ಶಿರಸಿ: ಪ್ರಧಾನಿ ನರೇಂದ್ರ ಮೋದಿ ಶಿರಸಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನಲ್ಲೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪೂರ್ವ ಸಿದ್ಧತೆಯನ್ನು ವಿಕ್ಷೀಸಿದರು. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಶಿರಸಿಗೆ ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿಯವರ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸ್ವತಃ ಕಾಗೇರಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ತಯಾರಿಯ ಕುರಿತು ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಕಾಗೇರಿ, ನರೇಂದ್ರ ಮೋದಿಯವರು 2008ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಶಿರಸಿಗೆ ಆಗಮಿಸಿದ್ದರು. ವಿಕಾಸಾಶ್ರಮ ಬೈಲಿನಲ್ಲಿ ಅವರು ಸಾರ್ವಜನಿಕ ಸಭೆ ನಡೆಸಿದ್ದರು. ಶಿರಸಿ ಸಿದ್ದಾಪುರಕ್ಕೆ ಮೊದಲ ಬಾರಿ ನಿಂತಾಗ ಅವರು ಆಗಮಿಸಿ ನನಗಾಗಿ ಮತ ಯಾಚಿಸಿದ್ದರು. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಮೋದಿಯವರು ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಿದ್ದರು. ಶಿರಸಿಯ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಬರುತ್ತಿರುವುದು ಮೊದಲ ಬಾರಿಯಾಗಿದೆ ಎಂದ ಕಾಗೇರಿ, ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಸಲು ಇಂದು ನಮಗೆ ಅನುಮತಿ ಲಭಿಸಿದೆ. ಒಂದೆರಡು ದಿನದಲ್ಲಿ ಪಾರ್ಕಿಂಗ್ ಸೇರಿದಂತೆ ಎಲ್ಲವೂ ಸ್ಪಷ್ಟ ಚಿತ್ರಣ ನೀಡಲಿದ್ದೇವೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕರ್ತರ 25 ತಂಡಗಳನ್ನು ರಚಿಸಿ ಬೇರೆ ಬೇರೆ ಜವಾಬ್ದಾರಿಗಳನ್ನು ಅವರಿಗೆ ವಹಿಸಿದ್ದೇವೆ. ಒಂದು ಲಕ್ಷಕ್ಕೂ ಮೀರಿ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು. ಬಿಜೆಪಿ ಪ್ರಮುಖರಾದ ಸದಾನಂದ ಭಟ್, ಆನಂದ ಸಾಲೇರ, ಗುರುಪ್ರಸಾದ ಹೆಗಡೆ, ಶ್ರೀನಿವಾಸ ಹೆಬ್ಬಾರ್, ಸುರೇಶ್ಚಂದ್ರ ಹೆಗಡೆ, ಗಣಪತಿ ನಾಯ್ಕ, ನಂದನ ಸಾಗರ, ಗಣೇಶ ಪ್ರಭು, ಕುಮಾರ ಬೋರ್ಕರ್ ಇತರರಿದ್ದರು. ಶ್ರೀನಿವಾಸ ಹೆಬ್ಬಾರ್ ಸಹ ಭೇಟಿ ನೀಡಿದರು.
ವಿಸ್ಮಯ ನ್ಯೂಸ್, ಶಿರಸಿ