Big News
Trending

ಗಾಂವಕರ ಮೆಮೋರಿಯಲ್ ಪೌಂಡೇಶನ್ 12ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ : ಮೇ 12 ರಂದು ಯುವ ಪ್ರತಿಭಾ ಪುರಸ್ಕಾರ

ಅಂಕೋಲಾದ ಸ್ವಾತಂತ್ರ‍್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಆಯೋಜನೆ

ಅಂಕೋಲಾ: ಗಾಂವಕರ ಮೆಮೋರಿಯಲ್ ಪೌಂಡೇಶನ್ ನ 12 ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಅಂಕೋಲಾ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಸಾಧನಾ ವೇದಿಕೆಯಲ್ಲಿ ಮೇ 12 ರ ರವಿವಾರ ಸಂಜೆ ಆಯೋಜಿಸಲಾಗುತ್ತಿದ್ದು,ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯವಿದೆ ಎಂದು ಗಾಂವಕರ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ ದೇವಾನಂದ ಬಿ ಗಾಂವಕರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಬಹುಮುಖಿ ವ್ಯಕ್ತಿತ್ವದ ಸ್ವಾತಂತ್ರ್ಯ ಯೋಧ ಬೊಮ್ಮಯ್ಯ ರಾಕು ಗಾಂವಕರ ಮತ್ತು ಅವರ ಧರ್ಮಪತ್ನಿ ಪಾರ್ವತಿ ಗಾಂವಕರ ಹಾಗೂ ಗಾಂವಕರ ಕುಟುಂಬದ ಹಿರಿಯರ ಸ್ಮರಣಾರ್ಥ, ಕುಟುಂಬದವವರು ಆರಂಭಿಸಿರುವ ಗಾಂವಕರ ಮೆಮೋರಿಯಲ್ ಪೌಂಡೇಶನ್ ಬಾಸಗೋಡ 12ನೇ ವರ್ಷಕ್ಕೆ ಕಾಲಿಡುತ್ತಿದ್ದು, 2024ರ ಮೇ 12 ರಂದು ಯುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಗಾಂವಕರ ಫೌಂಡೇಶನ್ ಅಧ್ಯಕ್ಷ ಬಾಸಗೋಡ ದೇವಾನಂದ ಗಾಂವಕರ ಮಾತನಾಡಿ ಕಳೆದ 11 ವರ್ಷಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ನಾನಾ ಸಮುದಾಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ 102 ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಗಿದ್ದು ಈ ಬಾರಿಯೂ ಜಿಲ್ಲೆಯ ನಾನಾ ತಾಲೂಕುಗಳಿಂದ ಸ್ಮರಣಶಕ್ತಿ, ಯಕ್ಷಗಾನ, ಕುಸ್ತಿ, ಕ್ರೀಡೆ, ಪರ್ವತಾರೋಹಣ, ಸಾಹಿತ್ಯ, ಈಜು, ಸೃಜನ ಶೀಲತೆ, ಫ್ಯಾಶನ್, ಕೃಷಿ ಕ್ಷೇತ್ರ ಸೇರಿ ಒಟ್ಟಾರೆ 10 ಯುವ ಪ್ರತಿಭೆಗಳಿಗೆ ಪುರಸ್ಕರಿಸಲಾಗುತ್ತಿದೆ.

ವಿಶ್ವದ ಮೊದಲ ಮಹಿಳಾ ರುದ್ರ ವೀಣಾ ವಾದಕಿ, ವಿದುಷಿ ಜ್ಯೋತಿ ಹೆಗಡೆ ಶಿರಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರಾವಳಿ ಮುಂಜಾವು ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥರಾದ ಸೋಮಶೇಖರ ವಿಶ್ವನಾಥ್ ದೇಸಾಯಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಈ ಹಿಂದೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾಗಿ ಉತ್ತಮ ಸೇವೆ ಸಲ್ಲಿಸಿ ಹೆಸರಾಗಿರುವ ಮತ್ತು ಬೆಂಗಳೂರಿನಲ್ಲಿ ಇಲಾಖೆಯ ಆಡಳಿತ ವಿಭಾಗದ ಅಸಿಸ್ಟೆಂಟ್ ಇನ್ ಸ್ಪೆಕ್ಟರ್ ಜನರಲ್ ಅಪ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಮನ್ ಡಿ ಪೆನ್ನೇಕರ್ ಇವರು ಯುವ ಜನಾಂಗ – ಭವಿಷ್ಯದ ಭಾರತದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು, ಅದೇ ವೇದಿಕೆಯಲ್ಲಿ ಡಾ ಸುಮನ್ ಪೆನ್ನೇಕರ ಅವರಿಗೆ ಸಂಘಟನೆ ಪರವಾಗಿ ಗೌರವಾರ್ಪಣೆ ಸಲ್ಲಿಸಲಾಗುತ್ತದೆ, ಅಲ್ಲದೇ ವಿವಿಧ ಪ್ರತಿಭೆಗಳಿಂದ ಯಕ್ಷ ನೃತ್ಯ, ಗಾಯನ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದ್ದು ಸರ್ವರೂ ಬಂದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು.

ಸಂಘಟನೆಯ ಪ್ರಮುಖರಾದ ಕವಯತ್ರಿ ಅಕ್ಷತಾ ಕೃಷ್ಣ ಮೂರ್ತಿ ಮಾತನಾಡಿ, ಈ ಕಾರ್ಯಕ್ರಮ ಹಲವು ವಿಶೇಷ ತೆಗಳೊಂದಿಗೆ ಕೂಡಿರಲಿದ್ದು , ಅದರಲ್ಲಿ ಪುಸ್ತಕ ಕೊಡುಗೆಯೂ ಒಂದಾಗಿದೆ ಎಂದು ವಿವರಣೆ ನೀಡಿದರು. ಸಂಘಟನೆಯ ಪ್ರಮುಖರಾದ ಗಣಪತಿ ನಾಯಕ,ರಘುವೀರ ಗಾಂವಕರ, ಮುಕುಂದ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಂತೇಶ ರೇವಡಿ ಸಂಘಟನೆಯ ಬಗ್ಗೆ ಮಾತನಾಡಿದರು.ಗೋಪಾಲ ಆರ್ ನಾಯಕ ಬಾಸಗೋಡ ವಂದಿಸಿದರು. ಗಾಂವಕರ ಕುಟುಂಬ ಸದಸ್ಯರು, ಲಾಯನ್ಸ್ ಕ್ಲಬ್ ಪದಾಧಿಕಾರಿಗಳು, ಗಾಂವಕರ ಫೌಂಡೇಶನ್ ನ ಹಿರಿ -ಕಿರಿಯ ಪದಾಧಿಕಾರಿಗಳು ಮತ್ತು ಸದಸ್ಯರು, ದೇವಾನಂದ ಗಾಂವಕರ ಅವರ ಆಪ್ತರು, ಹಿತೈಷಿಗಳಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button