ದೇವರ ಕೋಣೆಯಲ್ಲಿ ಅವಿತುಕೊಂಡ ಚಿರತೆ: ಜೀವಭಯದಲ್ಲೇ ಕಾಲಕಳೆಯುತ್ತಿರುವ ಪಕ್ಕದ ಕೋಣೆಯಲ್ಲಿರುವ ನಾಲ್ವರು: ಓರ್ವನ ಮೇಲೆ ದಾಳಿ
ಕುಮಟಾ: ಮನೆಗೆ ಹಾಡುಹಗಲೇ ನುಗ್ಗಿದ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿದ ಘಟನೆ ತಲೂಕಿನ ಬಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲದೆ, ಹಲವು ಮನೆಗಳಿಗೆ ನುಗ್ಗಿ ಆತಂಕ ಮೂಡಿಸಿದೆ ಚಿರತೆ. ಇದೀಗ ಚಿರತೆಯು ಮನೆಯೊಳಗೆ ಅವಿತುಕೊಂಡಿದೆ. ಆದರೆ, ಚಿರತೆ ಅವಿತುಕೊಂಡಿರುವ ಮನೆಯ ಇನ್ನೆರಡು ಕೋಣೆಯಲ್ಲಿ ನಾಲ್ವರು ಇದ್ದು, ಅವರು ಬಾಗಿಲುಹಾಕಿಕೊಂಡಿದ್ದು, ಜೀವ ಭಯದಲ್ಲೇ ಕಾಲಕಳೆಯುವಂತಾಗಿದೆ. ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ದೇವರಕೋಣೆಯ ಕೆಳಗಡೆ ಚಿರತೆ ಅವಿತುಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನೂ ಚಿರತೆ ಕಾಣಿಸಿಕೊಂಡಿರುವುದುರಿoದ ಯಾರು ಕೂಡ ಮನೆಯಿಂದ ಹೊರಗಡೆ ಬಾರದಂತೆ ಗ್ರಾಮ ಪಂಚಾಯತದಿoದ ಎಚ್ಚರಿಕೆ ನೀಡಲಾಗಿದೆ.ಇನ್ನೂ ಚಿರತೆ ದಾಳಿ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾಬಲೇಶ್ವರ ಬೀರಪ್ಪ ನಾಯ್ಕ(55) ವರ್ಷ ಎಂಬುವವರೆ ಗಾಯಗೊಂಡ ವ್ಯಕ್ತಿ. ಚಿರತೆ ದಾಳಿಗೆ ಒಳಗಾದ ಇವರನ್ನ ತಕ್ಷಣ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ರಸ್ತೆಯಲ್ಲಿ ಚಿರತೆ ಓಡಾಡಿದ್ದರಿಂದ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆ ಪ್ರತ್ಯಕ್ಷವಾಗಿರುವುದರಿಂದ ಬಾಡ ಸುತ್ತಮುತ್ತಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಇನ್ನೊಂದೆಡೆ, ಅರಣ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಂಡಿದ್ದು, ಚಿರತೆ ಸೆರೆಹಿಡಿಯುವಲ್ಲಿ ಕಾರ್ಯನಿರತವಾಗಿದೆ. ಆದರೆ, ಇತ್ತಿಚಿನ ದಿನಗಳಲ್ಲಿ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ ಹೆಚ್ಚಿದ್ದು, ಸಾರ್ವಜನಿಕರು ಆತಂಕ ಪಡುವಂತಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್