ಕುಕ್ಕರಿನಲ್ಲಿ ನೀರು ಕಾಯಿಸಿ ಗಂಡನ ಮೇಲೆಯೇ ಸುರಿದ ಮಹಿಳೆ: ದೂರಿನಲ್ಲಿ ಏನಿದೆ?

ಅಂಕೋಲಾ : ತಾಲೂಕಿನ ಬಾಳೇಗುಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಂಡ -ಹೆಂಡತಿ ನಡುವಿನ ಸಂಸಾರಿಕ ಹೊಂದಾಣಿಕೆ ಕೊರತೆ ಅತಿರೇಕಕ್ಕೆ ಹೋದಂತಿದ್ದು , ಪತ್ನಿ ತನ್ನ ಪತಿಯ ಮೈಮೇಲೆ ಬಿಸಿ ನೀರು ಎರಚಿ ಗಾಯಗೊಳಿಸಿರುವ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಷ್ಣು ಬುದ್ದು ಗೌಡ (45) ಗಾಯಗೊಂಡವರು. ಇವರ ಪತ್ನಿ ಲಲಿತಾ ಗೌಡ ಅಮಾನುಷ ಕೃತ್ಯ ಎಸಗಿದ ಆರೋಪಿಯಾಗಿದ್ದಾರೆ. ವಿಷ್ಣು ಗೌಡರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಕುತ್ತಿಗೆ, ಎದೆ ಭಾಗ, ಬೆನ್ನು, ಕೈ ಕಾಲುಗಳಿಗೆ ಗಾಯಗಳಾಗಿವೆ. ವಿಷ್ಣು ಗೌಡ ಅವರ ಹೆಂಡತಿ ಲಲಿತಾ ಎಂಬಾಕೆ ಅಕ್ಟೋಬರ್ 15 ರಂದು ರಾತ್ರಿ ಗಂಡನ ಮೇಲೆ ಕೋಪದಿಂದ ಗ್ಯಾಸ್ ಒಲೆಯ ಮೇಲೆ ಕುಕ್ಕರಿನಲ್ಲಿ ನೀರು ಕಾಯಿಸಿ ಗಂಡನ ಮೈಮೇಲೆ ಸುರಿದಿರುವುದಾಗಿ ಪೊಲೀಸ ದೂರಿನಲ್ಲಿ ತಿಳಿಸಲಾಗಿದೆ.

ಗಂಡ ವಿಷ್ಣು ಗೌಡ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಲಲಿತಾ ಗೌಡ ಈ ಕೃತ್ಯ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು , ಜೀವ ಬೆದರಿಕೆ ಹಾಕಿ ಹೋಗಿದ್ದಾಳೆ ಎಂದು ಗಾಯಾಳು ವಿಷ್ಣು ಗೌಡ ಅವರ ಸಹೋದರ ಗಣಪತಿ ಗೌಡ ಪೊಲೀಸ್ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುವಿಗೆ ಅಂಕೋಲಾ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version