ಹೊನ್ನಾವರ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅನ್ನೋದು ಉತ್ತರ ಕನ್ನಡ ಜಿಲ್ಲೆಯ ಜನರು ದೊಡ್ಡ ಕನಸ್ಸು. ಪ್ರತಿ ಚುನಾವಣೆಯಲ್ಲಿ ಇದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅನ್ನುವುದು ಚುನಾವಣೆಯ ವಿಷಯ ವಸ್ತು . ಆದರೆ, ಚುನಾವಣೆ ಮುಗಿದ ಮೇಲೆ ಯಾರು ಸ್ಪಂದಿಸುತ್ತಿಲ್ಲ. ಇದೀಗ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಬಂಗಾರಮಕ್ಕಿ ಮಹಾಸಂಸ್ಥಾನದ ಮಾರುತಿ ಗೂರೂಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನ ಜಿಲ್ಲೆಯಲ್ಲಿ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯ ಹೊನ್ನಾವರದ ಅಳ್ಳಂಕಿ ಗ್ರಾಮದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತಿದ್ದು , ಸುಮಾರು 5 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ಮುಂದಾದ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಜನರು ಏನಾದರು ಅಪಘಾತ ಇನ್ನಿತರ ಗಂಭೀರ ಪರಿಸ್ಥಿತಿಯಲ್ಲಿ ನೆರೆಯ ಉಡುಪಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಗೋವಾದಲ್ಲಿನ ಆಸ್ಪತ್ರೆಗೆ ತೆರಳಬೇಕು. ರಸ್ತೆ ಮಧ್ಯದಲ್ಲಿಯೇ ಹಲವರು ಪ್ರಾಣ ಬಿಟ್ಟಿದ್ದು ಜನರ ಹೋರಾಟಕ್ಕೆ ಯಾರು ಸ್ಪಂಧಿಸಿರಲಿಲ್ಲ.
ಸದ್ಯ ಬಂಗಾರಮಕ್ಕಿ ಮಹಾಸಂಸ್ಥಾನದ ವತಿಯಿಂದ ಬೆಂಗಳೂರಿನ ಪ್ರಸಿದ್ದ ಸುದೀಕ್ಷ ಹೆಲ್ತ್ ಕೇರ್ ಪ್ರೈವೇಟ್ ಲಿ. ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ಸುಮಾರು 150 ಬೆಡ್ ನ ಆಸ್ಪತ್ರೆ ನಿರ್ಮಿಸಿ ನಂತರ ಹಂತ ಹಂತವಾಗಿ ಮೆಡಿಕಲ್ ಕಾಲೇಜು ನಿರ್ಮಿಸುವ ಮೂಲಕ 3 ಸಾವಿರ ಬೆಡ್ ಆಸ್ಪತ್ರೆ, ಏರ್ ಅಂಬ್ಯುಲೆನ್ಸ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆ ಕೊಡಲು ಚಿಂತನೆ ನಡೆಸಲಾಗಿದೆ.
ಸದ್ಯ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿದ್ದು ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಎರಡು ವರ್ಷದಲ್ಲಿ ಆಸ್ಪತ್ರೆ ಸೇವೆ ಪ್ರಾರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನು ಜಿಲ್ಲೆಯ ಜನರು ಬೇರೆ ಜಿಲ್ಲೆ,ರಾಜ್ಯಕ್ಕೆ ಆಸ್ಪತ್ರೆಗಾಗಿ ಅಲೆದಾಡುವ ಬದಲು ಜಿಲ್ಲೆಯಲ್ಲಿಯೇ ಎಲ್ಲಾ ಸೇವೆ ಸಿಗುವ ಮೂಲಕ ಜನರಿಗೆ ಸಹಾಯ ಮಾಡಬೇಕು ಎನ್ನುವುದು ಬಂಗಾರಮಕ್ಕಿ ಮಹಾಸಂಸ್ಥಾನದ ಚಿಂತನೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ಕಾರವಾರ