Important
Trending

ಹವಾಮಾನ ವೈಪರೀತ್ಯ: ಸಂಕಷ್ಟದಲ್ಲಿ ಮೀನುಗಾರರು

ಕಾರವಾರ: ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮೀನುಗಾರಿಕೆಯ ನಿಷೇಧದ ಅವಧಿಯ ಮುನ್ನವೇ ಮತ್ಸ್ಯೋದ್ಯಮ ಸ್ಥಗಿತಗೊಳ್ಳುವಂತಾಗಿದ್ದು, ಮೀನುಗಾರಿಕೆಯನ್ನೇ ನಂಬಿಕೊoಡಿದ್ದ ಮೀನುಗಾರರು ಇದೀಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಇದರಿಂದಾಗಿ ಮೀನುಗಾರಿಕೆಗೆ ತೆರಳಿದ ಬೋಟ್ ಗಳು ಮೀನುಗಾರಿಕೆಯನ್ನು ನಡೆಸಲಾಗದೆ ಬಂದರುಗಳಿಗೆ ವಾಪಸ್ಸಾಗಿ ಲಂಗರು ಹಾಕುವಂತಾಗಿದೆ. ಕಾರವಾರದ ಬೈತಕೋಲ್ ಬಂದರಿನಲ್ಲಿ ಅವಧಿಯ ಮುನ್ನವೇ ಮೀನುಗಾರಿಕೆಯನ್ನು ಬಂದ್ ಮಾಡಲಾಗಿದ್ದು, ಮೀನುಗಾರರು ಕೆಲಸವಿಲ್ಲದೇ ಕಾಲಿ ಕುಳಿತಿರುವ ದೃಶ್ಯ ಕಂಡು ಬರುತ್ತಿದೆ. ಈಗಾಗಲೇ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯು ಆರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಬೋಟ್‌ಗಳು ದಡ ಸೇರಿವೆ. ಈ ಹಿಂದೆ ಮುಂಗಾರಿನಲ್ಲಿ ಸುರಿದ ಮಳೆಯಿಂದಾಗಿ ಹೆಚ್ಚಿನ ಮೀನಿನ ಭೇಟೆಯ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಅರಬ್ಬಿ ಸಮುದ್ರದಲ್ಲಿ ಬೀಸಿದ ಹಲವು ಚಂಡಮಾರುತಗಳಿoದಾಗಿ ಮೀನುಗಾರಿಕೆಗೆ ಭಾರೀ ಹಿನ್ನಡೆ ಉಂಟಾಗಿತ್ತು. ಅಲ್ಲದೇ ಲೈಟ್ ಫಿಶಿಂಗ್ ಹಾಗೂ ಅವೈಜ್ಞಾನಿಕ ಮೀನುಗಾರಿಕೆಯಿಂದಾಗಿ ಉಳಿದ ಮೀನುಗಾರರು ಬರಿಗೈಲಿ ವಾಪಸ್ಸಾಗುವಂತಾಗಿತ್ತು. ಇದಲ್ಲದೇ ಮೀನುಗಾರಿಕೆ ನಂಬಿ ಬಂದoತಹ ಹೊರ ರಾಜ್ಯದ ಕಾರ್ಮಿಕರೂ ಸಹ ಮೀನುಗಾರಿಕೆಯ ನಿಷೇಧದ ಹಿನ್ನಲೆಯಲ್ಲಿ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಅವಧಿಗೂ ಮುನ್ನವೇ ಮೀನುಗಾರಿಕೆ ಸ್ಥಗಿತವಾಗಿರುವುದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬ್ಯುರೋ ರಿಪೋರ್ಟ್ ವಿಸ್ಮಯ ನ್ಯೂಸ್…

Back to top button