ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ

ಮುರುಡೇಶ್ವರ: ವಿಶ್ವಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಮುರುಡೇಶ್ವರದ ಆರ್. ಎನ್. ಎಸ್ ಗಾಲ್ಫ್ ಕ್ಲಬ್ ರೆಸಾರ್ಟ್ ನಲ್ಲಿ ನವೆಂಬರ್ 21 ರಿಂದ 23 ರವರೆಗೆ ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಮೀನುಗಾರಿಕಾ ಇಲಾಖೆ ಹಮ್ಮಿಕೊಂಡಿರುವ ಮತ್ಸ್ಯ ಮೇಳ 2024 ಕಾರ್ಯಕ್ರಮವು ಅತ್ಯಂತ ಅದ್ಧೂರಿಯಾಗಿ ಆಚರಣೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಬೇಕಾದ ತಯಾರಿ ಕೆಲಸಗಳು ಭರದಿಂದ ಸಾಗುತ್ತಿದೆ.

ಈ ಕಾರ್ಯಕ್ರಮ ಉತ್ತರ ಕನ್ನಡ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು ಅಂದರೂ ತಪ್ಪಾಗಲಾರದು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಬೆಂಗಳೂರು ಅಥವಾ ಇನ್ನಿತರ ಮಹಾನಗರಗಳ ಕೇಂದ್ರಿಕೃತವಾಗಿ ನಡೆಯುತ್ತದೆ. ಆದರೆ ಇಲ್ಲಿಯ ಶಾಸಕರು, ಮೀನುಗಾರಿಗೆ ಹಾಗೂ ಬಂದರು ಒಳನಾಡು ಜಲಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಗಿರುವ ಮಂಕಾಳ ವೈದ್ಯರ ವಿಶೇಷ ಆಸಕ್ತಿಯಿಂದ ಇಂತಹದ್ದೊಂದು ಐತಿಹಾಸಿಕ ಕಾರ್ಯಕ್ರಮ ಈ ಭಾಗದಲ್ಲಿ ನಡೆಯುತ್ತಿದ್ದು ಹಾಗಾದರೆ ಕಾರ್ಯಕ್ರಮದ ವಿಶೇಷತೆಗಳ ಬಗ್ಗೆ ಗಮನ ಹರಿಸೋಣ ಬನ್ನಿ.

ನವೆಂಬರ 21 ರ ಸಂಜೆ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲ್ಲಿದ್ದು , ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನ ಸಭಾ ಸಭಾಪತಿ ಯು.ಟಿ ಖಾದರ್ ಸೇರಿದಂತೆ ಸಚಿವ ಮಂಕಾಳ ಎಸ್ ವೈದ್ಯ ಹಾಗೂ ಇಲಾಖಾ ಪ್ರಮುಖರ ಉಪಸ್ಥಿತಿ ಇರಲಿದೆ.

ಅಲಂಕಾರಿಕ ಮೀನುಗಳ ಗ್ಯಾಲರಿ, ಟನಲ್ ಅಕ್ವೇರಿಯಂ, 100 ಕ್ಕಿಂತ ಹೆಚ್ಚಿನ ಸ್ಥಳೀಯ ಮತ್ತು ಹೊರದೇಶದ ಮೀನುಗಳು, 500 ಹೆಚ್ಚಿನ ಸಮುದ್ರ ಚಿಪ್ಪುಗಳು, ವಿವಿಧ ಮೀನುಕೃಷಿಯ ತಂತ್ರಜ್ಞಾನದ ಕುರಿತ ಮಾಹಿತಿ, ವಿವಿಧ ರುಚಿಕರ ಮೀನು ಖಾಧ್ಯದ ಆಹಾರ ಮಳಿಗೆ ಆಯಾ ದಿನ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ಸ್ಯಮೇಳದ ಪ್ರಮುಖ ಆಕರ್ಷಣೆಯಾಗಿರಲಿದೆ.

ಒಟ್ಟಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಕಾರ್ಯಕ್ರಮವೊಂದು ಸಮುದ್ರ ತೀರದಲ್ಲೇ ನಡೆಯುತ್ತಿರುವ ಸಲುವಾಗಿ, ಇದಕ್ಕೆ ಸಂಬಂಧಪಟ್ಟ ತಂತ್ರಜ್ಞಾನ, ಅನ್ವೇಷಣೆ, ಆವಿಷ್ಕಾರಗಳನ್ನು ಕಡಲ ಮಕ್ಕಳು ಸ್ವತಃ ಕಂಡುಕೊಂಡು ತಮ್ಮ ಕಸುಬಿನಲ್ಲಿ ಅಳವಡಿಸಿಕೊಳ್ಳುವ ಅವಕಾಶಗಳು ದೊರೆತಿದ್ದು. ಕಾರ್ಯಕ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Exit mobile version