ಅಂಕೋಲಾ : ನಸುಕಿನ ವೇಳೆ ಟ್ರ್ಯಾಕ್ಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ,ಬೈಕಿಗೆ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ, ಬೈಕಿನಲ್ಲಿದ್ದವನೋರ್ವ ಸಜೀವ ಸುಟ್ಟು ಕರಕಲಾಗಿ,ಮೃತಪಟ್ಟ ಧಾರುಣ ಘಟನೆ ರಾ. ಹೆ 66 ರ ತಾಲೂಕಿನ ಹಟ್ಟಿಕೇರಿ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಬೆಳಂಬಾರದಲ್ಲಿ ಜಾತ್ರಾ ಉತ್ಸವ ಮುಗಿಸಿ ಬೈಕ್ ಮೇಲೆ ಹಾರವಾಡದ ಮನೆಗೆ ಮರಳುತ್ತಿದ್ದ ಯುವಕರಿದ್ದ ಬೈಕಿಗೆ, ಎದುರುಗಡೆಯಿಂದ ಜೋರಾಗಿ ಬಂದ ಗೋವಾ ಕಡೆಯಿಂದ ಹಾನಗಲ್ಲ ಕಡೆ ಹೊರಟಿತ್ತು ಎನ್ನಲಾದ ತೂಫಾನ್ ವಾಹನ ಒಂದು ಡಿಕ್ಕಿ ಪಡಿಸಿದ ಪರಿಣಾಮ,ಬೈಕ್ ನಲ್ಲಿದ್ದ ಇಬ್ಬರು ಸಿಡಿದು ಬಿದ್ದು ಗಂಭೀರ ಗಾಯಗೊಂಡರೆ, ಇನ್ನೋರ್ವ ಬೈಕಿಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಕರಕಲಾಗಿ ಸ್ಥಳದಲ್ಲಿಯೇಮೃತಪಟ್ಟ ಎನ್ನಲಾಗಿದೆ.
ರಸ್ತೆ ಅಪಘಾತ ಸಂಭವಿಸುತ್ತಿದ್ದಂತೆ ತೂಫಾನ್ ವಾಹನದಲ್ಲಿದ್ದವರು ವಾಹನ ಬಿಟ್ಟು ಸ್ಥಳದಿಂದ ಕಾಲ್ಕಿತ್ತರು ಎನ್ನಲಾಗಿದೆ. ಸುಮಂತ್ ಯಾದವ್ ಹರಿಕಂತ್ರ ಮೃತ ದುರ್ದೈವಿಯಾಗಿದ್ದು, ಗಂಭೀರ ಗಾಯಗೊಂಡ ಸುಮಿತ ಹರಿಕಂತ್ರ ಹಾಗು ಚಾಣಕ್ಯ ಹರಿಕಂತ್ರ ಅವರನ್ನು ಚಿಕಿತ್ಸೆಗಾಗಿ ಎನ್ ಎಚ್ ಎ ಐ ಆಂಬುಲೆನ್ಸ್ ಮುಖಾಂತರ ತಾಲೂಕಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಕ್ರಿಮ್ಸ್ ಗೆ ಕೊಂಡೊಯ್ಯಲಾಗಿದೆ. ಚಂದ್ರಹಾಸ ನಾಯ್ಕ. ಶ್ರೀಕಾಂತ್ ನಾಯ್ಕ ಹಾಗೂ ನಾಗರಾಜ ಐಗಳ, ನವೀನ್ ಪಡ್ತೀ, ನಿತಿನ್ ನಾಯ್ಕ, ಬಂಟ ನಾಯ್ಕ, ಮಂಜು ನಾಯ್ಕ ಮತ್ತು ಸ್ಥಳೀಯರು ಘಟನಾ ಸ್ಥಳದಿಂದ ಗಾಯಾಳುಗಳನ್ನು ಸಾಗಿಸಲು ನೆರವಾದರು.ಬೆಂಕಿ ತಗುಲಿಕೊಂಡ ಬೈಕಿನಿಂದ, ಸುಮಂತ ಹರಿಕಂತ್ರ ಈತನನ್ನು ಬಚಾವ್ ಮಾಡಲು ಸ್ಥಳೀಯರು ಹಾಗೂ ಪೊಲೀಸರು ಮತ್ತಿತರರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಹೊತ್ತಿಗಾಗಲೇ ಆತ ಸುಟ್ಟು ಕರಕಲಾಗಿದ್ದು,ಸಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ತಮ್ಮ ರಕ್ಷಕ ಅಂಬುಲೆನ್ಸ್ ವಾಹನದ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಲು ಸಹಕರಿಸಿದರು. ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಶ್ರೀಕಾಂತ ತೋಟಗಿ, ಸಂಚಾರಿ ವಿಭಾಗದ ಪಿ ಎಸ್ ಐ ಸುನೀಲ ಹುಲ್ಲೊಳ್ಳಿ, ಪಿ ಎಸ್ ಐ ಉದ್ದಪ್ಪ ಮತ್ತು ಸಿಬ್ಬಂದಿಗಳು ಹಾಗೂ 112 ತುರ್ತು ವಾಹನ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ.ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ, ಅಂಕೋಲ