ಅಂಕೋಲಾ: ತಾಲೂಕಿನ ಹಿಲ್ಲೂರು ಗ್ರಾಮ ಪಂಚಾಯತ ವ್ಯಾಪ್ತಿಯ ತಿಂಗಳಬೈಲ್ ಗ್ರಾಮದ ಕೃಷಿಕನೊಬ್ಬರ ಮನೆಯ ತೋಟದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಕಂಡು ಕೂಲಿಯಾಳುಗಳು ಕ್ಷಣಕಾಲ ಗಾಬರಿಗೊಂಡು , ತೋಟದ ಮಾಲಕರಿಗೆ ವಿಷಯ ತಿಳಿಸಿದ್ದಾರೆ. ತೋಟದ ಮಾಲಕರು ಸ್ಥಳೀಯ ಅರಣ್ಯ ಇಲಾಖೆಗೆ ಈ ಕುರಿ ಮಾಹಿತಿ ನೀಡಿ ಕಾಳಿಂಗ ಸರ್ಪವನ್ನು ಸೆರೆಹಿಡಿದು ತಮ್ಮ ಆತಂಕ ದೂರ ಮಾಡುವಂತೆ ಕೋರಿಕೊಂಡಿದ್ದಾರೆ. ಅರಣ್ಯ ಇಲಾಖೆಯವರು ಈ ವಿಷಯವನ್ನು ಉರಗ ಸಂರಕ್ಷಕ ಅವರ್ಸಾದ ಮಹೇಶ್ ನಾಯ್ಕರವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಮಹೇಶ್ ನಾಯ್ಕ್ ಮತ್ತು ತಂಡ ಕಾಳಿಂಗ ಸರ್ಪ ಹಿಡಿಯಲು ಕಾರ್ಯಾಚರಣೆಗೆ ಇಳಿದಿದ್ದಾರೆ.
ಏರು ತಗ್ಗಿನ ಮತ್ತು ಬೆಳೆದ ಹುಲ್ಲಿನ ಜಾಗದಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವುದು ಸುಲಭದ ಮಾತಾಗಿರಲಿಲ್ಲ. ಆದರೂ ಈ ತಂಡ ತಾಸುಗಟ್ಟಲೆ ಕಾರ್ಯಾಚರಣೆ ನಡೆಸಿ , ಸಾಹಸ ಮೆರೆದು ಸುಮಾರು 14 ಅಡಿ ಉದ್ದದ ಬೃಹತ್ತ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿ ಸ್ಥಳೀಯರ ಆತಂಕ ದೂರಮಾಡಿದ್ದಾರೆ.
ಅರಣ್ಯಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಉರಗ ಸಂರಕ್ಷಕರಾದ ಮಹೇಶ ನಾಯ್ಕ ಹಾಗು ಅವರ ಮಗ ಗಗನ ಮಹೇಶ ನಾಯ್ಕ, ಮತ್ತು ತಂಡದ ಸಹಾಯಕ ಸ್ಯಾಮ್ಯುವೆಲ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಹಾಗೂ ಸ್ಥಳೀಯರ ಸಹಕಾರದಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಈ ಬೃಹತ್ ಕಾಳಿಂಗ ಸರ್ಪವನ್ನು ಮಹೇಶ ನಾಯ್ಕ ಮತ್ತು ತಂಡದವರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು ,ಅರಣ್ಯ ಇಲಾಖೆಯವರು ಅದನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