗೆ ಸಾಗಲು ಸಹಕರಿಸಿದರು ಎಂಬುದನ್ನು ನಾವು ಅನೇಕ ನೈಜ ಇತಿಹಾಸದ ಪುಸ್ತಕಗಳಿಂದ ತಿಳಿಯಬಹುದಾಗಿದೆ. ಇಂತಹ ಅನೇಕ ಇತಿಹಾಸ ಪುಸ್ತಕಗಳು ರಾಷ್ಟ್ರೋತ್ಥಾನ ಪ್ರಕಟಿಸಿದೆ.

ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ಅರ್ಥಪೂರ್ಣವಾಗಿ ಮುನ್ನಡೆಸುವಂತಾಗಲು ತನ್ನ ಜೀವನವನ್ನೇ ಮುಡಿಪಿಡುವ ಗುರುವನ್ನು ಗೌರವಿಸಲು ಆಷಾಢ ಪೂರ್ಣಿಮೆಯಂದು ಗುರುಪೂಜೆಯನ್ನು ಮಾಡುವ ಸಂಪ್ರದಾಯ ನಮ್ಮಲ್ಲಿದೆ. ಪ್ರಪಂಚದ ಅತಿ ಪ್ರಾಚೀನ ಜ್ಞಾನ ಸಂಪದವೆಂದು ಕರೆಯಲ್ಪಡುವ ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಭಾರತೀಯ ಸಂಸ್ಕೃತಿಯ ಹರಿವನ್ನು ಸರಾಗಗೊಳಿಸಿದ ಮಹರ್ಷಿ ವೇದವ್ಯಾಸರ ನೆನಪಿನಲ್ಲಿ ಈ ದಿನವನ್ನು ವ್ಯಾಸ ಪೂರ್ಣಿಮೆಯೆಂದೂ ಸಹ ಕರೆಯಲಾಗುತ್ತದೆ. ಭಗದ್ಗೀತೆಯಂತಹ ಮನೋವೈಜ್ಞಾನಿಕ ಕೃತಿಯನ್ನೊಳಗೊಂಡ ಮಹಾಭಾರತದಂತಹ ಇತಿಹಾಸವನ್ನು, ಪುರಾಣಗಳನ್ನು, ರಚಿಸಿ ಸನಾತನ ಧರ್ಮಕ್ಕೊಂದು ಭದ್ರ ಬುನಾದಿಯನ್ನು ನಿರ್ಮಿಸಿದವರು ಮಹರ್ಷಿ ವೇದವ್ಯಾಸರು.ಹೀಗಾಗಿ ಗುರುಪೂಜೆಯ ಸಂದರ್ಭದಲ್ಲಿ ಅಂತ ಮಹಾನ್ ಗುರುವನ್ನು ಸ್ಮರಿಸುವುದು ಅತ್ಯಂತ ಸೂಕ್ತ.

