Focus News
Trending

ವಿವಿಧ ಕ್ಷೇತ್ರದ 102 ಯುವ ಪ್ರತಿಭೆಗಳಿಗೆ ಗೌರವ: ಮೇ 12 ರಂದು ಅರ್ಥಪೂರ್ಣ ಕಾರ್ಯಕ್ರಮ

ಅಂಕೋಲಾ: ಕಳೆದ 11 ವರ್ಷಗಳಲ್ಲಿ,ಜಿಲ್ಲೆಯ ಬೇರೆ ಬೇರೆ ತಾಲೂಕುಗಳ, ನಾನಾ ಸಮುದಾಯದ, ವಿವಿಧ ಕ್ಷೇತ್ರದ ಒಟ್ಟೂ 102 ಯುವ ಪ್ರತಿಭೆಗಳನ್ನು ಗುರುತಿಸಿ,ಗೌರವಿಸಿರುವ, ನಾಡಿನ ಪ್ರತಿಷ್ಠಿತ ಗಾಂವಕರ ಮೆಮೋರಿಯಲ್ ಪೌಂಡೇಶನ್, ತನ್ನ 12 ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಮೇ 12 ರ ರವಿವಾರ ಅಂಕೋಲಾದಲ್ಲಿ ಹಮ್ಮಿಕೊಂಡಿದ್ದು, ಮತ್ತೆ ಜಿಲ್ಲೆಯ ಹತ್ತು ಯುವ ಸಾಧಕರನ್ನು ಗುರುತಿಸಿ ಗೌರವಿಸಲಿದೆ ಬಹುಮುಖಿ ವ್ಯಕ್ತಿತ್ವದ ಸ್ವಾತಂತ್ರ್ಯ ಯೋಧ ಬೊಮ್ಮಯ್ಯ ರಾಕು ಗಾಂವಕರ ಮತ್ತು ಅವರ ಧರ್ಮಪತ್ನಿ ಪಾರ್ವತಿ ಗಾಂವಕರ ಹಾಗೂ ಗಾಂವಕರ ಕುಟುಂಬದ ಹಿರಿಯರ ಸ್ಮರಣಾರ್ಥ, ಅವರ ಕುಟುಂಬದವವರು ಆರಂಭಿಸಿರುವ ಗಾಂವಕರ ಮೆಮೋರಿಯಲ್ ಪೌಂಡೇಶನ್ ಬಾಸಗೋಡ, 12ನೇ ವರ್ಷಕ್ಕೆ ಕಾಲಿಡುತ್ತಿದ್ದು, ಮೇ 12 ರ ರವಿವಾರದಂದು ಸಾಯಂಕಾಲ ಅಂಕೋಲಾ ಪಟ್ಟಣದ ಸ್ವಾತಂತ್ರ್ಯ ಸ್ಮಾರಕ ಭವನದ ಸಾಧನಾ ವೇದಿಕೆಯಲ್ಲಿ, ಯುವ ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಳೆದ 11 ವರ್ಷಗಳಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ನಾನಾ ಸಮುದಾಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಒಟ್ಟೂ 102 ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಗಿದ್ದು ಈ ಬಾರಿಯೂ ಮತ್ತೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಒಟ್ಟೂ 10 ಯುವ ಸಾಧಕರನ್ನು ಗುರುತಿಸಲಾಗಿದ್ದು, ಟ್ಯಾಲೆಂಟೆಡ್ ಕಿಡ್ ಎಂದು ಗುರುತಿಸಿಕೊಂಡ ವಿಶ್ವ ದಾಖಲೆಯ ಪುಟಾಣಿ,ಕಾರವಾರ ಮೂಲದ ಶುಭಂ ಓಂಕಾರ ಅಣ್ವೇಕರ ಅವರನ್ನು ಸ್ಮರಣಶಕ್ತಿಗಾಗಿ,ತೆಂಕುತಿಟ್ಟಿನ ಭಾಗವತಿಕೆ ಮತ್ತು ಪುರುಷ ಮತ್ತು ಸ್ತ್ರೀ ವೇಷಧಾರಿಯಾಗಿ ಯಕ್ಷ ರಂಗದಲ್ಲಿ ಮಿಂಚುತ್ತಿರುವ ಅಂಕೋಲಾ ಮೂಲದ ಶ್ರೀಶಾ ಶಿವಕುಮಾರ ಹಿಚ್ಕಡ,ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುವ ಹಳಿಯಾಳದ ಶ್ವೇತಾ ಸಂಜು ಅಣ್ಣಿಕೇರಿ, ವಿಕಲ ಚೇತನರ ಒಲಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ನಲ್ಲಿ ಎರಡು ಬಂಗಾರದ ಪದಕಗಳನ್ನು ಗೆದ್ದ ಕುಮಟಾದ ಸಂದೇಶ್ ಕೃಷ್ಣ ಹರಿಕಂತ್ರ,ಮೂಲ ಪರ್ವತಾರೋಹಣ ಶಿಬಿರ ಮುಗಿಸಿ ಹಿಮಾಲಯವನ್ನು ಏರುವ ಉತ್ಸಾಹದಲ್ಲಿರುವ ಜೋಯಿಡಾದ ಸೊನಾಲಿ ವೇಳಿಪ, ವಾಯ್ಸ್ ಆಫ್ ವುಮೆನ್ ಲೀಡರ್ ಎಂಬ ಕೃತಿ ರಚಿಸಿರುವ ಶಿರಸಿ ಮೂಲದ ಸ್ಪೂರ್ತಿ ನಾಯಕ, ಸಿಮ್ಮಿಂಗ್ ಸೆಂಚುರಿ ಸ್ಟಾರ ಎಂದೇ ಹೆಸರುವಾಸಿಯಾಗಿರುವ, ಬಹುಮುಖಿ ವ್ಯಕ್ತಿತ್ವದ ಸಿದ್ದಾರದ ಶಿಕ್ಷಕ ಶ್ಯಾಮ ಸುಂದರ, ಚಿನ್ನದ ಪ್ರತಿ ಕೃತಿರಚನೆ ಮೂಲಕ ವಿಶ್ವ ದಾಖಲೆ ಬರೆದಿರುವ ಹೊನ್ನಾವರದ ಪ್ರಸನ್ನ ಚಂದ್ರಕಾಂತ ಶೇಟ್, ಫ್ಯಾಶನ್ ಮತ್ತು ಸ್ಟೈಲಿಂಗ್ ನಲ್ಲಿ ಜೀವಮಾನ ಸಾಧನೆಗಾಗಿ ಸೀಸನ್ 9ರ ಇಂಟರ್ನ್ಯಾಷನಲ್ ಟೈಾನಿಕ್ ಅವಾರ್ಡ್ ಪಡೆದಿರುವ ಭಟ್ಕಳದ ಡಾ ಸಜೀಲಾ ಯಾಯ್ಯಾ ಕೋಲಾ, ಕೃಷಿ ವಿಶ್ವವಿದ್ಯಾಲಯದಿಂದ ಶ್ರೇಷ್ಠ ರೈತ ಪ್ರಶಸ್ತಿ ಪಡೆದ ಮುಂಡಗೋಡದ ಬಸವರಾಜ ಈರಯ್ಯ ನಡುವಿನ ಮನಿ ಇವರೂ ಸೇರಿ ಜಿಲ್ಲೆಯ ಒಟ್ಟಾರೆ 10 ಯುವ ಪ್ರತಿಭೆಗಳಿಗೆ ಪುರಸ್ಕರಿಸಲಾಗುತ್ತಿದೆ.

ವಿಶ್ವದ ಮೊದಲ ಮಹಿಳಾ ರುದ್ರ ವೀಣಾ ವಾದಕಿ, ವಿದುಷಿ ಜ್ಯೋತಿ ಹೆಗಡೆ ಶಿರಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲೆಯ ಹಿರಿಯ ಪರ್ತಕರ್ತ ಮತ್ತು ಪತ್ರಿಕಾ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥರಾದ ಸೋಮಶೇಖರ ವಿಶ್ವನಾಥ್ ದೇಸಾಯಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಬೆಂಗಳೂರಿನಲ್ಲಿ ಇಲಾಖೆಯ ಆಡಳಿತ ವಿಭಾಗದ ಅಸಿಸ್ಟೆಂಟ್ ಇನ್ ಸ್ಪೆಕ್ಟರ್ ಜನರಲ್ ಅಪ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಮನ್ ಡಿ ಪೆನ್ನೇಕರ್ ಇವರು ಯುವ ಜನಾಂಗ – ಭವಿಷ್ಯದ ಭಾರತದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದು, ಅದೇ ವೇದಿಕೆಯಲ್ಲಿ ಡಾ ಸುಮನ್ ಪೆನ್ನೇಕರ ಅವರಿಗೆ ಸಂಘಟನೆ ಪರವಾಗಿ ಗೌರವಾರ್ಪಣೆ ಸಲ್ಲಿಸಲಾಗುತ್ತದೆ, ಅಲ್ಲದೇ ವಿವಿಧ ಪ್ರತಿಭೆಗಳಿಂದ ಯಕ್ಷ ನೃತ್ಯ, ಗಾಯನ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದ್ದು ಸರ್ವರೂ ಬಂದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಬಾಸಗೋಡ ದೇವಾನಂದ ಗಾಂವಕರ ಮತ್ತು ಕುಟುಂಬ ವರ್ಗದವರು ಹಾಗೂ ಪೌಂಡೇಶನ್ ಪದಾಧಿಕಾರಿಗಳು ಮತ್ತು ಸದಸ್ಯರು ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button