ಯಾವುದೇ ವ್ಯಕ್ತಿಯ ಕೆಲವೊಂದು ವಿಶೇಷ ಗುಣಗಳನ್ನು ಅವಲೋಕಿಸಿದಾಗ ಆತನ ಸಂಬಂಧವಾಗಿ ನಮ್ಮ ಮನಸ್ಸಿನಲ್ಲಿ ಆದರದ ಭಾವನೆಗಳು ಉಂಟಾಗುತ್ತದೆ. ಆದರೆ ಕಾಲ ಕಳೆದಂತೆ ಆ ವ್ಯಕ್ತಿಯ ಬೇರೆ ಬೇರೆ ಗುಣಾವಗುಣಗಳ ಪರಿಚಯವಾದಾಗ ಆತನ ವಿಷಯವಾಗಿ ತಿರಸ್ಕಾರದ ಭಾವನೆಯೂ ಮೂಡುವುದು. ತಮ್ಮದೇ  ಮಾರ್ಗದಿಂದ ಪತಿತರಾದ ಮಹಾಪುರುಷರು, ಸಿದ್ದಾಂತ, ಆದರ್ಶ, ಉದ್ದೇಶಗಳಿಂದ ಬದಿಗೆ ಸರಿದ ಸುಧಾರಕರು, ತಪೋಮಾರ್ಗದಿಂದ ದೂರ ಸರಿದ ಸಾಧಕರು, ಕಾಲಕ್ರಮೇಣ ನೀತಿಯ ಅಂಚನ್ನು ದಾಟಿ ಅನೀತಿಯೆಡೆಗೆ ಸಾಗಿದ ಅನೇಕ ನಾಯಕರುಗಳು ನಮಗೆ ಕಾಣಸಿಗುತ್ತಾರೆ. ಆದ್ದರಿಂದ ಯಾವುದೇ ವ್ಯಕ್ತಿಯನ್ನು ಗುರುಸ್ಥಾನದಲ್ಲಿರಿಸಿದರೆ, ಮುಂದೊಮ್ಮೆ ಪಶ್ಚಾತ್ತಾಪ ಪಡುವಂತಹ ಪ್ರಸಂಗ ಬಂದೀತು ಎಂಬ  ಕಾರಣದಿಂದ  ಜಗತ್ತಿನ ಅತ್ಯಂತ ಶಿಸ್ತಿನ,ದೇಶಭಕ್ತಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ವ್ಯಕ್ತಿ ಪೂಜೆಯಿಲ್ಲ, ಹಾಗೆಂದ ಮಾತ್ರಕ್ಕೆ ಅವ್ಯಕ್ತವೂ, ಅಮೂರ್ತವೂ, ನಿರಾಕಾರವೂ ಆಗಿರುವಂತಹದನ್ನು ಗುರುವಾಗಿ ಸ್ವೀಕರಿಸಲು ಸಾದ್ಯವಿಲ್ಲ. ಒಂದು ವೇಳೆ ವ್ಯಕ್ತಿ ಅಲ್ಲದಿದ್ದರೆ, ಯಾವುದಾದರೊಂದು ಪ್ರತೀಕ, ಚಿಹ್ನೆ ಅಥವ ವಸ್ತುವನ್ನು ಗುರುವೆಂದು ಸ್ವೀಕರಿಸಬೇಕು. ಹಿಂದೆ ರಾಷ್ಟ್ರಕ್ಕಾಗಿಯೇ ಜೀವವನ್ನು ಮುಡಿಪಿಟ್ಟ ವೀರ ಸಿಖ್ ಯೋಧರ ಹತ್ತನೇ ಗುರು ಗೋವಿಂದಸಿಂಗರು ತನ್ನ ನಂತರ ವ್ಯಕ್ತಿಯ ಬದಲಾಗಿ ’ಗುರು ಗ್ರಂಥಸಾಹೀಬ್’ ಅನ್ನೇ ಗುರುವನ್ನಾಗಿ ಸ್ವೀಕರಿಸಬೇಕೆಂದು ಆದೇಶಿಸಿದ್ದರು. ಹಾಗೇಯೇ ರಾಷ್ಟೀಯ ಸ್ವಯಂ ಸೇವಕ ಸಂಘದ ಸ್ಥಾಪಕರಾದ ಪರಮಪೂಜನೀಯ ಕೇಶವ ಬಲಿರಾಮಪಂಥ್ ಹೆಡ್ಗೆವಾರ್ ಅವರು ವ್ಯಕ್ತಿಗತ ಅಭಿಮಾನಕ್ಕೆ ಆಸ್ಪದವಿಲ್ಲದಂತಹ ಶ್ರೇಷ್ಠತೆಯನ್ನೇ ಸ್ವಯಂಸೇವಕರ ಮುಂದೆ ಆದರ್ಶವಾಗಿಸಲು, ಸಂಘದ ಗುರು ರಾಷ್ಟ್ರೀಯ ಜೀವನದ  ಪುನರ್ನಿಮಾಣದ ಸಂಕಲ್ಪಕ್ಕೆ ಬೇಕಾಗುವಂತಹ ಶ್ರೇಷ್ಠಗುಣಗಳನ್ನು ಸಂಚಯಿಸಲು ಸ್ಪೂರ್ತಿ ನೀಡುವಂತಿರಬೇಕು. ಅನೇಕ ವ್ಯಕ್ತಿಗಳನ್ನು ಸಂಘಟನೆಯ ಸೂತ್ರದಲ್ಲಿ ಪೋಣಿಸುವ ಶಕ್ತಿ ನೀಡಬೇಕು. ಸ್ವಯಂಸೇವಕರ ಜೀವನ ಕಾರ್ಯಕ್ಕೆ ಸದಾ ಪ್ರೇರಣೆ ನೀಡುವಂತಹ, ವಂದನೀಯವೂ, ಶ್ರೇಷ್ಠವೂ ಆದಂತಹ ಪ್ರತೀಕವನ್ನೇ ನಾವು ಗುರು ಸ್ವರೂಪಿಯಾಗಿ ಸ್ವೀಕರಿಸಬೇಕು ಎಂದರು. ಗುರುವು ನಮ್ಮ ಭವ್ಯ ಪೂರ್ವಪರಂಪರೆಯನ್ನು ಪ್ರಕಟಗೊಳಿಸಬೇಕು. ಈ ಆಳ ಚಿಂತನೆಯ ಫಲವಾಗಿ  ಡಾಕ್ಟರಜೀಯವರು ಸಂಘಕ್ಕೆ ಭಗವಾ ಧ್ವಜವನ್ನೇ ಗುರುವಂತೆ ಸ್ವೀಕರಿಸಿದರು. ಅತ್ಯಂತ ಪ್ರಾಚೀನ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿ ನಡೆದ ಭವ್ಯ ಕಾರ್ಯಗಳ, ದೇಶಭಕ್ತ ವೀರರು ತೋರಿದ ಪರಾಕ್ರಮಗಳ, ಹಾಗೂ ತೇಜಃಪೂರ್ಣ ಸಂಗತಿಗಳನ್ನು ನೆನಪಿಸುವುದು ಈ ಭಗವಾಧ್ವಜ. ಇದು ಯಜ್ಞದ ಜ್ವಾಲೆಯ ಪ್ರತೀಕ,  ಕತ್ತಲನ್ನು ಹೊಡೆದೋಡಿಸುವ ಅರುಣೋದಯದ ಬಣ್ಣವಾದ ಭಗವಾದ್ವಜ ಜ್ಞಾನದ ಸಂಕೇತ.  

ಯಾವುದೇ ರುಪದಲ್ಲಿ ಗುರುವಿರಲಿ ಪ್ರತಿಯೊಬ್ಬರ ಜೀವನಕ್ಕೊಂದು ದೃಷ್ಠಿ ನೀಡಿದ ಸನ್ಮಾರ್ಗ ತೋರಿದ ಮಹಾನ್ ಗುರುವಿಗೆ ಅಂತಃಕರಣ ಪೂರ್ವಕವಾಗಿ ಪ್ರಣಾಮ ಸಲ್ಲಿಸಿ ಸಮರ್ಪಣೆ ಮಾಡುವುದೇ ಗುರುದಕ್ಷಿಣೆ.  ಎಲ್ಲರೂ ಇಂದು ನಮ್ಮ ನಮ್ಮ ಗುರುವಿಗೆ ವಂದಿಸಿ  ಗುರುಪೂಜೆ ಮಾಡಿ ಧನ್ಯರಾಗೋಣ. ಭಾರತ ಮಾತಾಕಿ ಜೈ. ಜೈ ಗುರುದೇವ

ಲೇಖನ – ಉಮೇಶ ಮುಂಡಳ್ಳಿ ಭಟ್ಕಳ
[sliders_pack id=”1487″]

Back to top button